ಕೋಲಾರ: ಮುಂಬರುವ ಚುನಾವಣೆಗಾಗಿ (Karnataka Election) ಬಿಜೆಪಿಗೆ ಬರುವವರ ಕ್ಯೂ ದೊಡ್ಡದಿದೆ, ಚುನಾವಣೆಗೆ ಮೊದಲು, ನಂತರ ಏನಾದರೂ ಆಗಬಹುದು. ಕಾಂಗ್ರೆಸ್‌ನಿಂದ ಬರುವವರು ಇನ್ನೂ ಇದ್ದಾರೆ. ಯಾರನ್ನೂ ಪಕ್ಷಕ್ಕೆ ತೆಗೆದುಕೊಳ್ಳಬೇಕು, ಬೇಡ ಎಂಬ ಆಯ್ಕೆ ನಮ್ಮಲ್ಲಿದೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಹಾಗೂ ವಿವಿಧ ನಾಯಕರ ಪಕ್ಷಾಂತರದ ಬಗ್ಗೆ ಸ್ಪಂದಿಸಿ ಬಿಜೆಪಿಗೆ ಅರ್ಜಿ ಹಾಕುತ್ತಿರುವವರ ಸಂಖ್ಯೆ ದೊಡ್ಡದಿದೆ. ಗುಪ್ತವಾಗಿರುವ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ನಮ್ಮ ಸರ್ಕಾರ ಮಾಡಲು ಎಷ್ಟು ಶಾಸಕರು ಬೇಕೋ ಅಷ್ಟು ಸ್ಥಾನ ಗೆಲ್ಲುತ್ತೇವೆ. ನಮ್ಮ ಗುರಿ 125 ಸ್ಥಾನ ಗೆಲ್ಲುವುದಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕರಿದ್ದಾರಾ? ಅವರ ಬೆನ್ನು ಅವರಿಗೆ ಕಾಣಲ್ಲ. ಆದರೆ ಬೇರೆಯವರ ಬಗ್ಗೆ ಮಾತನಾಡುತ್ತಾರೆ. ಮೊದಲು ಅವರ ಪಕ್ಷದಲ್ಲಿ ಏನಾಗಿದೆ ಎಂದು ಹುಡುಕಿಕೊಳ್ಳಲಿ, ನಮ್ಮಲ್ಲಿ ನಾಯಕರ ಕೊರತೆ ಏನೂ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ | SCST Reservation | 90 ದಿನದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದಿಲ್ಲ ಎಂದ ಡಿ.ಕೆ. ಶಿವಕುಮಾರ್
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಬರಲಿ, ಬಾರದಿರಲಿ ಅದು ನಮಗೆ ಬೇಡದ ವಿಷಯ. ಆದರೆ ನಾವು ಕೋಲಾರವನ್ನು ಗೆದ್ದೇ ಗೆಲ್ಲುತ್ತೇವೆ. ಯಾವುದೇ ಅನುಮಾನವಿಲ್ಲ.
ರಾಜಕೀಯ ಎನ್ನುವುದು ಯಾರೂ ಊಹೆ ಮಾಡಲಾಗುವುದಲ್ಲ. ನಮ್ಮಲ್ಲಿ ಈಗಾಗಲೇ ಪ್ರಬಲ ಅಭ್ಯರ್ಥಿ ಇದ್ದಾರೆ.
ಯಾರೋ ಒಬ್ಬರು ಗಣ್ಯ ವ್ಯಕ್ತಿ, ಮುಖ್ಯಮಂತ್ರಿಗಳಾಗಿದ್ದವರು ಬಂದು ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಎನ್ನುವುದು ಭ್ರಮೆ ಎಂದರು.
