Site icon Vistara News

Karnataka Election: ಗಾಳಿಗೂ ಮೋದಿ ಜಿಎಸ್‌ಟಿ ವಿಧಿಸಿದರೆ ಅಚ್ಚರಿ ಇಲ್ಲ: ಖರ್ಗೆ ವಾಗ್ದಾಳಿ

Mallikarjun Kharge

Mallikarjun Kharge

ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡರು. ಶಿವಮೊಗ್ಗದಲ್ಲಿ ಆಯೋಜಿಸಿದ್ದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. “ನಾವು ಸಂವಿಧಾನವನ್ನು ರಕ್ಷಣೆ ಮಾಡಿದ್ದಕ್ಕೇ ಮೋದಿ ಅವರು ಈ ದೇಶದ ಪ್ರಧಾನಿ ಆಗಿದ್ದಾರೆ. ಆದರೆ, ಇವರು ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದ್ದಾರೆ. ಗಾಳಿಯೊಂದು ಉಚಿತವಾಗಿ ಸಿಗುತ್ತಿದೆ. ಮೋದಿ ಅವರು ಅದಕ್ಕೂ ತೆರಿಗೆ ವಿಧಿಸಿದರೂ ಅಚ್ಚರಿ ಇಲ್ಲ” ಎಂದರು.

“ಸದ್ಯ ಗಾಳಿಯೊಂದು ಉಚಿತವಾಗಿ ಸಿಗುತ್ತಿದೆ. ಮೋದಿ ಅವರಿಗೆ ಅದರ ಮೇಲೆ ಇನ್ನೂ ಕಣ್ಣು ಬಿದ್ದಿಲ್ಲ. ಆಮ್ಲಜನಕ ಇಲ್ಲದೆ ಮನುಷ್ಯರು ಬದುಕಲು ಆಗುವುದಿಲ್ಲ. ಆಕ್ಸಿಜನ್‌ ಇಲ್ಲದೆ ಮನುಷ್ಯ ಬದುಕುವುದಿಲ್ಲ ಎಂದಾದರೆ, ಅದಕ್ಕೂ ಏಕೆ ತೆರಿಗೆ ವಿಧಿಸಬಾರದು ಎಂಬುದು ಮೋದಿ ಅವರು ಯೋಚನೆ ಆಗಿರುತ್ತದೆ. ಅವರ ತಲೆಯಲ್ಲಿ ಬಂದರೆ ಅದಕ್ಕೂ ತೆರಿಗೆ ಹಾಕುತ್ತಾರೆ” ಎಂದು ಕುಟುಕಿದರು.

ಖರ್ಗೆ ವಾಗ್ದಾಳಿ

“ಸರ್ಕಾರದ ಆಸ್ತಿಯನ್ನೆಲ್ಲ ಮಾರಾಟ ಮಾಡುವುದು. ಒಬ್ಬ ವ್ಯಕ್ತಿಗೇ ಸರ್ಕಾರದ ಆಸ್ತಿಯನ್ನು ಮಾರಾಟ ಮಾಡಲಾಗಿದೆ. ಇದರ ಕುರಿತು ಮಾತನಾಡಿದ ರಾಹುಲ್‌ ಗಾಂಧಿ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಿದರು. ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಇಂತಹ ಕೆಲಸ ಮಾಡುವವರಿಗೆ ಮತದಾರರು ಬುದ್ಧಿ ಕಲಿಸಬೇಕು. ಬಿಜೆಪಿ ಖಜಾನೆ ತುಂಬಿದೆ. ದುಡ್ಡು ಕೊಟ್ಟು ಜನರನ್ನು ಕರೆಸಿ ಉಧೋ ಉಧೋ ಎನ್ನುತ್ತಾರೆ. ಆದರೆ, ಕರ್ನಾಟಕಕ್ಕೆ ಬಿಜೆಪಿ ಕೊಡುಗೆ ಏನು? ಕರ್ನಾಟಕಕ್ಕೆ ಏನಾದರೂ ದೊಡ್ಡ ಕಾರ್ಖಾನೆ ಮಾಡಿಕೊಟ್ಟಿದ್ದೀರಾ? ದೊಡ್ಡ ಹೂಡಿಕೆ ಏನಾದರೂ ಮಾಡಿದ್ದೀರಾ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Karnataka Election: ಬಿಜೆಪಿ, ಆರೆಸ್ಸೆಸ್‌ ಕಚೇರಿಯಲ್ಲಿ ಅಂಬೇಡ್ಕರ್‌ ಫೋಟೊ ಇದೆಯೇ; ಮೋದಿಗೆ ಖರ್ಗೆ ತಿರುಗುಬಾಣ

“ರಾಜ್ಯದಲ್ಲಿ ಏನು ಮಾಡಿದ್ದರೂ ಮೈಸೂರು ಮಹಾರಾಜರ ಕಾಲದಲ್ಲಿ ಮಾಡಲಾಗಿದೆ. ಜವಹರ್ ಲಾಲ್ ನೆಹರು ಕಾಲದಲ್ಲಿ ಅಭಿವೃದ್ಧಿ ಆಗಿದೆ. ಸ್ಟೀಲ್ ಕಾರ್ಖಾನೆ, ಪೇಪರ್ ಕಾರ್ಖಾನೆ ಸ್ಥಾಪನೆ ಆಗಿದ್ದು ಆ ಕಾಲದಲ್ಲಿ. ಸೋನಿಯಾ ಗಾಂಧಿ ಆಹಾರ ರಕ್ಷಣೆ ಕಾನೂನು ಜಾರಿಗೆ ತಂದರು. ಪುಕ್ಕಟೆ ಅಕ್ಕಿ ಕೊಡುವ ಕಾನೂನು ತಂದರು. ಪ್ರತಿಯೊಬ್ಬರಿಗೆ 10 ಕೆಜಿ ಸಣ್ಣಕ್ಕಿ ಕೊಡುತ್ತೇವೆ. 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ. ಉಚಿತ ಬಸ್ ಪಾಸ್ ಕೊಡುತ್ತೇವೆ. ಇದೆಲ್ಲ ನಮ್ಮ ಗ್ಯಾರಂಟಿ ಯೋಜನೆ. ನಾವು ಏನನ್ನು ಹೇಳುತ್ತೇವೆಯೋ, ಅದನ್ನು ಮಾಡುತ್ತೇವೆ” ಎಂದು ತಿಳಿಸಿದರು.

Exit mobile version