ಬೆಂಗಳೂರು: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ದುಃಖ ತಂದಿದೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸವದಿ, ನಾನೇನು ಅವರ ಕಣ್ಣೀರು ಒರೆಸಲು ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ತಮ್ಮ ನಿವಾಸದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ಗೆ ಹೋಗ್ತಿರೋದು ದುಃಖ ತರಿಸಿದೆ. ನಮ್ಮ ಜತೆಗೆ ಹೆಚ್ಚಿನ ಒಡನಾಟ ಇರುವವರು. ರಾಜಕೀಯ ಸನ್ನಿವೇಶದಲ್ಲಿ ಹೀಗೆ ಆಗುತ್ತದೆ. ಅವರಿಗೆ ತಮ್ಮ ರಾಜಕೀಯ ಭವಿಷ್ಯ ಕಂಡಿದೆ, ಹೋಗುತ್ತಿದ್ದಾರೆ.
ಕಾಂಗ್ರೆಸ್‌ಗೆ ಹೆಚ್ಚು ಜನರು ಹೋಗುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಕಾಂಗ್ರೆಸ್‌ನಲ್ಲಿ 60 ಸ್ಥಾನಗಳಿಗೆ ಅಭ್ಯರ್ಥಿಗಳಿಲ್ಲ, ಅದಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಏನೂ ಬದಲಾವಣೆ ಆಗುವುದಿಲ್ಲ ಎಂದರು. ಬಿಜೆಪಿಯಲ್ಲಿನ ಭಿನ್ನಮತದ ಬಗ್ಗೆ ಮಾತನಾಡಿ, ಸಹಜವಾಗಿ ಆಡಳಿತ ಪಕ್ಷದಲ್ಲಿ ಡಿಮ್ಯಾಂಡ್ ಇರುತ್ತದೆ, ಕೆಲವರು ನಾಯಕರು ಮಹತ್ವಾಕಾಂಕ್ಷೆಯಿಂದ ಹೋಗುತ್ತಿದ್ದಾರೆ. ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬದ್ಧವಾಗಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರೊಂದಿಗೆ ಸಭೆಯ ನಂತರ ತಮ್ಮ ಮನೆಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಕಾಂಗ್ರೆಸ್ ಸೇರಲು ಯಾವುದೇ ಕಂಡೀಷನ್ ಹಾಕಿಲ್ಲ. ಅಥಣಿಯಿಂದ ಸ್ಪರ್ಧೆ ಮಾಡುತ್ತೇನೆ, ಮುಂದೆ ಸರ್ಕಾರ ಬಂದಾಗ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು, ನೀರಾವರಿ ಯೋಜನೆಗಳನ್ನು ಮುಗಿಸಿಕೊಡಬೇಕು ಎಂದು ಕೇಳಿದ್ದೇನೆ. ನನ್ನ ಮಗನಿಗೂ ಟಿಕೆಟ್ ಕೇಳಿಲ್ಲ, ಹೆಂಡತಿಗೂ ಕೇಳಿಲ್ಲ, ಅಣ್ಣನಿಗೂ ಕೇಳಿಲ್ಲ ಎಂದರು.
ನಿಮ್ಮ ಸೇರ್ಪಡೆ ಕುರಿತು ಸತೀಶ್ ಜಾರಕಿಹೊಳಿ ಅವರಿಗೆ ಗೊತ್ತೆ ಎಂಬ ಪ್ರಶ್ನೆಗೆ, ಅವರಿಗೆ ಗೊತ್ತಿದೆ, ಅವರ ಜತೆ ಮಾತನಾಡಿದ್ದೇನೆ ಎಂದರು.
ತಾವು ಪಕ್ಷ ಬಿಡುತ್ತಿರುವುದಕ್ಕೆ ಬೇಸರವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂಬ ಪ್ರಶ್ನೆಗೆ, ಅದಕ್ಕೆ ನಾನೇನು ಮಾಡೋಕೆ ಆಗುತ್ತದೆ? ನಾನೇನು ಅವರ ದುಃಖ ಒರೆಸೋಕೆ ಆಗುತ್ತ? ಎಂದರು.
ಇದನ್ನೂ ಓದಿ: Karnataka Congress: ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಗೆ ಸಮಯ ನಿಗದಿ: ಅಥಣಿಯಿಂದ ಸ್ಪರ್ಧೆ ಖಚಿತ