ಮಂಡ್ಯ: ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಲು ಮುಂದಾದ್ರಾ? ಸಚಿವ ಕೆ.ಸಿ.ನಾರಾಯಣ್ ಗೌಡ್ರು? ಭಾರತೀಯ ಜನತಾ ಪಕ್ಷಕ್ಕೆ ಮಂಡ್ಯ ಜಿಲ್ಲೆಯಲ್ಲಿ ಮೊದಲ ಗೆಲುವು ತಂದು ಕೊಟ್ಟ (Karnataka Election) ಖ್ಯಾತಿ ಹೊಂದಿರುವ ಸಚಿವರೇ ಕ್ಷೇತ್ರ ಬಿಟ್ಟು ಕೊಡಲು ಮುಂದಾಗಿರುವುದೇಕೆ?
ರೇಷ್ಮೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವರು, ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ನಾರಾಯಣ ಗೌಡರು ಸಮಾರಂಭವೊಂದರಲ್ಲ ಆಡಿದ ಮಾತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕೆ.ಸಿ. ನಾರಾಯಣ ಗೌಡ ಅವರು ಮೂಲತಃ ಜೆಡಿಎಸ್‌ನವರು. ಕಳೆದ ಸಾಮೂಹಿಕ ವಲಸೆ, ಆಪರೇಷನ್ ಕಮಲದ ಸಂದರ್ಭದಲ್ಲಿ ಬಿಜೆಪಿ ಸೇರಿದವರಲ್ಲಿ ಒಬ್ಬರು. ಬಳಿಕ ಕೆ.ಆರ್. ಪೇಟೆ ಕ್ಷೇತ್ರದಿಂದ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ದೊಡ್ಡ ಅಂತರದಿಂದ ಗೆದ್ದವರು. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕ್ಷೇತ್ರ ತ್ಯಾಗದ ಮಾತುಗಳನ್ನು ಆಡಿದ್ದಾರೆ.
ಏನು ಹೇಳಿದ್ರು ನಾರಾಯಣ ಗೌಡರು?
-ಬಿಜೆಪಿ ಪಕ್ಷದಿಂದ ಬೇರೆ ಯಾರಾದ್ರೂ ಸ್ಪರ್ಧೆ ಮಾಡುವುದಾದರೆ ನಾನು ತನು, ಮನ, ಧನ ಅರ್ಪಿಸುತ್ತೇನೆ.
– ಈ ದೇಹದಲ್ಲಿ ಉಸಿರು ಇರುವವರೆಗೂ ಈ ತಾಲೂಕಿನ ಅಭಿವೃದ್ಧಿಗೆ ಸೇವಕನಾಗಿ ಕೆಲಸ ಮಾಡ್ತೇನೆ.
ಯಾಕೆ ಈ ಹಿಂಜರಿಕೆ ಮಾತು?
ಹೇಳಿಕೇಳಿ ಮಂಡ್ಯ ಜಿಲ್ಲೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಆಡುಂಬೊಲ. ಇಲ್ಲಿ ಬಿಜೆಪಿ ಈ ಹೊತ್ತಿನವರೆಗೂ ದೊಡ್ಡ ಪ್ರಭಾವ ಹೊಂದಿಲ್ಲ. ನಾರಾಯಣ ಗೌಡರು ತಮ್ಮ ಸ್ವಂತ ವರ್ಚಸ್ಸು ಮತ್ತು ಹಣದ ಬಲದಿಂದ ಬಿಜೆಪಿ ಚಿಹ್ನೆಯಡಿ ಗೆದ್ದಿದ್ದಾರೆ ಎನ್ನುವುದು ಸತ್ಯ.
ಈ ನಡುವೆ ಬಿಜೆಪಿ ಜಿಲ್ಲೆಯಲ್ಲಿ ನೆಲೆ ಕಾಣಲು ಸಾಕಷ್ಟು ತಂತ್ರಗಳನ್ನು ಪ್ರಯೋಗ ಮಾಡುತ್ತಿದೆ. ಸ್ವತಃ ಹಿರಿಯ ನಾಯಕ ಅಮಿತ್ ಶಾ ಅವರೇ ಬಂದು ಸುಂಟರಗಾಳಿ ಎಬ್ಬಿಸಿ ಹೋಗಿದ್ದಾರೆ. ಬಿಜೆಪಿಯಲ್ಲಿ ಆತ್ಮವಿಶ್ವಾಸದ ಮಾತು ಕೇಳಿಬರುತ್ತಿದೆ.
ಆದರೆ, ನಾರಾಯಣ ಗೌಡರೇಕೆ ಹೀಗೆ ಮಾತನಾಡುತ್ತಿದ್ದಾರೆ ಎಂಬುದು ಚರ್ಚೆಗೆ ಕಾರಣವಾಗಿದೆ. ಗೌಡರ ಉಪಚುನಾವಣೆಯ ಬಳಿಕ ನಡೆದ ಎರಡೂ ಪರಿಷತ್ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದ ಜಯವನ್ನು ಸಾಧಿಸಿದೆ. ಇದು ಗೌಡರಲ್ಲಿ ಆತಂಕ ಮೂಡಿಸಿದೆಯಾ?
ತಾನು ಸಾಮಾನ್ಯರಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ನಾರಾಯಣ ಗೌಡ ಅವರು ಘೋಷಿಸಿದ್ದಾರೆ. ಆದರೆ, ನಿಜವಾಗಿಯೂ ಸಾಮಾನ್ಯ ಕಾರ್ಯಕರ್ತನಿಗೆ ಕ್ಷೇತ್ರ ಬಿಟ್ಟು ಕೊಟ್ಟು ಬೆನ್ನಿಗೆ ನಿಲ್ತಾರಾ ಸಚಿವ ನಾರಾಯಣ್ ಗೌಡ ಎನ್ನುವ ಪ್ರಶ್ನೆ ಚರ್ಚೆ ಹುಟ್ಟು ಹಾಕಿದೆ.
ಇದನ್ನೂ ಓದಿ | Amit shah | ಹಳೇ ಮೈಸೂರು ಭಾಗದಲ್ಲಿ 30ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು: ಬಿಜೆಪಿ ನಾಯಕರಿಗೆ ಅಮಿತ್ ಶಾ ಸೂಚನೆ