Site icon Vistara News

Karnataka Election | ಸಿದ್ದರಾಮಯ್ಯ ಸ್ಪರ್ಧಿಸುವ ಕೋಲಾರ ಕ್ಷೇತ್ರದ 10 ರಾಜಕೀಯ ವಿಶೇಷತೆಗಳಿವು!

Karnataka Election

1. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ 14 ವಿಧಾನಸಭಾ ಚುನಾವಣೆ ನಡೆದಿದೆ. ಇದರಲ್ಲಿ ಕಾಂಗ್ರೆಸ್‌ ಗೆದ್ದಿರುವುದು ಐದು ಬಾರಿ ಮಾತ್ರ. ಜನತಾ ಪರಿವಾರ ಗೆದ್ದಿರುವುದು ಎರಡು ಬಾರಿ.

2. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಅಂದರೆ ಏಳು ಬಾರಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಪಿ ವೆಂಕಟಗಿರಿಯಪ್ಪ, ಕೆ.ಆರ್‌. ಶ್ರೀನಿವಾಸಯ್ಯ ಮತ್ತು ಆರ್‌. ವರ್ತೂರು ಪ್ರಕಾಶ್‌ ತಲಾ ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. 1994ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ. ಶ್ರೀನಿವಾಸ ಗೌಡ ಕೂಡ ಗೆದ್ದಿದ್ದರು.

3. ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪಿ.ವೆಂಕಟಗಿರಿಯಪ್ಪ 1978ರಲ್ಲಿ ಜನತಾ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ ಅಬ್ದುಲ್ ಲತೀಫ್ ಕೇವಲ 394 ಮತಗಳಿಂದ ಗೆದ್ದಿದ್ದರು. ಆ ನಂತರ ವೆಂಕಟಗಿರಿಯಪ್ಪ ರಾಜಕೀಯದಿಂದ ನಿವೃತ್ತಿ ಪಡೆದಿದ್ದರು.

4. ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಮತ್ತೆ ಮುಂದಿನ ಚುನಾವಣೆಯಲ್ಲಿ ಸೋತವರು ಮರಳಿ ಗೆದ್ದ ನಿದರ್ಶನ 2018ರವರೆಗೂ ಇರಲಿಲಿಲ್ಲ. ಇದು ಕೋಲಾರ ವಿಧಾನಸಭಾ ಕ್ಷೇತ್ರದ ವಿಶೇಷ ಎಂದೇ ಬಣ್ಣಿಸಲಾಗುತ್ತಿತ್ತು. ಆದರೆ 2018 ಚುನಾವಣೆಯಲ್ಲಿ ಕೆ. ಶ್ರೀನಿವಾಸ ಗೌಡ ಗೆದ್ದು ಹೊಸ ಇತಿಹಾಸ ಬರೆದಿದ್ದರು.

5. 1994, 1999 ಹಾಗೂ 2004ರಲ್ಲಿ ಕ್ರಮವಾಗಿ ಜನತಾದಳ, ಜೆಡಿಯು, ಕಾಂಗ್ರೆಸ್‌ ಹೀಗೆ ಮೂರು ಚಿಹ್ನೆಯಡಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ಮಾಜಿ ಸಚಿವ ಕೆ. ಶ್ರೀನಿವಾಸಗೌಡರಿಗೆ 2008ರಲ್ಲಿ ಪಕ್ಷೇತರ ಅಭ್ಯರ್ಥಿ ವರ್ತೂರು ಆರ್‌. ಪ್ರಕಾಶ್‌ ಸೋಲುಣಿಸಿದ್ದರು.

6. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳು ಮೊದಲನೇ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ 60,000ಕ್ಕೂ ಹೆಚ್ಚು ಮತಗಳಿವೆ. ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದು, ಸುಮಾರು 40,000 ಮತಗಳಿವೆ. ಒಕ್ಕಲಿಗರು 30,000 ಇದ್ದರೆ, ಕುರುಬರು 20,000ಕ್ಕೂ ಹೆಚ್ಚಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಉಳಿದ ಇತರ ಸಮುದಾಯಗಳ ಸುಮಾರು 50,000 ಮತಗಳಿವೆ ಎನ್ನಲಾಗುತ್ತಿದೆ.

