ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ (Karnataka Elections 2023) ಬಿಜೆಪಿ ಟಿಕೆಟ್ ನಿರಾಕರಿಸಲ್ಪಟ್ಟ ಸಚಿವ ಎಸ್. ಅಂಗಾರ ಅವರು ನನಗಿನ್ನು ರಾಜಕೀಯವೇ ಬೇಡ ಎಂದು ಬೇಸರದಿಂದ ಮಾತನಾಡಿದ್ದಾರೆ. ಆರು ಬಾರಿ ಶಾಸಕರಾಗಿ, ಕೊನೆಗೊಮ್ಮೆ ಮಂತ್ರಿಯಾಗಿಯೂ ಗಮನ ಸೆಳೆದ ಅಂಗಾರ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಿರುವ ಬಿಜೆಪಿ ಭಾಗೀರಥಿ ಮುರುಳ್ಯ ಅವರನ್ನು ಕಣಕ್ಕಿಳಿಸಿದೆ. ಇದು ಅಂಗಾರ ಅವರಿಗೆ ಬೇಸರ ಉಂಟು ಮಾಡಿದೆ.
ಬುಧವಾರ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರೂ ಸೀಟ್ ತಪ್ಪಿಸಿರುವುದಕ್ಕೆ ಬೇಸರವಾಗಿದೆ ಎಂದರು. ಹೀಗಾಗಿ ರಾಜಕೀಯ ನಿವೃತ್ತಿ ಘೋಷಣೆ ಮಾಡುವುದಾಗಿ ಹೇಳಿದರು.
ʻʻಕೆಲವು ನಾಯಕರು ಪೂರ್ವ ಯೋಜಿತವಾಗಿ ಸೀಟ್ ತಪ್ಪಿಸಿದ್ದಾರೆ. ಸೀಟ್ ಕೊಡಲಿಲ್ಲ ಎಂಬುದಕ್ಕಿಂತ ನಡೆಸಿಕೊಂಡ ರೀತಿಯಿಂದ ನೋವಾಗಿದೆʼʼ ಎಂದು ಅವರು ನುಡಿದರು.
ನನ್ನ ಮೇಲೆ ವಿಶ್ವಾಸ ಇಲ್ಲ ಎಂದ ಮೇಲೆ ನಾನು ಯಾಕಿರಬೇಕು?
ʻʻಸೀಟ್‌ಗಾಗಿ ಯಾವುದೇ ಲಾಬಿ ಮಾಡಲಿಲ್ಲ. ಕಳೆದ 30 ವರ್ಷಗಳಲ್ಲಿ ಜನಪರ ನ್ಯಾಯಯುತವಾದ ರಾಜಕೀಯ ಮಾಡಿದ್ದೇನೆ. ನಾನು ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದೇನೆ ಎಂಬುದನ್ನು ಸ್ಪಷ್ಟ ಪಡಿಸಬೇಕು. ರಾಜಕೀಯವಾಗಿ ನಿವೃತ್ತಿ ಪಡೆದುಕೊಳ್ಳುತ್ತೇನೆ. ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ. ರಾಜಕೀಯ ಚಟುವಟಿಕೆಗಳಲ್ಲಿ ಮುಂದೆ ಭಾಗವಹಿಸುವುದಿಲ್ಲ. ನಮ್ಮ ಮೇಲೆ ವಿಶ್ವಾಸ ಇಲ್ಲದ ಮೇಲೆ ಇನ್ನು ಅಗತ್ಯ ಇಲ್ಲʼʼ ಎಂದರು ಎಸ್. ಅಂಗಾರ.
ʻʻಇಷ್ಟು ವರ್ಷ ಪಕ್ಷಕ್ಕಾಗಿ, ಜನಪ್ರತಿನಿಧಿಯಾಗಿ ಕೆಲಸ ಮಾಡಿದ್ದೇನೆ. ಒಂದು ಮಾತು ಕೇಳದೆ ಅಭ್ಯರ್ಥಿ ಬದಲಾವಣೆ ಮಾಡಿರುವುದು ನೋವು ತಂದಿದೆʼʼ ಎಂದು ಹೇಳಿದರು. ಇನ್ನು ರಾಜಕೀಯ ಸಾಕು ಎಂದು ಭಾವುಕರಾಗಿ ನುಡಿದರು.
ʻʻಮತ್ತೊಮ್ಮೆ ಅವಕಾಶ ನೀಡಬೇಕು, ಮತ್ತೆ ನಾನೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ರಾಜ್ಯಾಧ್ಯಕ್ಷರಲ್ಲಿ ಹೇಳಿಕೊಂಡಿದ್ದೆ. ಅವರು ಅವಕಾಶ ಮಾಡಿ ಕೊಡುವುದಾಗಿ ಹೇಳಿದರು. ಆದರೆ ಒಂದು ಮಾತು ಕೇಳದೆ ಬದಲಾವಣೆ ಮಾಡಿದ್ದಾರೆ. ಇಷ್ಟು ಬಾರಿ ಕೇಳದೇ ಸೀಟ್ ನೀಡಿದ್ದರು. ಸೀಟ್ ಬೇಕು ಎಂಬ ಸ್ವಾರ್ಥ ಇಲ್ಲ. ಆದರೆ ಬದಲಾವಣೆ ಮಾಡುವ ಮೊದಲು ಒಂದು ಮಾತು ಹೇಳಬಹುದಿತ್ತು ಎಂಬುದೇ ನೋವುʼʼ ಎಂದು ಅಂಗಾರ ಹೇಳಿದರು.
ಸುಳ್ಯ ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿ ಬಲಾಢ್ಯ ಶಕ್ತಿಯನ್ನು ಹೊಂದಿದೆ. ಹೀಗಾಗಿ ಇಲ್ಲಿ ಯಾರು ನಿಂತರೂ ಗೆಲ್ಲುತ್ತಾರೆ ಎಂಬ ಅಭಿಪ್ರಾಯವಿದೆ. ಜತೆಗೆ ಟಿಕೆಟ್ ಸಿಗದಿದ್ದರೂ ಅಂಗಾರ ಅವರು ಬಂಡಾಯವೇಳುವುದಿಲ್ಲ ಎನ್ನುವುದು ಕೂಡಾ ಖಾತ್ರಿಯಾಗಿದೆ. ಹೀಗಾಗಿ ಹೆಚ್ಚಿನ ಚರ್ಚೆ ಇಲ್ಲದೆ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಆರು ಬಾರಿ ಗೆದ್ದಿರುವ ಎಸ್. ಅಂಗಾರ ಅವರ ವಿರುದ್ಧ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಆಡಳಿತ ವಿರೋಧಿ ಅಲೆಯೂ ಇತ್ತು. ಸಾಕಷ್ಟು ಕಡೆಗಳಲ್ಲಿ ಪ್ರತಿಭಟನೆಯೂ ನಡೆದಿತ್ತು. ಹೀಗಾಗಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಈ ನಡುವೆ ಕಾಂಗ್ರೆಸ್‌ನಿಂದ ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲಾಗಿದ್ದು, ಹೊಸ ಅಭ್ಯರ್ಥಿಗಳು ಹೇಗೆ ಸೆಣಸಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.