ಬೆಂಗಳೂರು: ರಾಜ್ಯದಲ್ಲಿ ಕಳೆದ 20 ದಿನಗಳಿಂದ ಇದ್ದ ವಿಧಾನಸಭಾ ಚುನಾವಣೆ (Karnataka Election 2023) ಮತಬೇಟೆ, ರೋಡ್ ಶೋ, ಸಮಾವೇಶಗಳ ರಂಗು ಸೋಮವಾರ ಸಂಜೆ ಆರು ಗಂಟೆಯ ಹೊತ್ತಿಗೆ ಮುಕ್ತಾಯಗೊಂಡಿತು. ಕೇಂದ್ರ ಮತ್ತು ರಾಜ್ಯದ ನಾಯಕರ ಭರ್ಜರಿ ಓಡಾಟಗಳಿಗೆ ತೆರೆಬಿತ್ತು. ಈ ನಡುವೆ ರಾಜ್ಯದ ಪ್ರಮುಖ ಕಟ್ಟಾಳುಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಂತಿಮ ಮತ ಶಿಕಾರಿ ನಡೆಸಿದರು.
ಶಿಗ್ಗಾಂವಿಯಲ್ಲಿ ಸಮಾವೇಶ, ರಾಜ್ಯವನ್ನು ಉದ್ದೇಶಿಸಿ ಮಾತು
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಹಲವಾರು ಕಡೆ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದೇ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿ ಅವರು, ಕೆಲವರು ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಇದು ಲಿಂಗಾಯತರ ಬೆಂಬಲಕ್ಕೆ ಸಂಬಂಧಿಸಿ ಕಾಂಗ್ರೆಸ್ ನೀಡುತ್ತಿರುವ ಹೇಳಿಕೆಗಳಿಗೆ ಅವರು ನೀಡಿದ ಪ್ರತಿಕ್ರಿಯೆಯಂತಿತ್ತು.
ಕನಕಪುರದಲ್ಲಿ ಬೃಹತ್ ಸಮಾವೇಶ, ಮುಖ್ಯಮಂತ್ರಿಯಾಗುವ ಆಸೆ
ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರವಾದ ಕನಕಪುರದಲ್ಲಿ ಅತಿ ದೊಡ್ಡ ಸಮಾವೇಶವನ್ನು ಆಯೋಜಿಸಿದ್ದರು. ಲಕ್ಷಾಂತರ ಜನರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್‌ಗೆ ಅಧಿಕಾರ, ತಮಗೆ ಮುಖ್ಯಮಂತ್ರಿ ಹುದ್ದೆಯ ಮಾತುಗಳನ್ನು ಆಡಿದರು. ಅವರು ರಾಮನಗರದ ಹಲವು ಕಡೆ ರೋಡ್ ಶೋ ನಡೆಸಿದರು.
ಐದು ನಿಮಿಷ ಮೊದಲೇ ಭಾಷಣ ಮುಗಿಸಿದ ಸಿದ್ದು, ಸಿಎಂ ಗಾದಿ ಮೇಲೆ ಕಣ್ಣು
ಕಾಂಗ್ರೆಸ್‌ನ ಇನ್ನೊಬ್ಬ ನಾಯಕ ಸಿದ್ದರಾಮಯ್ಯ ಅವರು ವರುಣಾದಲ್ಲಿ ಪ್ರಚಾರ ಮಾಡದೆ ಇದ್ದರೂ ಕೆ.ಆರ್ ಕ್ಷೇತ್ರದ ಕೆಲವೆಡೆ ಓಡಾಡಿದರು. ಕೆ.ಆರ್. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಪರ ಭಾಷಣ ಮಾಡಿದ ಅವರು ಮುಖ್ಯಮಂತ್ರಿ ಗಾದಿಗೇರುವ ಆಸೆ ವ್ಯಕ್ತಪಡಿಸಿದರು.
ನನಗೆ ಈ ಬಾರಿ ಮುಖ್ಯಮಂತ್ರಿ ಅವಕಾಶ ಇದೆ. ಸೋಮಶೇಖರ್ ಗೆದ್ದರೆ ನಾನು ಗೆದ್ದಂತೆ.. ಅವನು ಗೆದ್ದರೆ ನನ್ನ ಪರ ಕೈ ಎತ್ತುತ್ತಾನೆ. ಈ ಬಾರಿ ಅವನನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಬಹಿರಂಗ ಪ್ರಚಾರಕ್ಕೆ 5 ನಿಮಿಷ ಬಾಕಿ ಇರುವಂತೆ ಭಾಷಣ ಮುಗಿಸಿದರು ಸಿದ್ದರಾಮಯ್ಯ.
ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್‌ಡಿಕೆ ಭಾವುಕ ಭಾಷಣ
ತಾನು ಸ್ಪರ್ಧಿಸಿರುವ ಚನ್ನಪಟ್ಟಣ ಮತ್ತು ಮಗ ನಿಖಿಲ್ ಸ್ಪರ್ಧೆ ಮಾಡಿರುವ ರಾಮನಗರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಚಾರ ಮಾಡಿದರು. ಚನ್ನಪಟ್ಟಣ ಸರ್ಕಾರಿ ಬಸ್ ನಿಲ್ದಾಣ ಬಳಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಹೆಚ್ಡಿಕೆ ಭಾವುಕರಾದರು.
ʻʻನಾನು ಸಿಎಂ ಆದ್ರೂ ಸಹ ಬಿಡದಿ ಕೇತಗಾನಹಳ್ಳಿಯಲ್ಲಿಯೇ ಇರೋದು. ಮೈಸೂರು ಭಾಗದ ಜನರು ಏನೇ ಕಷ್ಟ ಇದ್ರು ಮನೆ ಬಳಿ ಬನ್ನಿ ಪೊಲೀಸರು ತಡೆಯೋದಿಲ್ಲ. ಇಷ್ಟು ಜನರು ಬಂದಿರುವುದನ್ನು ನೋಡಿ ನನ್ನ ಜನ್ಮ ಸಾರ್ಥಕವಾಯಿತುʼʼ ಎಂದರು.
ಇದನ್ನೂ ಓದಿ : Karnataka Election : 100ಕ್ಕೂ ಅಧಿಕ ಲಿಂಗಾಯತ ಸ್ವಾಮೀಜಿಗಳಿಂದ ಕಾಂಗ್ರೆಸ್‌ಗೆ ಬೆಂಬಲ ಎಂದ ಡಿಕೆಶಿ