ಬೆಂಗಳೂರು: ಕಾಂಗ್ರೆಸ್ ಚುನಾವಣಾ (Karnataka Election) ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರಾಗಿ ಪ್ರಕಾಶ್ ಮೋಹನ್ ಅವರನ್ನು ನೇಮಿಸಿದ ಬೆನ್ನಿಗೇ ಪಕ್ಷದಲ್ಲಿ ಟಿಕೆಟ್ ಜಾತಿವಾರು ಲಾಬಿ ಜೋರಾಗಿದೆ. ಪ್ರಕಾಶ್ ಮೋಹನ್ ಅವರು ಶನಿವಾರ ಬೆಂಗಳೂರಿಗೆ ಆಗಮಿಸಿದ್ದು ಸಭೆ ಆರಂಭಿಸಿದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳು ಮತ್ತು ಆಕಾಂಕ್ಷಿಗಳ ವಿಚಾರದಲ್ಲಿ ಒಂದು ವರದಿಯನ್ನು ಸಿದ್ಧಪಡಿಸಲಿದ್ದಾರೆ. ಇದರ ಆಧಾರ ಮತ್ತು ಇತರ ಮಾರ್ಗದರ್ಶಿ ಸೂತ್ರಗಳ ನೆಲೆಯಲ್ಲಿ ಟಿಕೆಟ್ ಹಂಚಿಕೆ ಆಗಲಿದೆ ಎನ್ನುವುದು ಈಗಿನ ಲೆಕ್ಕಾಚಾರ.
ಆದರೆ, ಈಗ ಎಲ್ಲದಕ್ಕಿಂತ ಜಾತಿ ಲೆಕ್ಕಾಚಾರ ಮತ್ತು ಲಾಬಿಯೇ ಮುಂಚೂಣಿಗೆ ಬಂದು ನಿಂತಿದೆ. ಕಾಂಗ್ರೆಸ್ ಟಿಕೆಟ್ ಪಡೆಯಲು ನಾಯಕರು ತಮ್ಮ ವೈಯಕ್ತಿಕ ವರ್ಚಸ್ಸಿನ ಜತೆಗೆ ಜಾತಿಯನ್ನೂ ಮುಂದಿಟ್ಟುಕೊಂಡಿದ್ದಾರೆ. ಇನ್ನು ಅಭ್ಯರ್ಥಿಗಳ ಜತೆಗೆ ಸಮುದಾಯದ ನಾಯಕರು ತಮ್ಮ ಸಮುದಾಯಕ್ಕೆ ಹೆಚ್ಚೆಚ್ಚು ಟಿಕೆಟ್ ಕೊಡಬೇಕು ಎಂದು ಒತ್ತಡ ಹೇರಲು ಆರಂಭಿಸಿದ್ದಾರೆ.
ಟಿಕೆಟ್ ಹಂಚಿಕೆಯಲ್ಲಿ ಪ್ರಧಾನ ಸೂತ್ರಧಾರಿಗಳಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ʻʻಗೆಲುವೊಂದೇ ಮಾನದಂಡʼʼ ಎಂದು ಹೇಳಿದ್ದಾರಾದರೂ ಅದನ್ನು ಮೀರಿಸುವಂತೆ ಜಾತಿವಾರು ಲಾಬಿಗಳು ಮುಂದುವರಿದಿವೆ. ಈ ಒತ್ತಡದಿಂದ ಪಾರಾಗಲೂ ಈ ಇಬ್ಬರು ನಾಯಕರು ಹೈಕಮಾಂಡ್ ಕಡೆಗೆ ಕೈ ತೋರಿಸುತ್ತಿದ್ದಾರೆ. ಆದರೆ, ಈ ತಂತ್ರ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂದು ಕಾದು ನೋಡಬೇಕಾಗಿದೆ.
ಸಮುದಾಯಗಳ ಒತ್ತಡ ಹೇಗೆ?
ಸಮುದಾಯಗಳ ನಾಯಕರು ತಮ್ಮ ತಮ್ಮ ನಾಯಕರ ಮೂಲಕ ಒತ್ತಡ ಹೇರುತ್ತಿದ್ದು ಇದರಿಂದ ತಪ್ಪಿಸಿಕೊಳ್ಳಲು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಹೈಕಮಾಂಡ್ ಕಡೆಗೆ ಬೊಟ್ಟು ಮಾಡಿದ್ದಾರೆ.
ಹಲವಾರು ಟಿಕೆಟ್ ಆಕಾಂಕ್ಷಿಗಳು ಸಮುದಾಯದ ಮುಖಂಡರ ಸಭೆಗಳನ್ನು ನಡೆಸಿದ್ದು, ಮುಖಂಡರ ನಿಯೋಗಗಳ ಮೂಲಕ ಹೈಕಮಾಂಡ್ ನಾಯಕರನ್ನು ತಲುಪುವ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರು, ಮುಸ್ಲಿಂ ಮುಖಂಡರು, ಒಕ್ಕಲಿಗ ಮುಖಂಡರು ಈಗಾಗಲೇ ಸಭೆಯನ್ನು ಮುಗಿಸಿದ್ದಾರೆ. ಫೆಬ್ರವರಿ 13ರಂದು ಕಾಂಗ್ರೆಸ್ ಲಿಂಗಾಯತ ನಾಯಕರ ಸಭೆ ಆಯೋಜನೆಗೊಂಡಿದೆ. ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಎಂಬಿ ಪಾಟೀಲ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.
ಯಾವ ಸಮುದಾಯದಿಂದ ಎಷ್ಟು ಟಿಕೆಟ್‌ಗೆ ಬೇಡಿಕೆ?
ಪಂಚಮಸಾಲಿ ಹಾಗೂ ಲಿಂಗಾಯತ 65
ಪರಿಶಿಷ್ಟ ಜಾತಿ ಎಡ ಪಂಗಡ- ೧೫
ಪರಿಶಿಷ್ಟ ಜಾತಿ ಬಲ ಪಂಗಡ- ೧೫
ಪರಿಶಿಷ್ಟ ಪಂಗಡ- ೨೦
ಒಕ್ಕಲಿಗ – 48
ಒಬಿಸಿ -52
ಮುಸ್ಲಿಂ – 24
2018 ರಲ್ಲಿ ಯಾವ ಸಮುದಾಯಕ್ಕೆ ಕೊಟ್ಟ ಟಿಕೆಟ್‌ನಲ್ಲಿ ಎಷ್ಟು ಗೆಲವು?
ಲಿಂಗಾಯತ: ಟಿಕೆಟ್ 47, ಜಯ-೧೭
ಒಕ್ಕಲಿಗ: ಟಿಕೆಟ್ ೪೬, ಜಯ-೧೫
ಒಬಿಸಿ: ಟಿಕೆಟ್ ೫೦, ಜಯ-೧೫
ಮುಸ್ಲಿಂ: ಟಿಕೆಟ್ ೧೭, ಜಯ-೭
ಕ್ರಿಶ್ಚಿಯನ್: ಟಿಕೆಟ್ ೨, ಜಯ- ೧
ಜೈನ್: ಟಿಕೆಟ್ 2, ಜಯ-೦
ಬ್ರಾಹ್ಮಣ: ಟಿಕೆಟ್ ೬, ಜಯ-೪
ಎಸ್‌ಸಿ ಬಲ: ಟಿಕೆಟ್ ೧೪, ಜಯ-೫
ಎಸ್‌ಸಿ ಎಡ: ಟಿಕೆಟ್ ೯, ಜಯ-೧
ಎಸ್‌ಟಿ: ಟಿಕೆಟ್ ೧೭, ಜಯ-೯