ಬೆಂಗಳೂರು: ಸ್ವತಃ ತಾವು ಸಿಎಂ ಆಗಿದ್ದಾಗ ಬಜೆಟ್ ಮಂಡನೆ ವೇಳೆ ವಿದ್ಯುತ್ ಕೈಕೊಟ್ಟಿದ್ದರಿಂದ ಮೊಬೈಲ್ ಲೈಟ್ ಹಾಕಿಕೊಂಡಿದ್ದ ಸಿದ್ದರಾಮಯ್ಯ ಈಗ ಉಚಿತ ವಿದ್ಯುತ್ ಕೊಡುತ್ತಾರೆಯೇ? ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಸಿದ್ದರಾಮಯ್ಯ ಸದನದಲ್ಲಿ ತಮ್ಮ ಪೌರುಷವನ್ನು ಯಾಕೆ ತೋರಿಸುತ್ತಿಲ್ಲ? ತುಂಬ ವಿಚಾರ ಗೊತ್ತಿದ್ದರೆ ಮಾತನಾಡಬಹುದಲ್ಲವೇ? ರಾಜ್ಯಕ್ಕೆ ಅತಿ ಹೆಚ್ಚಿನ ಸಾಲ ಪಡೆದುಕೊಂಡವರು ಸಿದ್ದರಾಮಯ್ಯ ಎಂದರು.
ನಾವು ವಿಪರೀತ ಮಳೆ, ಕೋವಿಡ್ ಸೋಂಕಿನ ಕಾಲದಲ್ಲಿ ಆದಾಯ ಸಂಪೂರ್ಣ ಕುಸಿದ ಕಾರಣ ಸಾಲ ಪಡೆದೆವು. ಆಗ ಗರಿಷ್ಠ ಸಾಲ ಪಡೆದ ಸಿದ್ದರಾಮಯ್ಯರು ಈಗ 200 ಯುನಿಟ್ ಕರೆಂಟ್ ಉಚಿತವಾಗಿ ಕೊಡುವ ಭರವಸೆ ಕೊಡುತ್ತಾರೆ. ಅಧಿಕಾರದಲ್ಲಿದ್ದಾಗ ಪವರ್ ಕಟ್ ಮಾಡಿ, ಬಜೆಟನ್ನು ಲೈಟ್ ಹಾಕಿ ಓದಿ ಮಂಡಿಸಿದ ಮಹಾಪುರುಷ ಅವರು ಎಂದು ತಿಳಿಸಿದರು.
ಶಿವಕುಮಾರ್ ಕುರಿತು ಮಾತನಾಡಿದ ಅಶ್ವತ್ಥನಾರಾಯಣ, ಅವರು ಜಗತ್ ಪ್ರಖ್ಯಾತರು. ಅವರನ್ನು ಕಾನೂನಿನಡಿ ಪ್ರಶ್ನಿಸಬಾರದು. ಏನು ಭ್ರಷ್ಟಾಚಾರ ಮಾಡಿದರೂ ಮಾಡಪ್ಪ ಎನ್ನಬೇಕು. ಇವರ ಪಾಪದ ಕೊಡ ತುಂಬಿ ತುಳುಕಿ ಹರೀತಿದೆ. ಇವರನ್ನು ಸಂಪೂರ್ಣವಾಗಿ ಮನೆಗೆ ಕಳುಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಇಂಧನ ಸಚಿವ ವಿ. ಸುನಿಲ್ ಕುಮಾರ್, ಅಧಿಕಾರದಲ್ಲಿದ್ದಾಗ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸಂಪರ್ಕ ನೀಡದೇ ಸತಾಯಿಸಿದವರು ಈಗ ೨೦೦ ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಡಂಗುರ ಸಾರುತ್ತಿರುವುದು ಈ ಶತಮಾನದ ಅತಿದೊಡ್ಡ ಸುಳ್ಳಾಗಬಹುದು.
ತಾವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಎಲ್ಲ ಎಸ್ಕಾಂಗಳನ್ನು ದಿವಾಳಿ ಅಂಚಿಗೆ ತಳ್ಳಿದ್ದ ಮಹಾನ್ ಆರ್ಥಿಕ ತಜ್ಞರೊಬ್ಬರು ಈಗ ೨೦೦ ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ. ಇದು ಜನಹಿತದ ಹೇಳಿಕೆಯಲ್ಲ. ಎಸ್ಕಾಂಗಳನ್ನು ಖಾಸಗಿಕರಣಗೊಳಿಸುವುದೇ ಈ ಸುಳ್ಳು ಭರವಸೆಯ ಹಿಂದಿರುವ ಉದ್ದೇಶ.
