ದಾವಣಗೆರೆ: ಭಾರಿ ಸದ್ದು ಮಾಡಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ (Karnataka Election 2023) ಬಿಜೆಪಿ ತನ್ನ ಅಭ್ಯರ್ಥಿಯನ್ನು ಬಿಟ್ಟು ಪಕ್ಷೇತರನಿಗೆ ಬೆಂಬಲ ನೀಡುತ್ತಿದೆಯಾ? ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಅಬ್ಬರ ಮತ್ತು ಬಿಜೆಪಿ ಈ ಕ್ಷೇತ್ರದ ಬಗ್ಗೆ ವ್ಯಕ್ತಪಡಿಸುತ್ತಿರುವ ನಿರ್ಲಕ್ಷ್ಯಗಳು ಈ ಸಂಶಯ ಸೃಷ್ಟಿಸಿದೆ.
ಚನ್ನಗಿರಿಯಲ್ಲಿ ಹಾಲಿ ಶಾಸಕರಾಗಿರುವ ಮಾಡಾಳು ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡು ಜೈಲು ಸೇರಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಬಾರಿ ಅವರ ಪುತ್ರ ಮಾಡಾಳು ಮಲ್ಲಿಕಾರ್ಜುನ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅಪ್ಪ ಸಿಕ್ಕಿಬಿದ್ದಿರುವುದರಿಂದ ಮಗನಿಗೆ ಟಿಕೆಟ್ ನೀಡುವುದು ಸರಿ ಅಲ್ಲ ಎಂಬ ಕಾರಣಕ್ಕೆ ಬಿಜೆಪಿ ಅವರಿಗೂ ಟಿಕೆಟ್ ಕೊಟ್ಟಿಲ್ಲ. ಬಿಜೆಪಿ ಇಲ್ಲಿ ಟಿಕೆಟ್ ಕೊಟ್ಟಿರುವುದು ಶಿವಕುಮಾರ್ ಅವರಿಗೆ. ಇಲ್ಲಿ ಮಾಡಾಳು ಪುತ್ರ ಮಲ್ಲಿಕಾರ್ಜುನ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಈ ನಡುವೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಪಕ್ಷೇತರ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಮಾಡಾಳ್ ಅವರದೇ ಅಬ್ಬರ ಜೋರಾಗಿದೆ. ಅವರು ದಿನವೂ ರ‍್ಯಾಲಿ ಮಾಡುತ್ತಿದ್ದಾರೆ. ಜನರೂ ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಇದಕ್ಕೆ ಹೋಲಿಸಿದರೆ ಶಿವಕುಮಾರ್ ಅವರ ಪ್ರಚಾರ ತುಂಬ ಡಲ್ ಆಗಿದೆ. ವಿಶೇಷವೆಂದರೆ ಇದುವರೆಗೂ ಚನ್ನಗಿರಿ ಕಡೆ ಬಿಜೆಪಿಯ ಯಾವುದೇ ರಾಜ್ಯ, ರಾಷ್ಟ್ರ ನಾಯಕರು ಮುಖ ಮಾಡಿಲ್ಲ. ದಾವಣಗೆರೆ ಜಿಲ್ಲೆಯ 7ರ ಪೈಕಿ 6 ಕ್ಷೇತ್ರಕ್ಕೂ ರಾಜ್ಯ, ರಾಷ್ಟ್ರ ನಾಯಕರ ಭೇಟಿ ನಡೆದಿದೆ. 6 ಕ್ಷೇತ್ರಗಳಿಗೆ ಅಮಿತ್ ಶಾ, ನಡ್ಡಾ, ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಸುದೀಪ್ ಸೇರಿದಂತೆ ವಿವಿಧ ನಾಯಕರು ಲಗ್ಗೆ ಇಟ್ಟಿದ್ದಾರೆ. ಆದರೆ, ಇದುವರೆಗೂ ಚನ್ನಗಿರಿ ಕ್ಷೇತ್ರಕ್ಕೆ ಇದುವರೆಗೂ ಒಬ್ಬೇ ಒಬ್ಬ ನಾಯಕನೂ ಬಂದಿಲ್ಲ. ಇದು ಪಕ್ಷ ತನ್ನ ಅಭ್ಯರ್ಥಿಯನ್ನು ಹರಕೆ ಕುರಿ ಮಾಡಿ ಪಕ್ಷೇತರನನ್ನು ಗೆಲ್ಲಿಸುವ ಪ್ರಯತ್ನದಲ್ಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಹಗರಣದಲ್ಲಿ ಜೈಲು ಸೇರಿದರೂ ಬಿಜೆಪಿ ಅವರ ಬಗ್ಗೆ ಇನ್ನೂ ಸಾಫ್ಟ್ ಕಾರ್ನರ್ ಹೊಂದಿರುವುದು ಸ್ಪಷ್ಟವಾಗಿದೆ. ಯಾಕೆಂದರೆ ಮಾಡಾಳ್ ಅವರನ್ನು ಆರಂಭದಲ್ಲಿ ರಕ್ಷಿಸಿದ ನಾಯಕರು ಬಳಿಕ ಅವರ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಳ್ಳದಂತೆ ತಡೆದಿದ್ದಾರೆ. ಇದೀಗ ಅವರ ಪುತ್ರನಿಗೆ ಬೆಂಬಲ ನೀಡುತ್ತಿರುವ ಸಾಧ್ಯತೆ ಕಂಡುಬಂದಿದೆ.
ನಿಜವೆಂದರೆ, ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್ ಗೆ ಗೆಲ್ಲುತ್ತಾರೆ ಎಂಬ ವರದಿ ಬಂದಿದೆ ಎನ್ನಲಾಗಿದೆ. ಹೀಗಾಗಿ ಸುಮ್ಮನೆ ಬಡಿದಾಡಿ ಮಲ್ಲಿಕಾರ್ಜುನ ಅವರನ್ನು ಸೋಲಿಸುವುದಕ್ಕಿಂತ ಆರಾಮವಾಗಿ ಅವರನ್ನೇ ಗೆಲ್ಲಿಸಿ ಬಳಿಕ ಪಕ್ಷಕ್ಕೆ ಸೇರಿಸಿಕೊಳ್ಳಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ ಎನ್ನಲಾಗಿದೆ. ಹೀಗಾಗಿಯೇ ಬಹಿರಂಗ ಸಭೆಗೆ ಇನ್ನು ಕೇವಲ ಐದು ದಿನ ಬಾಕಿ ಇದ್ದರೂ ಯಾವ ಬಿಜೆಪಿ ನಾಯಕರೂ ತಿರುಗಿ ನೋಡುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ : ಪ್ರೈಮ್ ಮಿನಿಸ್ಟರ್ ಆಗೋ ಯೋಚನೆ ಇಲ್ವಾ? ಎಂದ ಪ್ರಧಾನಿ! ಮಕ್ಕಳೊಂದಿಗೆ ನರೇಂದ್ರ ಮೋದಿ ಚಿಟ್‌ಚಾಟ್, ಇಲ್ಲಿದೆ ವಿಡಿಯೊ