Site icon Vistara News

Karnataka Election : ಕೋಟಿ ರೂಪಾಯಿ ಬೆಟ್‌ ಕಟ್ಟಿದ ಪುರಸಭೆ ಸದಸ್ಯನ ಮನೆಗೆ ಪೊಲೀಸರ ದಾಳಿ!

karnataka-election: Man who invited 1 crore betting in election being interogated in Chamarajanagar

karnataka-election: Man who invited 1 crore betting in election being interogated in Chamarajanagar

ಚಾಮರಾಜನಗರ: ಕಂತೆ ಕಂತೆ ಹಣ ಇಟ್ಟುಕೊಂಡು ಒಂದು ಕೋಟಿ ರೂ. ಬೆಟ್‌ ಕಟ್ಟಲು ಆಹ್ವಾನ ನೀಡಿದ ಗುಂಡ್ಲುಪೇಟೆಯ ಪುರಸಭೆ ಸದಸ್ಯ ಕಿರಣ್‌ ಅವರ ಮನೆಗೆ ಪೊಲೀಸರು ಲಗ್ಗೆ ಇಟ್ಟಿದ್ದಾರೆ!

ರಾಜ್ಯ‌ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ಹಲವಾರು ಕಡೆ ಬೆಟ್ಟಿಂಗ್‌ ದಂಧೆ ಜೋರಾಗಿದ್ದು, ಕೆಲವರಂತೂ ಪೊಲೀಸರ ಯಾವ ಹೆದರಿಕೆಯೂ ಇಲ್ಲದೆ ನೇರವಾಗಿ ಸಾಮಾಜಿಕ ಜಾಲತಾಣಗಳಲ್ಲೇ ಬೆಟ್‌ ಕಟ್ಟುತ್ತಿದ್ದಾರೆ. ಇದೇ ರೀತಿ ಓಪನ್‌ ಚಾಲೆಂಜ್‌ ಹಾಕಿದ್ದರು ಕಿರಣ್‌.

ಗುಂಡ್ಲುಪೇಟೆ ಪಟ್ಟಣದ ಪುರಸಭೆ ಸದಸ್ಯ ಕಿರಣ್ ಅವರು ಎದುರುಗಡೆ ಕಂತೆ ಕಂತೆ ಹಣ ಇಟ್ಟುಕೊಂಡು ʻ ಕೋಟಿ ರೂ ಬೆಟ್ಟಿಂಗ್ ಕಟ್ಟಲು ಆಹ್ವಾನ ನೀಡಿದ್ದರು.

ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಗೆಲ್ಲುತ್ತಾರೆ ಎಂದು ಬೆಟ್ ಕಟ್ಟಲು ಕಿರಣ್‌ ಆಹ್ವಾನ ನೀಡಿದ್ದರು. ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಕಟ್ಟುತ್ತೇನೆ, ತಾಕತ್ತಿದ್ದರೆ ಬೆಟ್‌ ಕಟ್ಟಿ ಬನ್ನಿ ಎಂದು ಕಾಂಗ್ರೆಸ್‌ನವರಿಗೆ ಆಹ್ವಾನ ನೀಡಿದ್ದರು.

ನಿಜವೆಂದರೆ ಅದಕ್ಕಿಂತ ಮೊದಲು ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಮೊದಲು ಬೆಟ್‌ ಕಟ್ಟಿದ್ದರು. ಬಳಿಕ ಬಿಜೆಪಿ ಪುರಸಭೆ ಸದಸ್ಯ ಕಿರಣ್‌ ಕೋಟಿ ರೂ. ಇಟ್ಟುಕೊಂಡು ಸವಾಲು ಹಾಕಿದ್ದರು. ಇದೀಗ ಪೊಲೀಸರು ಕಿರಣ್‌ ಮನೆಗೆ ಲಗ್ಗೆ ಇಟ್ಟಿದ್ದಾರೆ.