ಎಸ್ಕಾಂಗಳನ್ನು ಖಾಸಗಿಕರಣ ಮಾಡುವುದೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಅಂತಿಮ ಗುರಿ. ಉಚಿತ ವಿದ್ಯುತ್ ನಿಂದ ಎಸ್ಕಾಂಗಳ ಮೇಲೆ ಇನ್ನಷ್ಟು ಹೊರೆಯಾಗುತ್ತದೆ. ಆಗ ನಷ್ಟದಲ್ಲಿರುವ ಎಸ್ಕಾಂಗಳನ್ನು ಖಾಸಗಿಕರಣ ಮಾಡುವ ಸಂಚು ಈ ಘೋಷಣೆಯ ಹಿಂದೆ ಇದೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಕತ್ತಲೆಯಲ್ಲಿ ಬಜೆಟ್ ಓದಿದ್ದನ್ನು ಸಿದ್ದರಾಮಯ್ಯ ಮರೆತಿರಬೇಕು. ನೀವು ಅಧಿಕಾರದಲ್ಲಿದ್ದಾಗ ಎಸ್ಕಾಂಗಳನ್ನು ನಷ್ಟಕ್ಕೆ ದೂಡಿದ್ದಿರಿ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ೯೦೦೦ ಕೋಟಿ ರೂ.ನ್ನು ಎಸ್ಕಾಂಗಳಿಗೆ ನೀಡಿ ನೀವು ಮಾಡಿದ್ದ ಆಡಳಿತ ವೈಫಲ್ಯ ಸರಿಪಡಿಸಿದ್ದೇವೆ. ಮತಕ್ಕಾಗಿ ಇಂಧನ ಇಲಾಖೆ ಮಾರಾಟ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೃಷಿ ಪಂಪ್ ಸೆಟ್ ಗಳಿಗೆ ಹೊಸ ಸಂಪರ್ಕ ನೀಡಿರಲಿಲ್ಲ. ಇದರಿಂದ ರೈತರು ಹಾಗೂ ಕೃಷಿ ವಿಸ್ತರಣೆ ಚಟುವಟಿಕೆಗೆ ತೀವ್ರ ಸಮಸ್ಯೆಯಾಗಿತ್ತು. ೨೦೧೬-೧೭ ರಿಂದ ಕೃಷಿ ಪಂಪ್ ಸೆಟ್ ಗಳಿಗೆ ನೀಡುತ್ತಿದ್ದ ಸಬ್ಸಿಡಿ ಹಣವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡದೇ ಸತಾಯಿಸಿದರು. ಇದರಿಂದ ರೈತರು ಮಾತ್ರವಲ್ಲ ಉದ್ಯಮಕ್ಕೂ ತೊಂದರೆಯಾಯ್ತು. ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ೨೦೧೬ ರಿಂದ ಇಲ್ಲಿಯವರೆಗಿನ ಹಿಂಬಾಕಿಯೂ ಸೇರಿ ೧೮ ಸಾವಿರ ಕೋಟಿ ರೂ. ಸಬ್ಸಿಡಿ ಹಣವನ್ನು ಎಸ್ಕಾಂಗಳಿಗೆ ನೀಡಿದ್ದೇವೆ. ಇಲಾಖೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಹಳ್ಳ ಹಿಡಿಸಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೋಡಿ ಈಗ ಉಚಿತ ವಿದ್ಯುತ್ ಎಂಬ ಸುಳ್ಳು ಭರವಸೆ ನೀಡುತ್ತಿದ್ದಾರೆ. ದುರಾಡಳಿತ ಹಗರಣದ ಮೂಲಕ ಇಂಧನ ಇಲಾಖೆಯನ್ನು ನಷ್ಟಕ್ಕೆ ದೂಡಿದ್ದೇ ನಿಮ್ಮ ಸರ್ಕಾರದ ಮಹತ್ ಸಾಧನೆ ಎಂದು ಟೀಕಿಸಿದ್ದಾರೆ.