ಬೆಂಗಳೂರು: ನನ್ನ ರಾಜಕೀಯ ಜೀವನದಲ್ಲಿ ಅನೇಕ ಮುಖ್ಯಮಂತ್ರಿಗಳ ಜತೆಗೆ ಕೆಲಸ ಮಾಡಿದ್ದೇನೆ, ಆದರೆ ಬಸವರಾಜ ಬೊಮ್ಮಾಯಿ ಅವರಷ್ಟು ಸಿಂಪಲ್ ಸಿಎಂ ಅನ್ನು ನೋಡಿಯೇ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಬಣ್ಣಿಸಿದ್ದಾರೆ.
ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕರ್ನಾಟಕ ಭೂಕಂದಾಯ ಯೋಜನೆಯಡಿ 5,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದು ಕಾಂಪ್ಲೆಕ್ಸ್ ಕಟ್ಟುವ ಕಾರ್ಯಕ್ರಮವಲ್ಲ, ಇದು ಬಡವರ ಕಾರ್ಯಕ್ರಮ. ಬಡವರಿಗೆ ಸೈಟ್ ಕೊಡೋ ಕಾರ್ಯಕ್ರಮ ಅಂದ ತಕ್ಷಣ ಸಿಎಂ ಬರ್ತೀನಿ ಅಂತ ಹೇಳಿದ್ರು. ನಾನು ಅದೆಷ್ಟು ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ. ಆದ್ರೆ ಬೊಮ್ಮಾಯಿಯವರಷ್ಟು ಸಿಂಪಲ್ ಸಿಎಂ ನಾನು ನೋಡಿಲ್ಲ. ಕಾಮನ್‌ಮ್ಯಾನ್ ಸಿಎಂ ಬೊಮ್ಮಾಯಿಯವರು. ನಮ್ಮ ನಿಮ್ಮ ಹಾಗೆಯೇ ಎನ್ನಿಸುವಂತಹ ಸಿಎಂ ಅಂದ್ರೆ ಅದು ಬೊಮ್ಮಾಯಿಯವರು ಎಂದು ಬಣ್ಣಿಸಿದರು.
ಚುನಾವಣೆ ಹತ್ತಿರ ಬಂದಾಗ ಕೆಲವರು ಬರ್ತಾರೆ, ಕೆಲವು ಪುಡಾರಿಗಳು ಬರ್ತಾರೆ ವೋಟ್ ಹಾಕಲಿಲ್ಲ ಅಂದ್ರೆ ಹಕ್ಕುಪತ್ರ ಕೊಡಲ್ಲ ಅಂತಾರೆ. ಆದರೆ ನಾನು ಈ ತರಹದ ರಾಜಕಾರಣ ಮಾಡಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಕೆಲವು ತಾಂಡಗಳಿಗೆ ಊರಿನ ಹೆಸರು ಇರಲಿಲ್ಲ. ಊರಿಗೆ ಅಡ್ರೆಸ್ ಇರಲಿಲ್ಲ. ಬಡವರಿಗೆ ಏನ್ ಬೇಕಾದರೂ ಮಾಡು ಅಂತಾ ಸಿಎಂ ಹೇಳಿದ್ರು. ಶ್ರೀರಂಗಪಟ್ಟಣದಲ್ಲೂ ಗ್ರಾಮವೊಂದನ್ನ ಘೋಷಿಸಿದ್ದೇನೆ. ಕಾಫಿ ಬೆಳೆಯುತ್ತಿದ್ದ ಬಡ ರೈತರಿಗೆ 40 ಸಾವಿರ ಎಕರೆ ಲೀಸ್ ಗೆ ಕೊಟ್ಟಿದ್ದೇವೆ.
ಮನೆ ಬಾಗಿಲಿಗೆ ಕಂದಾಯ ಪತ್ರಗಳನ್ನು ಕೊಟ್ಟಿದ್ದೇವೆ. 62 ಸಾವಿರ ರೈತರ ಮನೆಗೆ ಕಂದಾಯ ದಾಖಲೆಗಳನ್ನ ತಲುಪಿಸಿದ್ದೇವೆ. ಆ್ಯಸಿಡ್ ದಾಳಿಗೊಳಗಾದವರ ಬಗ್ಗೆ ಸಿಎಂ ಬಳಿ ಮಾತನಾಡಿದ್ದೆ. ಹಿಂದಿನ ಸರ್ಕಾರಗಳು 2-3 ಸಾವಿರ ರೂ. ಕೊಡ್ತಿದ್ರು. ಈಗ ನಮ್ಮ ಸರ್ಕಾರ 10 ಸಾವಿರ ಕೊಡ್ತಿದೆ. ಕೊವಿಡ್ ಸಮಯದಲ್ಲಿ ಅದೆಷ್ಟೋ ತಂದೆ, ತಾಯಿ ಜೀವ ಕಳೆದುಕೊಂಡಿದ್ದಾರೆ. ಪ್ರಧಾನಿಯವರು ಉಚಿತವಾಗಿ ವ್ಯಾಕ್ಸಿನ್ ಕೊಟ್ರು, ಅದೇ ಚೀನಾದಲ್ಲಿ ವ್ಯಾಕ್ಸಿನ್ ಉಚಿತ ಕೊಡಲಿಲ್ಲ. ಕೋವಿಡ್‌ನಿಂದ ಮೃತರಾದವತರಿಗೆ 1 ಲಕ್ಷ ಕೊಟ್ಟಿದ್ದೇವೆ ಎಂದರು.
