Site icon Vistara News

Karnataka Election : ಚಿಕ್ಕಮಗಳೂರಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ ಎಂದ ಎಚ್‌ಡಿಕೆ ಆಪ್ತ ಭೋಜೇಗೌಡ, ಪ್ರಚಾರವೇ ಬಂದ್‌!

SL Bhoje gowda asks JDS workers to vote for Congress

SL Bhoje gowda

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡರು (SL Bhojegowda) ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ತಮ್ಮ ಆಪ್ತರಿಗೆ ಹೇಳಿರುವುದು ಭಾರಿ ಸಂಚಲನ ಮೂಡಿಸಿದೆ. ಹೇಳಿ ಕೇಳಿ ಭೋಜೇಗೌಡರೆಂದರೆ (SL Bhoje gowda) ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (hd kumaraswamy) ಅವರ ಪರಮಾಪ್ತರು. ಅವರೇ ಜೆಡಿಎಸ್‌ ಅಭ್ಯರ್ಥಿ ಪರ ವಹಿಸುವುದು ಬಿಟ್ಟು ಕಾಂಗ್ರೆಸ್‌ನ್ನು ಬೆಂಬಲಿಸಿದ್ದು ಯಾಕೆ? ಇದೂ ಒಂದು ಒಳಒಪ್ಪಂದವೇ ಎಂಬ ಚರ್ಚೆ ಹುಟ್ಟಿಕೊಂಡಿದೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಟಿ. ರವಿ, ಕಾಂಗ್ರೆಸ್‌ನಿಂದ ಎಚ್‌.ಡಿ ತಮ್ಮಯ್ಯ ಮತ್ತು ಜೆಡಿಎಸ್‌ನಿಂದ ತಿಮ್ಮ ಶೆಟ್ಟಿ ಕಣಕ್ಕೆ ಇಳಿದಿದ್ದಾರೆ. ಈ ನಡುವೆ, ಭೋಜೇಗೌಡ ಅವರು ತಿಮ್ಮೇ ಗೌಡರ ಬದಲು ಎಚ್‌.ಡಿ ತಮ್ಮಯ್ಯ ಅವರಿಗೆ ಮತ ಹಾಕುವಂತೆ ಸೂಚಿಸಿರುವುದು ಅಚ್ಚರಿ ಮೂಡಿಸಿದೆ.

ಎಸ್‌.ಎಲ್‌. ಭೋಜೇಗೌಡ ಅವರು ತಮ್ಮ ಮನೆಯಲ್ಲೇ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಕರೆದಿದ್ದು, ಅಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕುವ ಸೂಚನೆಯನ್ನು ನೀಡಿದ್ದಾರೆ. ಇದರ ವಿಡಿಯೊ ವೈರಲ್‌ ಆಗಿದೆ.

ಎಚ್.ಡಿ ಕುಮಾರಸ್ವಾಮಿ ಅವರ ಆಪ್ತರಾಗಿರುವ ಎಸ್‌.ಎಲ್.‌ ಭೋಜೇಗೌಡ ಅವರು ತಿಮ್ಮೇಗೌಡರನ್ನು ಬಿಟ್ಟು ತಮ್ಮಯ್ಯ ಅವರಿಗೆ ಯಾಕೆ ಬೆಂಬಲ ನೀಡಿದರು. ಇದು ಪಕ್ಷದ ತೀರ್ಮಾನವೇ ಎನ್ನುವ ಚರ್ಚೆಯೂ ನಡೆದಿದೆ.

ಪ್ರಚಾರವನ್ನೇ ಕೈಬಿಟ್ಟ ಅಭ್ಯರ್ಥಿ

ಈ ನಡುವೆ, ಭೋಜೇಗೌಡ ಹೇಳಿಕೆ, ಪಕ್ಷದ ನಿರ್ಲಕ್ಷ್ಯದಿಂದ ಬೇಸತ್ತಿರುವ ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ತಿಮ್ಮ ಶೆಟ್ಟಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಚುನಾವಣಾ ಪ್ರಚಾರವನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನೆಪ ಮಾತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇರುವಂತಾಗಿದೆ.

ಮಂಗಳೂರು: ಮುಖಂಡರಿಗೆ ಹೇಳದೆ ನಾಮಪತ್ರ ಹಿಂಪಡೆದ ಜೆಡಿಎಸ್ ಅಭ್ಯರ್ಥಿ

Altaf kumpala

ಉಳ್ಳಾಲ: ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಎಸ್ ಎಸ್ ಎಫ್ ನಾಯಕ ಅಲ್ತಾಫ್ ಕುಂಪಲ ಪಕ್ಷದ ಮುಖಂಡರಿಗೆ ಮಾಹಿತಿಯೇ ನೀಡದೆ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಅಲ್ಲದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವುದಾಗಿ ನಾಯಕರು ಆರೋಪಿಸಿದ್ದಾರೆ.

ಅಲ್ತಾಫ್ ಕುಂಪಲ ಇವರು ಹಲವು ವರ್ಷಗಳಿಂದ ಎಸ್ ಎಸ್ ಎಫ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಇತ್ತೀಚೆಗೆ ಜೆಡಿಎಸ್ ಪಕ್ಷದಲ್ಲಿ ಕಾಣಿಸಿಕೊಂಡ ಅವರು ವಿಧಾನಪರಿಷತ್ ಸದಸ್ಯ ಬಿ.ಎಂ ಫಾರುಕ್ ಅವರ ಮನವೊಲಿಸಿ ಜೆಡಿಎಸ್ ನಿಂದ ಉಳ್ಳಾಲ ಕ್ಷೇತ್ರದಿಂದ ಸ್ಪರ್ಧಿಸಲು ಬ್ಲ್ಯಾಕ್ ಫಾರಂ ಪಡೆದುಕೊಂಡಿದ್ದರು. ಉಳ್ಳಾಲ ನಗರಸಭೆಯ ಜೆಡಿಎಸ್ ಕೌನ್ಸಿಲರ್ ಹಾಗೂ ಜಿಲ್ಲಾ ಮುಖಂಡರ ಜೊತೆಗೆ ನಾಮಪತ್ರ ಸಲ್ಲಿಸಿದ್ದ ಅವರು ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಎ.21ರಂದು ಅಲ್ತಾಫ್ ಅವರು ತನ್ನ ಪಕ್ಷದ ಮುಖಂಡರುಗಳಿಗೆ ಮಾಹಿತಿಯೇ ಇಲ್ಲದೆ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದರು. ಈ ಕುರಿತು ಎ.22 ರಂದು ನೋಟೀಸು ಬೋರ್ಡಿನಲ್ಲಿ ಮಾಹಿತಿಯನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಜೆಡಿಎಸ್ ಮುಖಂಡರುಗಳಿಗೆ ಮಾಹಿತಿ ನೀಡಿದ್ದಾರೆ. ಮುಖಂಡರು ಅಲ್ತಾಫ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಕಳೆದ ಎರಡು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಇದನ್ನೂ ಓದಿ : Karnataka Congress: 20ರಂದು ಛಾಪಾ ಕಾಗದ ಖರೀದಿಸಿ 19ಕ್ಕೆ ಅಪ್‌ಲೋಡ್‌ ಹೇಗಾಗುತ್ತದೆ?: ಬಿಜೆಪಿ, ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ ಆರೋಪ

Exit mobile version