Site icon Vistara News

Karnataka Election : ಮೋದಿ ವಿಷದ ಹಾವಿದ್ದಂತೆ ಅಂತ ನಾನು ಹೇಳೇ ಇಲ್ಲ ಎಂದ ಖರ್ಗೆ, ವಿವಾದಕ್ಕೆ ಸಿಲುಕಿದ ತಕ್ಷಣ ಪ್ಲೇಟ್‌ ಬದಲು

karnataka-election: Mallikarjuna Kharge backtracks from Poisonous snake comment on Modi

karnataka-election: Mallikarjuna Kharge backtracks from Poisonous snake comment on Modi

ಗದಗ: ನರೇಂದ್ರ ಮೋದಿ ಅಂದರೆ ವಿಷದ ಹಾವಿದ್ದಂತೆ ಎಂಬ ಹೇಳಿಕೆಯನ್ನು ನೀಡಿ ವಿವಾದಕ್ಕೆ ಗುರಿಯಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯಿಂದ ಭಾರಿ ದಾಳಿ ಎದುರಾಗುತ್ತಿದ್ದಂತೆಯೇ ಉಲ್ಟಾ ಹೊಡೆದಿದ್ದಾರೆ. ನಾನು ಮೋದಿ ಅವರನ್ನು ವಿಷದ ಹಾವು ಎಂದು ಹೇಳಿದ್ದಲ್ಲ… ಬಿಜೆಪಿ ಪಾರ್ಟಿ ಹಾವು ಇದ್ದಂತೆ ಎಂದು ಹೇಳಿದ್ದಾರೆ.

ನರೇಗಲ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಗುರುವಾರ ಮಧ್ಯಾಹ್ನದ ಹೊತ್ತು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ನ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನರೇಂದ್ರ ಮೋದಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

ʻʻಕೆಲವರು ಹೇಳುತ್ತಾರೆ, ಇಡೀ ವಿರೋಧ ಪಕ್ಷಗಳೆಲ್ಲ ಒಂದು ಕಡೆ, ಮೋದಿ ಅವರೊಬ್ಬರೇ ಒಂದು ಕಡೆ. ಮೋದಿ ಒಬ್ಬರೇ ಸಾಕು ಎಲ್ಲರಿಗೂ ಅಂತ. ಹೌದು ಮೋದಿ ಒಬ್ಬರೇ ಸಾಕು, ಮೋದಿ ಒಬ್ಬರೇ ಸಾಕು ದೇಶ ಹಾಳು ಮಾಡುವುದಕ್ಕೆ. ಎಷ್ಟೇ ಹಾಲಿದ್ದರೂ ಒಂದು ತೊಟ್ಟು ಹುಳಿ ಅದನ್ನು ಹಾಳು ಮಾಡಬಲ್ಲದು, ಅದೇ ರೀತಿ ಇವರ ಸಿದ್ಧಾಂತ ಒಂದೇ ಸಾಕು, ದೇಶ ಹಾಳು ಮಾಡುವುದಕ್ಕೆʼʼ ಎಂದರು ಮಲ್ಲಿಕಾರ್ಜುನ ಖರ್ಗೆ.

ʻʻಮೋದಿ ಒಬ್ಬರು ವಿಷದ ಹಾವಿದ್ದಂತೆ. ಹಾಗಂತ ವಿಷ ಇದೆಯಾ ಅಂತ ಏನಾದರೂ ನೆಕ್ಕಲು ಹೋದರೆ ಅವನು ಸತ್ತಂತೆ. ಯಾವ ಕಾರಣಕ್ಕೂ ನೆಕ್ಕಲು ಹೋಗಬೇಡಿ, ಒಳ್ಳೆ ಮನುಷ್ಯ ಇರ್ಬೋದಾ ನೋಡೋಣ ಅಂತ ಪ್ರಯತ್ನ ಮಾಡಬೇಡಿ, ನೆಕ್ಕಲು ಹೋದರೆ ನೀವು ಮಲಗೇ ಬಿಡ್ತೀರಿʼʼ ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದ್ದರು.

