ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಮೂರೂ ಪಕ್ಷಗಳು ಹೇಳುತ್ತಿರುವ ಬೆನ್ನಲ್ಲೇ, ರಾಷ್ಟ್ರೀಯ ಪಕ್ಷದ ವತಿಯಿಂದ ಫೀಲರ್ (ಸಂಧಾನಕಾರರು) ಒಬ್ಬರು ಆಗಮಿಸಿದ್ದರು ಎಂಬ ಹೊಸ ವಿಚಾರವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಈ ಬಾರಿ ಅತ್ಯಂತ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಈ ಕುರಿತು ಎಚ್.ಡಿ. ಕುಮಾರಸ್ವಾಮಿ ವಿಭಿನ್ನ ಮಾತನ್ನಾಡಿದ್ದಾರೆ.
ಬಿಜೆಪಿ, ಕಾಂಗ್ರೆಸ್ ನಾಯಕರು ಜೆಡಿಎಸ್ ಸಂಪರ್ಕ ಮಾಡಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ಹಲವಾರು ಜನರು ಬಂದು ಚರ್ಚೆ ಮಾಡಿದ್ದಾರೆ. ಇಲ್ಲಿಯ ಸ್ಥಳೀಯ ನಾಯಕರು ಮಾತನಾಡುವುದು ಬೇರೆ. ಆದರೆ ಕೇಂದ್ರ ನಾಯಕರ ಚರ್ಚೆ ಬೇರೆ. ಎರಡೂ ಪಕ್ಷಗಳು ಸೇರಿ 75 ಸಂಖ್ಯೆ ದಾಟುವುದಿಲ್ಲ ಎಂದು ಅನೇಕ ಅಧಿಕಾರಿಗಳು ಹೇಳಿದ್ದಾರೆ. ನನಗೆ ವಾಸ್ತವ ಮಾಹಿತಿ ಇದೆ. ಇಬ್ಬರೂ ಏನು ಬೇಕಾದರೂ ಹೇಳಿಕೊಳ್ಳಬಹುದು, ನಮ್ಮ ಗುರಿ 123. ನಾವು ಪಂಚರತ್ನ ಯಾತ್ರೆಯ ಮೂಲಕ ನಿರಂತರ ಕೆಲಸ ಮಾಡುತ್ತಿದ್ದೇವೆ.
ನಮ್ಮನ್ನು ಗುರಿ ಮುಟ್ಟಿಸಲು ಜನರು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್-ಬಿಜೆಪಿ ಸ್ಥಳೀಯ ಮುಖಂಡರು ಏನೇ ಮಾತನಾಡಬಹುದು. ಕೆಲವರು ಫೀಲರ್ಸ್ ಜತೆ ಚರ್ಚೆ ಮಾಡಿದ್ದೇನೆ. ಅದು ಯಾರು ಎನ್ನುವುದು ಹೇಳಬೇಕಾಗಿಲ್ಲ ಎಂದರು. ಯಾವ ಪಕ್ಷದವರು ತಮ್ಮನ್ನು ಭೇಟಿ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಮಾತ್ರ ಎಚ್.ಡಿ. ಕುಮಾರಸ್ವಾಮಿ ಬಿಟ್ಟುಕೊಡಲಿಲ್ಲ.
ರಾಷ್ಟ್ರೀಯ ಪಕ್ಷಗಳ ಕಾರ್ಯಕ್ರಮಕ್ಕೆ ಜನರೇ ಬರುತ್ತಿಲ್ಲ. ಹಣ ನೀಡಿ ಕರೆತರಬೇಕು ಎಂದು ಆ ಪಕ್ಷದ ಪ್ರಮುಖ ನಾಯಕರೇ ಹೇಳುತ್ತಿದ್ದಾರೆ. ನಾವು ದುಡ್ಡು ಕೊಟ್ಟು ಕರೆದುಕೊಂಡು ಬರುವ ಪರಿಸ್ಥಿತಿಯಲ್ಲಿಲ್ಲ ಎಂದರು.