ಬೆಂಗಳೂರು: ಯಾವುದೇ ಜಾತಿಯ ಹೆಸರು ಅಥವಾ ಹೆಣ್ಣುಮಗಳ ಹೆಸರನ್ನು ಮಾತಿನಲ್ಲಿ ಬಳಸಿ ದಾಳಿ ನಡೆಸಿದ್ದರೆ ನಾನು ರಾಜೀನಾಮೆ ನೀಡುತ್ತೇನೆ ಹಾಗೂ ನೇಣು ಹಾಕಿಕೊಳ್ಳುತ್ತೇನೆ, ನನ್ನದು ತಪ್ಪಿಲ್ಲ ಎಂದರೆ ಡಿ.ಕೆ. ಸುರೇಶ್ ಹಾಗೆಯೇ ಮಾಡುತ್ತಾರೆಯೇ ಎಂದು ಸಚಿವ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುನಿರತ್ನ ಅವರು ತಮಿಳು ಸಮುದಾಯದವರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂಬ ಸಂಸದ ಡಿ.ಕೆ. ಸುರೇಶ್ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಸುದ್ದಿಗೋಷ್ಠಿ ನಡೆಸಿದರು.
ವಿಡಿಯೋ ಪ್ಲೇ ಮಾಡಿ ವೀಕ್ಷಿಸಿದ ನಂತರ ಮಾತನಾಡಿದ ಮುನಿರತ್ನ, ಅವರು ಕಟ್ ಮಾಡಿ ವಿಡಿಯೋ ವೈರಲ್ ಮಾಡಿದ್ದಾರೆ. ಲೋಕಸಭಾ ಸದಸ್ಯರು ನನಗೆ ಸಂಬಂಧಪಟ್ಟಂತೆ ಕೆಲ ಪದ ಬಳಕೆ ಮಾಡಿದ್ದಾರೆ. ಡಿ.ಕೆ. ಸುರೇಶ್ ಮೇಲೆ ನನಗೆ ಬಹಳ ಗೌರವ. ಏಳು ವರ್ಷಗಳ ಕಾಲ ಅವರ ಜತೆಯಲ್ಲಿ ಇದ್ದೆ. ಅವರ ಜತೆ ಇದ್ದಾಗ ಐದು ಭಾಷೆಯಲ್ಲಿ ಮಾತನಾಡಿಸಿದ್ದಾರೆ. ತೆಲುಗು, ತಮಿಳು, ಉರ್ದು ಭಾಷೆಯಲ್ಲಿ ಮಾತನಾಡಿ, ಆ ಮೂಲಕ ಮತ ಬರುತ್ತೆ ಅಂತ ಹೇಳಿದ್ರು. ಯಾವ ಯಾವ ಭಾಷೆ ಮಾತನಾಡುವವರು ಇದ್ದರೋ ಆ ಭಾಷೆಯಲ್ಲಿ ಮಾತನಾಡಿಸುತ್ತಿದ್ದರು.
ನನಗೆ ಎಲ್ಲಾ ಭಾಷೆ ಬರುತ್ತೆ. ನಾನು ಬಿಜೆಪಿ ಗೆ ಬಂದ ಮೇಲೆ ಸಣ್ಣಮಟ್ಟಕ್ಕೆ ಇಳಿಯುತ್ತಿದ್ದಾರೆ. ಕೆಳಮಟ್ಟದ ರಾಜಕಾರಣ ಸುರೇಶ್ ಗೆ ಒಳ್ಳೆಯದಲ್ಲ. ನಿಮ್ಮ ವಕ್ರದೃಷ್ಟಿ ಬೆಂಗಳೂರಿನ ಮೇಲೆ ಬೀರುವುದು ಬೇಡ. ಬೆಂಗಳೂರು ಶಾಂತಿಯುತವಾಗಿದೆ. ಇಲ್ಲಿ ಜಾತಿ ತರಬೇಡಿ ಎಂದರು.
