ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಭರ್ಜರಿ ಬಹುಮತವನ್ನು ಪಡೆದಿರುವ ಕಾಂಗ್ರೆಸ್‌ನ ನಡೆಗಳನ್ನು ಬಿಜೆಪಿ ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದೆ. ಮುಖ್ಯಮಂತ್ರಿ ಆಯ್ಕೆಯಲ್ಲಿ (Karnataka CM) ಆಗುತ್ತಿರುವ ವಿಳಂಬ, ನಾಯಕರ ನಡುವಿನ ಗೊಂದಲಗಳ ಬಗ್ಗೆ ಬಿಜೆಪಿಯೊಳಗೂ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಇರುವ ಅತಿ ಮುಖ್ಯ ಕುತೂಹಲವೆಂದರೆ, ಬಿಜೆಪಿ ಲಿಂಗಾಯತರನ್ನು (BJP and Lingayat) ಕಡೆಗಣಿಸಿದೆ ಎಂದು ಹೇಳಿ ಮತ ಗಿಟ್ಟಿಸಿಕೊಂಡಿರುವ ಕಾಂಗ್ರೆಸ್ ತನ್ನ ಅಧಿಕಾರದಲ್ಲಿ ಲಿಂಗಾಯತರಿಗೆ ಯಾವ ಹುದ್ದೆ ಕೊಡುತ್ತದೆ ಎಂಬುದು. ಇದನ್ನು ಸ್ವತಃ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರೇ ಹೇಳಿದ್ದಾರೆ.
ʻʻಕಾಂಗ್ರೆಸ್‌ನವರು ಲಿಂಗಾಯತರ ಬಗ್ಗೆ ಬಹಳ ಮಾತನಾಡಿದ್ದಾರೆ. ಈಗ ಲಿಂಗಾಯತ ನಾಯಕರಿಗೆ ಯಾವ ಸ್ಥಾನ ಕೊಡುತ್ತಾರೆ ನೋಡೋಣʼʼ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅವರು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡುವ ವೇಳೆ ಹೇಳಿದರು.
ʻʻಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಮತ್ತು ರಾಜ್ಯದ ಅಭಿವೃದ್ಧಿ ಮಾಡಲಿ. ಅವರಿಗೆ ಇಲ್ಲಿಯವರೆಗೂ ಮುಖ್ಯಮಂತ್ರಿ ಆಯ್ಕೆ ಮಾಡಲು ಅಗುತ್ತಿಲ್ಲ. ಬೇಗ ಮುಖ್ಯಮಂತ್ರಿ ಆಯ್ಕೆಯನ್ನು ಮಾಡಲಿʼʼ ಎಂದು ಅವರು ಹೇಳಿದರು.
ʻʻಪೂರ್ಣ ಬಹುಮತ ಇದ್ದರೂ ಮುಖ್ಯಮಂತ್ರಿ ಆಯ್ಕೆ ನಿರ್ಧಾರ ಮಾಡದೇ ಇರುವುದು ಪಕ್ಷದಲ್ಲಿ ಹೊಂದಾಣಿಕೆ ಸರಿ ಇಲ್ಲ ಎನ್ನುದುನ್ನು ತೋರಿಸುತ್ತದೆ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ತಮ್ಮ ರಾಜಕೀಯ ಬಿಟ್ಟು ಆದಷ್ಟು ಬೇಗ ಮುಖ್ಯಮಂತ್ರಿ ಆಯ್ಕೆ ಮಾಡಿ, ಸರ್ಕಾರ ರಚಿಸಿ ಜನರ ಸೇವೆ ಮಾಡಲಿʼʼ ಎಂದು ಬೊಮ್ಮಾಯಿ ಹೇಳಿದರು.
ʻʻಲಿಂಗಾಯತ ಸಮುದಾಯದ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಬಹಳ ಮಾತನಾಡಿದ್ದಾರೆ. ಅವರು ಲಿಂಗಾಯತ ನಾಯಕರಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಯಾವ ಯಾವ ಹುದ್ದೆಗಳನ್ನು ಕೊಡುತ್ತಾರೆ ಕಾದು ನೋಡೋಣʼʼ ಎಂದು ಬೊಮ್ಮಾಯಿ ಅವರು ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ ಬಿಜೆಪಿ 66 ಸ್ಥಾನಗಳಲ್ಲಿ ಗೆದ್ದಿದೆ. ಜೆಡಿಎಸ್ 19 ಸ್ಥಾನಗಳಿಗೆ ಸೀಮಿತವಾಗಿದೆ. ಬಿಜೆಪಿ ಲಿಂಗಾಯತ ಮುಖಂಡರನ್ನು ಮತ್ತು ಸಮುದಾಯವನ್ನು ಕಡೆಗಣಿಸಿದೆ ಎಂದು ಹಲವು ಉದಾಹರಣೆಗಳೊಂದಿಗೆ ಕಾಂಗ್ರೆಸ್ ಪ್ರಚಾರ ಮಾಡಿತ್ತು. ಇದು ಲಿಂಗಾಯತ ಸಮುದಾಯದಲ್ಲೂ ಸಂಚಲನ ಮೂಡಿಸಿತ್ತು. ಕಾಂಗ್ರೆಸ್ ಈ ಪ್ರಚಾರವನ್ನು ಜೋರಾಗಿ ಮಾಡಿದ ಬಳಿಕ ಜಾಗೃತರಾದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನನಗೆ ಬಿಜೆಪಿ ಅನ್ಯಾಯ ಮಾಡಿಲ್ಲ, ನಾನೇ ಸಿಎಂ ಹುದ್ದೆಯನ್ನು ಬಿಟ್ಟುಕೊಟ್ಟೆ ಎಂದು ಹೋದಲ್ಲೆಲ್ಲ ಹೇಳಿಕೊಂಡುಬಂದರು. ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡದೆ ಅವರು ಪಕ್ಷ ಬಿಡಲು ಕಾರಣವಾದ ಅಂಶಗಳನ್ನು ಕಾಂಗ್ರೆಸ್ ಪ್ರಚಾರ ಮಾಡಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Karnataka CM: ರಾಹುಲ್, ಖರ್ಗೆ ಜತೆ 4 ಗಂಟೆ ಮಾತುಕತೆ; ಪಟ್ಟು ಸಡಿಲಿಸದ ಡಿ.ಕೆ ಶಿವಕುಮಾರ್