ರಾಯಚೂರು: ಯಾವ ಮೋದಿಯೂ ಇಲ್ಲ ಪಾದಿಯೂ ಇಲ್ಲ.. ನಾನೇ ಸಿಂಗಲ್ ಆರ್ಮಿ.. ಜಗತ್ತಿನಲ್ಲಿ ಚಿಂತೆ ಇಲ್ಲದ ಪುರುಷ ಅಂದ್ರೆ ನಾನೇ.. ಹೀಗೆ ಬಣ್ಣ ಬಣ್ಣದಲ್ಲಿ, ರಂಗುರಂಗಾಗಿ ಮಾತನಾಡಿ ಸಿಕ್ಕಿಬಿದ್ದಿದ್ದಾರೆ ರಾಯಚೂರು ನಗರದ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ (MLA Shivaraj Patil)!
ಅವರು ಲಹರಿಯಲ್ಲಿ ಮಾತನಾಡಿರುವ ಆಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ನಾನು ಯಾರನ್ನೂ ಕೇರ್ ಮಾಡಲ್ಲ. ನಾನೇ ಸಿಂಗಲ್ ಆರ್ಮಿ ಎಂದೆಲ್ಲ ಹೇಳಿದ್ದಾರೆ.
ಚುನಾವಣೆಯ ಬಿಜೆಪಿ ಟಿಕೆಟ್ ಹಂಚಿಕೆಗಾಗಿ ಶುಕ್ರವಾರ ಬೆಂಗಳೂರಿನಲ್ಲಿ ಮಹತ್ವದ ಸಭೆಯೊಂದು ಆಯೋಜನೆಯಾಗಿರುವ ಹೊತ್ತಿನಲ್ಲೇ ಶಿವರಾಜ್ ಪಾಟೀಲ್ ಅವರ ಆಡಿಯೊ ವೈರಲ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಏನಿದೆ ಆಡಿಯೊದಲ್ಲಿ?
ಕನ್ನಡ ಹೋರಾಟಗಾರರೊಬ್ಬರ ಜತೆ ಮಾತನಾಡಿದ ಆಡಿಯೊ ಇದೆಂದು ಹೇಳಲಾಗಿದೆ. ಆಡಿಯೊದಲ್ಲಿ ರಾಜಕೀಯ ಮತ್ತು ವೈಯಕ್ತಿಕ ವಿಚಾರಗಳು ಚೆನ್ನಾಗಿ ಪ್ರಸ್ತಾಪವಾಗಿವೆ. 3 ನಿಮಿಷ 19 ಸೆಕೆಂಡ್ ಗಳ ಪೋನ್ ಸಂಭಾಷಣೆಯ ಆಡಿಯೋದಲ್ಲಿ ಬಿಜೆಪಿಯ ವರಿಷ್ಠ ನಾಯಕ ನರೇಂದ್ರ ಮೋದಿ ಅವರನ್ನೇ ಅವಹೇಳನ ಮಾಡಿ ತಗಲಾಕಿಕೊಂಡಿದ್ದಾರೆ.
ʻʻಮೋದಿಯ ರೈಟ್ ಹ್ಯಾಂಡ್‌ಗೇ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಕೈ ನನ್ನ ಕಾಲು/ ನಾನೇ ಮೋದಿ, ನಾನೇ ಟ್ರಂಪ್. ಯಾವ ಬದನೆಕಾಯಿ ಮಾತು ಸಹ ನಾನು ಕೇಳಂಗಿಲ್ಲʼʼ ಎಂದು ಶಿವರಾಜ್ ಪಾಟೀಲ್ ಹೇಳಿದ್ದಾರೆ.
ʻʻಯಾವ ಮೋದಿಯೂ ಇಲ್ಲ. ಪಾದಿಯೂ ಇಲ್ಲ. ನಾನೇ ಶಿವರಾಜ್ ಪಾಟೀಲ್. ಶಿವರಾಜ್ ಪಾಟೀಲ್ ಅಂದ್ರೇ ದೇವರು, ನಾನು ಇದ್ರೇನೆ ಜಗತ್ತುʼʼ ಎಂದೆಲ್ಲ ಹೇಳಿಕೊಂಡಿದ್ದಾರೆ.