7. ಜಿಲ್ಲಾಧಿಕಾರಿಯಾಗಿದ್ದ ಕೋಲಾರ ಮೂಲದ ಡಿ.ಕೆ ರವಿ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದು ಕೊಲೆ ಎಂದು ಅನುಮಾನಿಸಲಾಗಿತ್ತು. ಮುಂದೆ ಸಿಬಿಐ ತನಿಖೆಯಿಂದ ಅವರದ್ದು ಆತ್ಮಹತ್ಯೆ ಎಂಬುದು ಸಾಬೀತಾಗಿತ್ತು. 2018ರ ಚುನಾವಣೆಯಲ್ಲಿ ಈ ಸಾವು ಕೂಡ ಕೋಲಾರ ಕ್ಷೇತ್ರದ ಮೇಲೆ ಪ್ರಭಾವ ಬೀರಿತ್ತು. ಅವರ ತಾಯಿ ಗೌರಮ್ಮ ಆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಕೇವಲ 2,085 ಮತ ಪಡೆದಿದ್ದರು.

8. ಈ ಕ್ಷೇತ್ರದಿಂದ ಮೂರು ಬಾರಿ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದು ಗೆದ್ದಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ 1957ರಲ್ಲಿ ಡಿ. ಅಬ್ದುಲ್‌ ರಶೀದ್‌ ಮತ್ತು 1978ರಲ್ಲಿ ಎಂ. ಅಬ್ದುಲ್‌ ಲತೀಫ್‌ ಗೆದ್ದಿದ್ದರು. 1989ರಲ್ಲಿ ಕೆ.ಎ ನಿಸಾರ್ ಅಹ್ಮದ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು, ಆಗ ಜನತಾದಳದಲ್ಲಿದ್ದ ಕೆ.ಆರ್ ಶ್ರೀನಿವಾಸಯ್ಯರನ್ನು 6,064 ಮತಗಳಿಂದ ಸೋಲಿಸಿ ಶಾಸಕರಾಗಿದ್ದರು. ನಿಸಾರ್‌ ಅಹ್ಮದ್‌ ಇಂಧನ ಸಚಿವರೂ ಆಗಿದ್ದರು. ಕೋಲಾರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಮೂರನೇ ಮತ್ತು ಕೊನೆಯ ಮುಸ್ಲಿಂ ವ್ಯಕ್ತಿ ಇವರಾಗಿದ್ದಾರೆ.

೯. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದವರೆಂದರೆ 2018ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಶ್ರೀನಿವಾಸ ಗೌಡ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸೈಯದ್‌ ಜಮೀರ್‌ ಪಾಶಾ ಅವರಿಗಿಂತ 44,251 ಮತಗಳ ಅಂತರದಿಂದ ಗೆದ್ದಿದ್ದರು. ಅತಿ ಕಡಿಮೆ ಮತಗಳಿಂದ ಗೆದ್ದವರೆಂದರೆ ಕಾಂಗ್ರೆಸ್‌ನ ಎಂ. ಅಬ್ದುಲ್‌ ಲತೀಫ್‌. ಅವರು 1978ರ ಚುನಾವಣೆಯಲ್ಲಿ ಜನತಾಪಕ್ಷದ ಪಿ. ವೆಂಗಟಗಿರಿಯಪ್ಪ ಅವರನ್ನು ಕೇವಲ 394 ಮತಗಳಿಂದ ಸೋಲಿಸಿದ್ದರು.

೧೦. 1962ರ ಚುನಾವಣೆವರೆಗೂ ತಾಲೂಕಿನ ವೇಮಗಲ್‌ ಭಾಗವು ಕ್ಷೇತ್ರದ ವ್ಯಾಪ್ತಿಯಲ್ಲೇ ಇತ್ತು. 1967ರಲ್ಲಿ ವೇಮಗಲ್‌ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಯಿತು. ಕಳೆದ 14 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿಲ್ಲ.

ಇದನ್ನೂ ಓದಿ | Karnataka Election | ಪುತ್ರ ವ್ಯಾಮೋಹದಲ್ಲಿ ರಿಸ್ಕ್‌ ತೆಗೆದುಕೊಂಡ ಸಿದ್ದರಾಮಯ್ಯ; ಬಾದಾಮಿಯಂತೆಯೇ ʼಲಾಕ್‌ʼ ಆಗುತ್ತಾರೆಯೇ ಮಾಜಿ ಸಿಎಂ?

Exit mobile version