ಹೀಗೆ ವಿಧಾನಸಭಾ ಚುನಾವಣೆಯ (Karnataka Election) ಸನಿಹದಲ್ಲಿ ಖರ್ಗೆ ನೀಡಿದ ಹೇಳಿಕೆ ಸಾಕಷ್ಟು ಸದ್ದು ಮಾಡಿತು. ಕಳೆದ ಗುಜರಾತ್‌ ಚುನಾವಣೆಯ ಸಂದರ್ಭದಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದರು.

ಖರ್ಗೆ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಬಿಜೆಪಿ ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿದೆ. ವಿಶ್ವ ನಾಯಕರಾಗಿರುವ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ ನಾಯಕರು ಪದೇಪದೆ ಅಪಮಾನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪ್ಲೇಟ್‌ ಬದಲಿಸಿದ ಮಲ್ಲಿಕಾರ್ಜುನ ಖರ್ಗೆ

ತನ್ನ ಮಾತು ವಿವಾದಕ್ಕೆ ಒಳಗಾಗುತ್ತಿದ್ದಂತೆಯೇ ಎಚ್ಚೆತ್ತ ಮಲ್ಲಿಕಾರ್ಜುನ ಖರ್ಗೆ ಅವರು ಪ್ಲೇಟ್‌ ಬದಲಿಸಿದರು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಬಹಿರಂಗ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಅವರು, ರೋಣ ಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್ ಪಾಟೀಲ ಮನೆಯಲ್ಲಿ ಹೇಳಿಕೆ ನೀಡಿದ ಅವರು ತಾನು ಹೇಳಿದ್ದು ಮೋದಿಗಲ್ಲ, ಬಿಜೆಪಿಗೆ ಎಂದರು.

ʻʻನಾನು ಮೋದಿ ಅವರ ಬಗ್ಗೆ ಹೇಳಿಲ್ಲ. ಬಿಜೆಪಿ ಪಾರ್ಟಿ ಹಾವು ಇದ್ದಂಗೆ… ಸ್ವಲ್ಪ ನೆಕ್ಕಿ ನೋಡ್ತೇವೆ ಅಂದ್ರೆ ಅಲ್ಟಿಮೇಟ್ಲಿ ಡೆತ್ ಅಂತ ಹೇಳಿದ್ದೆ… ಮೋದಿಯವರ ಬಗ್ಗೆ ಹೇಳಿಲ್ಲ.. ವೈಯಕ್ತಿಕವಾಗಿ ನಾವು ಯಾರ ಬಗ್ಗೆಯೂ ಹೇಳೋದಿಲ್ಲ… ವೈಯಕ್ತಿಕವಾಗಿ ಯಾರ ಬಗ್ಗೆಯೂ ನನಗೆ ಅಸೂಯೆ ಇಲ್ಲ… ಬಿಜೆಪಿ ಐಡಿಯಾಲಾಜಿ ಒಂದು ವಿಷದಂತಿದೆ… ಆ ಐಡಿಯಾಲಾಜಿ ನೀವು ಸಪೋರ್ಟ್ ಮಾಡಿದ್ರೆ, ನೀವು ನೆಕ್ಕಿ ನೋಡ್ತೇವಿ ಅಂದ್ರೆ ಸಾವು ಖಚಿತʼʼ ಎಂದು ಹೇಳಿದ್ದೆ ಎಂದಿದ್ದಾರೆ ಖರ್ಗೆ. ಆದರೆ, ಅಷ್ಟು ಹೊತ್ತಿಗೆ ಅವರ ಹೇಳಿಕೆ ವೈರಲ್‌ ಆಗಿದೆ.

ಇದನ್ನೂ ಓದಿ : Karnataka Election : ಮೋದಿ ಅಂದ್ರೆ ವಿಷದ ಹಾವಿದ್ದಂತೆ; ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ

Exit mobile version