ನಾನು ಯಾರಿಗೂ ಕೇರ್ ಮಾಡಲ್ಲ, ನಾನು ಸಿಂಗಲ್ ಆರ್ಮಿ
ʻʻಸೋಮಶೇಖರ್ ರೆಡ್ಡಿ, ಶ್ರೀರಾಮುಲುಗೂ ನಾನು ಕೇರ್ ಮಾಡಲ್ಲ. ನನ್ನ ಮುಂದೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ಲೀಡರ್ ಗಳಿಗೆ ಬಾ ಅಂತೀನಾ…? ನನಗೆ ಯಾರೂ ಇಲ್ಲ… ನಾನು ಸಿಂಗಲ್ ಆರ್ಮಿʼʼ ಎಂದಿದ್ದಾರೆ ಶಿವರಾಜ್ ಪಾಟೀಲ್.
ನಾನೇ ದೇವರು, ನನ್ನ ಕಾಲಿಗೆ ಬೀಳಿ ಅಂತೀನಿ!
ʻʻಎಲೆಕ್ಷನ್‌ನಲ್ಲಿ ಸೋತರು ಚಿಂತೆಯಿಲ್ಲ, ಗೆದ್ರು ಚಿಂತೆಯಿಲ್ಲ, ಮಲಗಿದರೂ ಚಿಂತೆಯಿಲ್ಲ… ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ, ಅದಕ್ಕೆ ನಮ್ಮ ಹುಡುಗರಿಗೆ ಹೇಳ್ತೀನಿ. ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ.. ನಾನೇ ದೈವ ಬರಿತೀನಿ.ʼʼ-ಹೀಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಶಿವರಾಜ್ ಪಾಟೀಲ್.
ಇನ್ನೂ ಒಂದಷ್ಟು ಆಡಿಯೊಗಳಿವೆಯಂತೆ!
ಶಿವರಾಜ್ ಪಾಟೀಲ್ ಅವರು ತುಂಬಾ ಲಹರಿಯಲ್ಲಿ ಮಾತನಾಡುವುದು ನೋಡಿದರೆ ಜಾಲಿ ಮೂಡ್‌ನಲ್ಲಿ ಮಾತನಾಡಿದಂತೆ ಕೇಳುತ್ತಿದೆ. ಅವರ ಮಾತಿನ ಒಂದು ಸ್ಯಾಂಪಲ್ ಮಾತ್ರ ಇದು. ಇನ್ನಷ್ಟು ಆಡಿಯೊಗಳಿವೆ ಎಂದು ಹೇಳಲಾಗುತ್ತಿದೆ.
ಶಿವರಾಜ್ ಪಾಟೀಲ್ ಅವರಿಗೆ ಈ ಬಾರಿ ಟಿಕೆಟ್ ತಪ್ಪಿಸಲು ಆಡಿಯೊ ವೈರಲ್ ಕುತಂತ್ರ ನಡೆದಿದೆಯಾ ಎಂಬ ಪ್ರಶ್ನೆಯೂ ಇದೆ. ಜನಪ್ರಿಯ ಶಾಸಕರಾಗಿದ್ದ ಅವರ ವಿರುದ್ಧ ಆಡಿಯೋ ಹರಿಬಿಟ್ಟಿದ್ದು ಯಾರು? ಪಕ್ಷದವರೇನಾ? ಹೊರಗಿನವರಾ? ಎನ್ನುವ ಚರ್ಚೆಯೂ ನಡೆದಿದೆ.
ಯಾರು ಈ ಶಿವರಾಜ್ ಪಾಟೀಲ್?
53 ವರ್ಷದ ಶಿವರಾಜ್ ಪಾಟೀಲ್ ಅವರು 2013 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1989ರಲ್ಲಿ ಪಿಯುಸಿ ಪೂರೈಸಿದ ಇವರು, ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿ ವೈದ್ಯರಾಗಿದ್ದಾರೆ.
ಇದನ್ನೂ ಓದಿ New Parliament Building: ಸಂಸತ್ ಭವನಕ್ಕೆ ಮೋದಿ ಭೇಟಿ; ಹೇಗೆ ಸಾಗುತ್ತಿದೆ ಕಾಮಗಾರಿ? ಇಲ್ಲಿವೆ ಫೋಟೊಗಳು