Site icon Vistara News

Karnataka Election : 2013ರಲ್ಲಿ ಬಿಎಸ್‌ವೈ, ಶೋಭಾ ಲೀಲಾ ಪ್ಯಾಲೇಸ್‌ನಲ್ಲಿ ಭೇಟಿ ಆಗಿದ್ದು ಯಾರನ್ನು?; ಹುಳ ಬಿಟ್ಟ ಎಂ.ಬಿ ಪಾಟೀಲ್‌

karnataka-election: MB Patil to disclose BSY, Shobha karandlaje secert meeting in delhi in 2013!

karnataka-election: MB Patil to disclose BSY, Shobha karandlaje secert meeting in delhi in 2013!

ಬೆಂಗಳೂರು: ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B S Yediyurappa) ಮತ್ತು ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಅವರು 2013ರಲ್ಲಿ ದೆಹಲಿಯ ಲೀಲಾ ಪ್ಯಾಲೇಸ್‌ನಲ್ಲಿ ಯಾರನ್ನು ಭೇಟಿಯಾಗಿದ್ದರು ಎನ್ನುವ ಸಂಪೂರ್ಣ ಮಾಹಿತಿ ತನ್ನಲ್ಲಿದೆ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಹೇಳಿಕೆ ನೀಡಿದ್ದಾರೆ. ಅಲ್ಲಿ ಏನೇನು ನಡೆಯಿತು, ಯಾರ ಜತೆ ಏನು ಮಾತುಕತೆ ನಡೆಯಿತು ಎನ್ನುವ ವಿಚಾರವನ್ನು ನಾಲ್ಕು ದಿನಗಳ ಬಳಿಕ ಹೇಳುತ್ತೇನೆ ಎಂದು ತಲೆಗೆ ಹುಳ ಬಿಟ್ಟಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಅವರು ಈಗ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಅವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಂ.ಬಿ ಪಾಟೀಲ್‌ ಅವರು ಈ ರೀತಿ ಹಳೆ ವಿಷಯ ಕೆದಕಿದ್ದಾರೆ ಎಂದು ಹೇಳಲಾಗಿದೆ.

ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದರಿಂದ ಅವರನ್ನು ಚುನಾವಣೆಯ ಕಣದಲ್ಲಿ ಸೋಲಿಸುವ ಜವಾಬ್ದಾರಿಯನ್ನು ಬಿ.ಎಸ್‌. ಯಡಿಯೂರಪ್ಪ ಅವರಿಗೆ ನೀಡಲಾಗಿದೆ. ಯಡಿಯೂರಪ್ಪ ಅವರನ್ನು ಹೆದರಿಸಿ ಅವರ ಮೂಲಕ ಪ್ರಚಾರ ಮಾಡಿಸಲಾಗುತ್ತಿದೆ. ಲಿಂಗಾಯತರನ್ನು ಹಣಿಯಲು ಲಿಂಗಾಯತರನ್ನೇ ಬಳಸಲಾಗುತ್ತಿದೆ ಎಂದು ಎಂ.ಬಿ ಪಾಟೀಲ್‌ ಹೇಳಿದರು.

ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಅವರು ಯಾವ ರೀತಿಯ ಹಿಂಸೆ ಅನುಭವಿಸಿದರು ಎನ್ನುವುದು ಬಿ.ಎಸ್‌. ಯಡಿಯೂರಪ್ಪ ಅವರಿಗೂ ಗೊತ್ತಿದೆ. ಶೋಭಾ ಕರಂದ್ಲಾಜೆ ಅವರೇ ನಿಮಗೂ ಎಲ್ಲವೂ ಗೊತ್ತಿದೆ. ಹೀಗಾಗಿ ನೀವು ಇವರ ಷಡ್ಯಂತ್ರಕ್ಕೆ ಒಳಗಾಗಬೇಡಿ ಎಂದು ಎಂ.ಬಿ ಪಾಟೀಲ್‌ ಹೇಳಿದರು.

ಬಿಜೆಪಿ ನಾಯಕರು ಯಡಿಯೂರಪ್ಪ ಅವರನ್ನು ವಿಧಾನಸಭೆಯಲ್ಲೇ ಕಣ್ಣೀರು ಹಾಕಿಸಿದರು. ಅವರೀಗ ತಮ್ಮ ಮಗನ ಭವಿಷ್ಯಕ್ಕಾಗಿ ಬಿಜೆಪಿ ಪಕ್ಷದಲ್ಲಿದ್ದಾರೆ. ಅವರನ್ನು ಹೆದರಿಸಿ ಲಿಂಗಾಯತ ನಾಯಕರ ವಿರುದ್ಧ ಹೇಳಿಕೆ ಕೊಡಿಸಲಾಗುತ್ತಿದೆ ಎಂದು ಹೇಳಿರುವ ಎಂ.ಬಿ. ಪಾಟೀಲ್‌, ʻʻಇವರು ಕೆಜೆಪಿ ಪಕ್ಷ ಕಟ್ಟಿ ಬಿಜೆಪಿ ಎದೆಗೆ ಚೂರಿ ಹಾಕಿದವರು. ಈಗ ಶೆಟ್ಟರ್, ಸವದಿಯನ್ನು ಸೋಲಿಸುವ ಮಾತನಾಡುತ್ತಿದ್ದಾರೆʼʼ ಎಂದಿ ಲೇವಡಿ ಮಾಡಿದರು.

2013ರಲ್ಲಿ ಏನಾಗಿತ್ತು? ಈಗ ಇಷ್ಟೆಲ್ಲ ಮಾತನಾಡುವ ಯಡಿಯೂರಪ್ಪ ಅವರು ಲೀಲಾ ಪ್ಯಾಲೇಸ್‌ನಲ್ಲಿ ಆವತ್ತು ಯಾರ ಜತೆ ಏನೆಲ್ಲ ಮಾತನಾಡಿದ್ದರು ಎನ್ನುವುದನ್ನು ನಾಲ್ಕು ದಿನದಲ್ಲಿ ನಾನೇ ಹೇಳುತ್ತೇನೆ. ಇದು ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ. ನಿಜವಾದ ಗುಂಡು ಎಂದು ಹೇಳಿದರು ಎಂ.ಬಿ. ಪಾಟೀಲ್‌. ಮೇ 7 ಅಥವಾ 8ರ ಹೊತ್ತಿಗೆ ಎಲ್ಲದರ ಬಗ್ಗೆ ಸ್ಪಷ್ಟನೆ ಕೊಡುತ್ತೇನೆ ಎಂದರು.

ಇದನ್ನೂ ಓದಿ : Karnataka Election 2023: ಶೆಟ್ಟರ್‌, ಸವದಿ ವಿಶ್ವಾಸ ದ್ರೋಹಿಗಳು, ಅವರ ಸೋಲು ಖಚಿತ; ಬಿಎಸ್‌ವೈ ವಾಗ್ದಾಳಿ

Exit mobile version