ರೈತರ ಜಮೀನಿಗೆ ದಳ್ಳಾಳಿಗಳ ಕಾಟದಿಂದ ಬೆಲೆಯೇ ಇರಲಿಲ್ಲ. 79 ab ತೆಗೆದು ಹಾಕಿ ವ್ಯವಸಾಯ ಮಾಡುವಂತೆ ಮಾಡಿದ್ದೇವೆ. ಬಡವರಿಗೆ ಫ್ಲ್ಯಾಟ್ ತೆಗೆದುಕೊಳ್ಳಲು 3% ಗೆ ಬಡ್ಡಿ ಇಳಿಸಲಾಗಿದೆ. ಲೋಕಸಭೆ ಚುನಾವಣೆ ಬಂದಾಗ ಗ್ಯಾರಂಟಿ, ವಿಧಾನಸಭೆ ಎಲೆಕ್ಷನ್ ಬಂದಾಗ ಗ್ಯಾರಂಟಿ ಅಂತ ಹೇಳಿದ್ರು. ಆದ್ರೆ ಯಾರೂ ಹಕ್ಕುಪತ್ರ ಕೊಟ್ಟಿರಲಿಲ್ಲ. ಆದ್ರೆ ಈಗ ನಾವು ಹಕ್ಕುಪತ್ರ ವನ್ನ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನೀವು ವಾಸಿಸುವ ಜಾಗ ನಿಮ್ಮದಾಗುತ್ತಿದೆ. ಐತಿಹಾಸಿಕ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. 94(ಸಿ),94(ಸಿಸಿ) ಅಡಿಯಲ್ಲಿ ಯೋಜನೆ ರೂಪಿಸಿ ಜಾರಿಗೆ ತರಲಾಗಿದೆ. ಒಬ್ಬ ಮನುಷ್ಯ ತನ್ನ ಇಡೀ ಜೀವ ತಾನು, ಕುಟುಂಬಸ್ಥರ ಬದುಕಿಗಾಗಿ ಹಗಲಿರುಳು ದುಡಿಯುತ್ತಾನೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ತಲೆಮೇಲೆ ಸೂರು ಬೇಕು.
ಇದನ್ನೂ ಓದಿ: Sagara News: ಫೆ.4ರಂದು 390 ರೈತರಿಗೆ ಬಗರ್ ಹುಕುಂ ಹಕ್ಕುಪತ್ರ ವಿತರಣೆ: ಶಾಸಕ ಹಾಲಪ್ಪ
ನಿಮ್ಮ ಜಮೀನು ಇಲ್ಲದೆ ಆತಂಕಕಾರಿ ಬದುಕು ಬದುಕುತಿದ್ದೀರಿ. ಈಗ ಅದನ್ನು ನಿಮಗಾಗಿಯೆ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ. ಯಾರೋ ಬಂದು ಒಕ್ಕಲು ಎಬ್ಬಿಸ್ತಾರೆ ಎಂಬ ಭಯದಿಂದ ಬದುಕುತಿದ್ರಿ. ಶಾಸಕರು, ಜಿಲ್ಲಾಧಿಕಾರಿಗಳ ಬಳಿ ಹಕ್ಕುಪತ್ರಕ್ಕೆ ಮನವಿ ಮಾಡ್ತಿದ್ರಿ. ಜನಪರ ವಿಶ್ವಾಸಹೊಂದಿರುವ ಸರ್ಕಾರ ದಿಟ್ಟ ನಿಲುವು ತೆಗೆದುಕೊಳ್ಳಲು ಸಾಧ್ಯ ಅಂತ ಈ ಯೋಜನೆಯಿಂದ ಸರ್ಕಾರ ಸಾಬೀತು ಮಾಡಿದೆ.
ಸರ್ಕಾರ ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವ ಕೆಲಸ ಮಾಡುತ್ತಿದೆ. ಸಮಸ್ಯೆಯನ್ನು ಕೇವಲ ಅರ್ಥ ಮಾಡಿಕೊಳ್ಳದೆ ಅದಕ್ಕೆ ಶಾಶ್ವತ ಪರಿಹಾರ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ. ಹಕ್ಕುಪತ್ರ ನೋಡಿದಾಗ ನಿಮ್ಮ ಮನೆದೇವ್ರನ್ನ, ಹಿರಿಯರನ್ನ ನೆನೆಸಿಕೊಳ್ಳಿ. ದೈವದ ಫಲ, ಹಿರಿಯರ ಪ್ರಯತ್ನದಿಂದ ಇಂದು ಮನೆ ನಿಮ್ಮದಾಗುತ್ತಿದೆ. ಬಡವರ ಪರ ಸರ್ಕಾರವಿದೆ. ಗರೀಬಿ ಹಠಾವೋ ಅಂದ್ರು, ಆದ್ರೆ ಬಡವರನ್ನ ಸೃಷ್ಟಿಸಿದ್ದರು. ಕೇವಲ ಘೋಷಣೆಗೆ ಮಾತ್ರ ಸೀಮಿತ ಮಾಡಿದ್ರು ಎಂದು ಕಾಂಗ್ರೆಸ್ ಕುರಿತು ಟೀಕೆ ಮಾಡಿದರು.