ರಾಜಕೀಯ ಮಾಡೋದು ಲಾಭಕಾಗಿ ಅಲ್ಲ, ಅಭಿವೃದ್ಧಿಗಾಗಿ: ಅಶ್ವತ್ಥನಾರಾಯಣ
ರಾಮನಗರ: ಶ್ರೀರಂಗ ನೀರಾವರಿ ಯೋಜನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 20 ವರ್ಷವಾದರೂ ಮಾಡಲು ಆಗುತ್ತಿರಲಿಲ್ಲ. ಇವರಿಂದ ಒಂದು ಜಮೀನನ್ನಾದರೂ ಸ್ವಾಧೀನಪಡಿಸಿಕೊಳ್ಳಲು ಆಯಿತಾ? ಕೆಂಪಾಪುರದಲ್ಲಿ ಪೂಜೆ ಮಾಡಿ ಹೋದರು. ಕೆಂಪೇಗೌಡ ಹೆಸರು ಹೇಳಿದರು, ಆದರೆ ಒಂದು ನಯಾಪೈಸೆ ಕೆಲಸ ಮಾಡಿದರಾ? ಮಾಗಡಿ ಚತುಷ್ಪಥ ರಸ್ತೆ ಅಭಿವೃದ್ಧಿ ಏನಾಯಿತು? ಎಂದು ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.
ಇದನ್ನೂ ಓದಿ | Karnataka Election | ಶಿವಾಜಿನಗರದಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ 130 ಸ್ಥಾನ ಖಚಿತ: ಸಿಎಂ ಬಸವರಾಜ ಬೊಮ್ಮಾಯಿ
ರಾಜಕೀಯ ಲಾಭಕ್ಕಾಗಿ ರಾಮದೇವರ ಬೆಟ್ಟದಲ್ಲಿ ಮಂದಿರ ನಿರ್ಮಾಣ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮಾಗಡಿಯ ಸಂಕೀಘಟ್ಟದಲ್ಲಿ ಪ್ರತಿಕ್ರಿಯೆ ನೀಡಿ, ಸಂಸ್ಕೃತ ವಿವಿಗೆ 65 ಕೋಟಿ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಮಾಡುತ್ತಿದ್ದೇವೆ. ಎಲ್ಲರಿಗೂ ಉದ್ಯೋಗ ಸಿಗುವ ಕೆಲಸ ಮಾಡುತ್ತಿದ್ದೇವೆ. ಒಬ್ಬರಿಗೆ ಒಂದು ಉದ್ಯೋಗ ಕೊಡಿಸುವ ಕೆಲಸವನ್ನು ಇವರು ಮಾಡಿದ್ದಾರಾ? ರಾಜಕೀಯ ಮಾಡೋದು ಕೇವಲ ಲಾಭಕ್ಕಾಗಿ ಅಲ್ಲ, ಅಭಿವೃದ್ಧಿಗಾಗಿ ಎಂದು ಟೀಕಿಸಿದರು.
ಅಮುಲ್ ಜತೆ ನಂದಿನಿ ವಿಲೀನದ ಬಗ್ಗೆ ಗುಜರಾತಿ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಂದಿನಿ-ಅಮುಲ್ ಹೇಗೆ ವಿಲೀನ ಮಾಡಲು ಆಗುತ್ತದೆ? ಇಂತಹ ತಪ್ಪು ಭಾವನೆಯನ್ನು ಖಂಡಿಸುತ್ತೇನೆ. ಅಮುಲ್ ಜತೆ ಐಸ್ ಕ್ರೀಮ್ ಉತ್ಪಾದನೆ ಯಾರು ಮಾಡಿಕೊಡುತ್ತಿದ್ದರು ಎಂದ ಅವರು, ಇದು ಪರಸ್ಪರ ಸಹಕಾರ ಪಡೆಯುವಂಥದ್ದು. ಅತಿ ಹೆಚ್ಚು ಉತ್ಪಾದನೆ ಆದಾಗ ಅದರ ಖರೀದಿ ಮಾಡಲು ಸಹಭಾಗಿತ್ವ ಇರಬೇಕು. ಆ ದಿಕ್ಕಿನಲ್ಲಿ ಯೋಚನೆ ಮಾಡಲಾಗಿದೆ. ವಿಲೀನ ಹೇಗೆ ಮಾಡುತ್ತಾರೆ ಎಂಬುದನ್ನು ಬುದ್ಧಿವಂತರೇ ಹೇಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ | ನನ್ನ ಬಗ್ಗೆ ಮಾತಾಡಿದರೆ ನಿಮ್ಮದೆಲ್ಲ ಬಿಚ್ಚಿಡಬೇಕಾಗುತ್ತದೆ: ಬಿ.ಕೆ. ಹರಿಪ್ರಸಾದ್‌ಗೆ ಸಿ.ಟಿ. ರವಿ ಎಚ್ಚರಿಕೆ