ಕೊಡಗು: ಚುನಾವಣಾ ಆಯೋಗ (Election Commission) ಮತದಾನಕ್ಕೆ (Karnataka Election 2023) ಸಾಕಷ್ಟು ಸಿದ್ಧತೆಗಳನ್ನು ಮಾಡಿ, ವ್ಯವಸ್ಥೆಗಳನ್ನು ಮಾಡಿದ್ದರೂ ಬಿಸಿಲಿಗೆ ಯಾವುದೇ ರಕ್ಷಣಾತ್ಮಕ ವ್ಯವಸ್ಥೆ ಇಲ್ಲದೆ ಹಲವೆಡೆ ಸಮಸ್ಯೆ ಆಯಿತು. ಇದು ಮಾದಾಪುರದಲ್ಲಂತೂ ಲಾಠಿ ಚಾರ್ಜ್‌ಗೇ ಕಾರಣವಾಯಿತು. ಬಿಸಿಲಿಗೆ ಬಸವಳಿದ ಮತದಾರರು ನೀರು ಕೇಳಿದ್ದಕ್ಕೆ ಲಾಠಿ ಚಾರ್ಜ್ ಮಾಡಲಾಯಿತು.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಾದಾಪುರ (Madapura booth) ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 119ರಲ್ಲಿ ಶಾಂತವಾಗಿಯೇ ಮತದಾನ ನಡೆಯುತ್ತಿತ್ತು. ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಎರಡು ಮತಗಟ್ಟೆಗಳ ಪೈಕಿ ಒಂದರಲ್ಲಿ ದೊಡ್ಡ ಮಟ್ಟದ ಕ್ಯೂ ಇತ್ತು. ಜನರು ಸರತಿ ಸಾಲಿನಲ್ಲಿ ಬಿಸಿಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಉರಿ ಬಿಸಿಲಿನಲ್ಲಿ ನಿಂತು ಬಾಯಾರಿದ ಜನ ನೀರು ಕೊಡುವಂತೆ ಕೇಳಿದ್ದಾರೆ. ನೀರು ಕೊಡದೆ ಇದ್ದಾಗ ಸ್ವಲ್ಪ ಜೋರಾದ ಧ್ವನಿಯಲ್ಲಿ ಕೂಗಾಡಿದ್ದಾರೆ. ಆಗ ಭದ್ರತಾ ಸಿಬ್ಬಂದಿ ಆಗಮಿಸಿದ್ದು, ಅವರ ಜತೆ ವಾಗ್ವಾದ ಆರಂಭಗೊಂಡಿದೆ.
ಈ ವಾಗ್ವಾದ ತೀವ್ರ ಸ್ವರೂಪವನ್ನು ಪಡೆದುಕೊಂಡು ಮಿಲಿಟರಿ ಸಿಬ್ಬಂದಿ ಮತದಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಇದರಿಂದ ಆಕ್ರೋಶಿತರಾದ ಜನರು ಮಿಲಿಟರಿ ಸಿಬ್ಬಂದಿಗಳ ಮೇಲೆ ಸಿಟ್ಟಾಗಿದ್ದಾರೆ, ಅವರ ವಿರುದ್ಧ ಧಿಕ್ಕಾರ ಕೂಗಿದ್ದಲ್ಲದೆ, ಮತದಾನವನ್ನೇ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ.
ತುಮಕೂರಿನಲ್ಲಿ ಪೊಲೀಸ್ ಪೇದೆ ಮೇಲೆ ಗ್ರಾಮಸ್ಥರಿಂದ ಹಲ್ಲೆ
ತುಮಕೂರು: ಮಧುಗಿರಿ ತಾಲೂಕಿನ ಎಚ್ ಬಸವನಹಳ್ಳಿ ಮತಗಟ್ಟೆ ಬಳಿ ಕೆಲವು ಮತದಾರರು ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ್ದಾರೆ.
ಕೆಲವು ಕಾರ್ಯಕರ್ತರು ಮತಗಟ್ಟೆ ಬಳಿ ಬಂದು ಪ್ರಚಾರ ಮಾಡುತಿದ್ದುದನ್ನು ಕಂಡ ಪೊಲೀಸ್ ಸಿಬ್ಬಂದಿ ಅವರನ್ನು ದೂರ ಹೋಗುವಂತೆ ತಿಳಿಸಿದ್ದಾರೆ. ಪೊಲೀಸ್ ಪೇದೆ ಮಾತಿಗೆ ಪ್ರತಿರೋಧ ಒಡ್ಡಿದ ಕಾರ್ಯಕರ್ತರು ದೂರ ಹೋಗುವುದಿಲ್ಲ ಎಂದರು. ಈ ವೇಳೆ ಮಾತಿನ ಚಕಮಕಿ ನಡೆದು ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಭೇಟಿ ನೀಡಿದ್ದಾರೆ. ಹಲ್ಲೆಕೋರರ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Karnataka Election 2023: ಮತಯಂತ್ರಗಳನ್ನು ಒಡೆದು ಹಾಕಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಗ್ರಾಮಸ್ಥರು! ಕಾರಣವೇನು?