ಬೆಂಗಳೂರು: ವಿಧಾನಸಭಾ ಚುನಾವಣೆಯನ್ನು (Karnataka Elections) ಮುಂದಿಟ್ಟುಕೊಂಡು ಪ್ರಧಾನ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮತ್ತೆ ಮತ್ತೆ ರಾಜ್ಯಕ್ಕೆ ದಾಂಗುಡಿ ಇಡುತ್ತಿದ್ದಾರೆ. ಮಾರ್ಚ್ 23ರಿಂದ ಆರಂಭಗೊಂಡು ಇನ್ನು ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರದ್ದೇ ಹವಾ ಇರಲಿದೆ.
ಅಮಿತ್ ಶಾ ಅವರು ಮಾರ್ಚ್ 23ಕ್ಕೆ ಬೆಂಗಳೂರಿಗೆ ಬರಲಿದ್ದು, 24ರಂದು ಸಹಕಾರ ಇಲಾಖೆಯ ದೊಡ್ಡ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ಹೊರವಲಯದ ಕೊಮ್ಮಘಟ್ಟದಲ್ಲಿ ನಡೆಯಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಭಾಗವಹಿಸುವರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರು ರಾಜ್ಯದಲ್ಲಿ ಈಗ ನಡೆಯುತ್ತಿರುವ ವಿಜಯ ಸಂಕಲ್ಪ ರಥಯಾತ್ರೆಯ ಮಹಾ ಸಮಾರೋಪದಲ್ಲಿ ಭಾಗವಹಿಸುತ್ತಿದ್ದಾರೆ. ದಾವಣಗೆರೆಯಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿಕೊಂಡು ಮೋದಿ ಪ್ರವಾಸ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಮೋದಿ ಅವರು ಕೆಆರ್‌ಪುರಂ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಎರಡು ಕಾರ್ಯಕ್ರಮಗಳು ಬೆಳಗ್ಗೆ ನಡೆಯಲಿದ್ದು, ಬಳಿಕ ಅವರು ದಾವಣಗೆರೆಗೆ ತೆರಳಲಿದ್ದಾರೆ.
ಬೆಂಗಳೂರಿನಲ್ಲಿ ಸುಮಾರು ಒಂದೂವರೆ ಕಿ.ಮೀ.ನಷ್ಟು ಉದ್ದಕ್ಕೆ ರೋಡ್ ಶೋ ಕೂಡಾ ಆಯೋಜನೆಯಾಗಿದೆ. ಮೆಟ್ರೋ ರೈಲನ್ನು ಉದ್ಘಾಟನೆ ಮಾಡಿದ ಬಳಿಕ ಪ್ರಧಾನಿ ಮೋದಿ ಅವರು ಅದೇ ರೈಲಿನಲ್ಲಿ ಕೆ.ಆರ್. ಪುರಂನಿಂದ ವೈಟ್ ಫೀಲ್ಡ್‌ವರೆಗೆ ಸಂಚಾರ ಮಾಡಲಿದ್ದಾರೆ
ಮಾರ್ಚ್ 26ರಂದು ಅಮಿತ್ ಶಾ ಮತ್ತೆ ಆಗಮನ
ಮಾರ್ಚ್ 26ರಂದು ಅಮಿತ್ ಶಾ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದು, ಆಗ ಬೆಂಗಳೂರು ನಗರವನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಲಿದ್ದಾರೆ. 26ರಂದು ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಬಸವಣ್ಣ ಮತ್ತು ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ.
ಇದೇ ವೇಳೆ ಮಾರ್ಚ್ 25, 26ರಂದು ಎರಡು ದಿನಗಳ ಕಾಲ ಬೆಂಗಳೂರು ಹಬ್ಬವನ್ನೂ ರಾಜ್ಯ ಸರ್ಕಾರ ಆಯೋಜನೆ ಮಾಡಿದೆ.
ರಾಜ್ಯದಲ್ಲಿ ಬಿಜೆಪಿಯ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಹೆಚ್ಚೆಂದರೆ 80 ಸ್ಥಾನಗಳಲ್ಲಿ ಗೆಲ್ಲಬಹುದು ಎಂಬ ವರದಿಗಳು ಹೈಕಮಾಂಡನ್ನು ತಲುಪಿವೆ ಎನ್ನಲಾಗಿದೆ. ಮೂರು ತಿಂಗಳ ಹಿಂದೆ ಇದ್ದ ಗೆಲುವಿನ ಪರಿಸ್ಥಿತಿ ಈಗಿಲ್ಲ ಎನ್ನುವುದು ಹೈಕಮಾಂಡ್ ತಲೆ ಕೆಡಿಸಿದೆ. ಹೀಗಾಗಿ ಮೋದಿ ಮತ್ತು ಅಮಿತ್ ಶಾ ಅವರು ಪದೇಪದೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ಅಭಿಪ್ರಾಯವಿದೆ.
ಇದನ್ನೂ ಓದಿ : Karnataka Elections : ಕೋಲಾರ, ವರುಣ ಎರಡೂ ಬಿಟ್ಟು ಮತ್ತೆ ಬಾದಾಮಿಗೆ ಹೋಗ್ತಾರಾ ಸಿದ್ದು? ಮನಸು ಅರಿಯಲು ಮಾ. 24ಕ್ಕೆ ಟೂರ್