ನಾಲ್ಕು ಎಕರೆ ಜಮೀನು, 75 ಲಕ್ಷ ರೂ. ಬೆಟ್‌ ಕಟ್ಟಿದ ಕಾಂಗ್ರೆಸಿಗರು

ಈ ನಡುವೆ, ಕಿರಣ್‌ ಅವರ ಒಂದು ಕೋಟಿ ಆಫರ್‌ಗೆ ಪ್ರತಿಯಾಗಿ ಕಂಗ್ರೆಸ್‌ ಕಾರ್ಯಕರ್ತರು ನಾಲ್ಕು ಎಕರೆ ಜಮೀನು ಮತ್ತು 75 ಲಕ್ಷ ರೂ. ಬೆಟ್‌ ಕಟ್ಟಲು ಮುಂದಾಗಿದ್ದಾರೆ. ಮಲ್ಲಯ್ಯನಪುರ ನಿವಾಸಿಗಳು ಈ ಸವಾಲು ಹಾಕಿದ್ದು, ವಿಡಿಯೊಗಳನ್ನು ಜಾಲ ತಾಣದಲ್ಲಿ ಹಾಕುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವುದು ಎಚ್‌.ಎಂ. ಗಣೇಶ್‌ ಪ್ರಸಾದ್‌.

ಬೆಟ್ಟಿಂಗ್‌ಗಾಗಿ ಅಗ್ರಿಮೆಂಟ್‌ ಮಾಡಿಕೊಂಡವರು ಅಂದರ್‌?

ಎಚ್‌.ಡಿ. ಕೋಟೆ ಕ್ಷೇತ್ರದಲ್ಲಿ ಕೂಡಾ ದೊಡ್ಡ ಮಟ್ಟದ ಬೆಟ್ಟಿಂಗ್‌ ನಡೆಯುತ್ತಿದ್ದು, ಛಾಪಾ ಕಾಗದದಲ್ಲಿ 5 ಲಕ್ಷ ರೂ. ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಕೊಂಡಿರುವ ವ್ಯಕ್ತಿಗಳನ್ನು ಪೊಲೀಸರು ಈಗ ಬೆಂಡೆತ್ತುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಮತ್ತು ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ಅವರ ನಡುವೆ ಇಲ್ಲಿ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಜಯರಾಮ ನಾಯ್ಕ ಮತ್ತು ಜೆಡಿಎಸ್‌ ಅಭ್ಯರ್ಥಿ ಪರವಾಗಿ ಪ್ರಕಾಶ್‌ ಹಾಗೂ ಶಿವರಾಜ್‌ ಅವರು ತಲಾ ಐದು ಲಕ್ಷ ರೂ. ಅಗ್ರಿಮೆಂಟ್‌ ಮಾಡಿಕೊಂಡಿದ್ದರು. 10 ಲಕ್ಷ ರೂ.ಯನ್ನು ಪೂಜಾ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ‌ ನೇಮಿಚಂದ್ ಬಳಿ ನೀಡಲಾಗಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಒಂದು ವೇಳೆ ಕಾಂಗ್ರಸ್ಸೂ ಇಲ್ಲ, ಜೆಡಿಎಸ್‌ ಕೂಡಾ ಗೆಲ್ಲದೆ ಬಿಜೆಪಿ ಅಭ್ಯರ್ಥಿ ಗೆದ್ದರೆ ಹಣವನ್ನು ಇಬ್ಬರಿಗೂ ವಾಪಸ್‌ ನೀಡುವ ಬಗ್ಗೆ ಒಪ್ಪಂದವಾಗಿತ್ತು.

ಈ ನಡುವೆ, ಅಗ್ರಿಮೆಂಟ್‌ ಮಾಡಿಕೊಂಡಿರುವ ಬೆಳ್ತೂರು ಗ್ರಾಮದ ಜಯರಾಮ ನಾಯಕ, ಗುಂಡತ್ತೂರು ಗ್ರಾಮದ ಪ್ರಕಾಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧ್ಯಸ್ತಿಕೆ ವಹಿಸಿದ್ದ ಬೆನಕನಹಳ್ಳಿ ಉದ್ಯಮಿ ಬಿ.ಕೆ. ಶಿವರಾಜುಗೂ ಸಂಕಷ್ಟ ಎದುರಾಗಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ : Karnataka Election 2023: ಫಲಿತಾಂಶಕ್ಕೆ ಮುನ್ನ ತಾರಕಕ್ಕೆ ಏರಿದ ಬೆಟ್ಟಿಂಗ್‌ ಹುಚ್ಚು, ಜಮೀನೇ ಮಾರಾಟ!

Exit mobile version