ನನ್ನ ಉಸಿರು, ಜೀವನ ಇಲ್ಲಿಯೇ. ಅವರ ಅಣ್ಣ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂದು ಗಡ್ಡ ತೆಗೆಯುತ್ತಿಲ್ಲ. ಊರೆಲ್ಲ ಸುತ್ತುತ್ತಿದ್ದಾರೆ. ಸಿಎಂ ಆಗಬೇಕು ಅಂತ ಮನವಿ ಮಾಡ್ತಿದ್ದಾರೆ. ತಮ್ಮನಿಗೆ ಬರೀ ರಾಜರಾಜೇಶ್ವರಿ ನಗರದ್ದೇ ಚಿಂತೆ. ಅಣ್ಣನ ಜತೆ ಹೋಗದೇ ಬರೀ ಇಲ್ಲಿ ಕೂತಿದ್ದಾರೆ.
ಸುನಂದಾ ಬೋರೆಗೌಡರ ಹೊಡೆಯಲು 50 ಸಾವಿರ ರೂ. ದುಡ್ಡು ಕೊಟ್ರು. ಯಾರು ಸ್ವಾಮಿ ಕೊಟ್ಟಿದ್ದು? ಸಾಧನೆ ಬಗ್ಗೆ ಮಾತನಾಡೋಣ ಬನ್ನಿ. ನಿಮ್ಮ ಒಳಸಂಚು ನನ್ನ ಗಮನಕ್ಕೆ ಬಂದಿದೆ. ನೀವೇ ಕಾರ್ಯಕರ್ತರ ಮೇಲೆ ದಾಳಿ ಮಾಡಿಸಿ ನನ್ನ ಮೇಲೆ ದೂರು ಕೊಡಲು ರೆಡಿಯಾಗಿದ್ದೀರಿ. ಇದನ್ನ ನಾನು ಪೊಲೀಸರ ಗಮನಕ್ಕೆ ತಂದಿದ್ದೇನೆ.
ನಿಮ್ಮ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಂಟು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಗೆಲ್ಲಲ್ಲ. ಎಂಟು ಕ್ಷೇತ್ರ ಬಿಟ್ಟು ಬರೀ ಇಲ್ಲಿಗೆ ಬರುತ್ತೀರ. ಐದು ವರ್ಷಗಳ ಕಾಲ ಎಲ್ಲಿ ಹೋಗಿದ್ರೋ ಇವರೆಲ್ಲ? ನಿಮ್ಮ ಕಷ್ಟಕ್ಕೆ ಬರದವರನ್ನ ಸೇರಿಸಬೇಡಿ ಎಂದು ಜನರಿಗೆ ಹೇಳಿದ್ದೇನೆ. ಕೋವಿಡ್ ಸಮಯದಲ್ಲಿ ಖಾಲಿ ಪ್ಲೇಟ್ ಅನ್ನ ಹಾಕದವರನ್ನ ಸೇರಿಸಬೇಡಿ ಎಂದು ಹೇಳಿದ್ದೇನೆ. ಕನ್ನಡ ಓದಿ ಎಂದು ಹೇಳಿದ್ದೇನೆ. ಕನ್ನಡ ಭಾಷೆ ಗೌರವಿಸಿ ಎಂದು ಹೇಳಿದ್ದೇನೆ.
ನೆಲ, ಜಲ ಭಾಷೆಗೆ ದ್ರೋಹ ಮಾಡಿದ್ರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ ಆಗುತ್ತೆ. ಇವರ ರೀತಿಯಲ್ಲಿ ನೀಚತನದ ರಾಜಕಾರಣ ಮಾಡಲ್ಲ. ನ್ಯಾಯಯುತ ಚುನಾವಣೆ ನಡೆಸಿ. ನಿಮ್ಮ ಅಣ್ಣನಿಗೆ ಸಹಾಯ ಮಾಡಿ. ನಾನು ಒಕ್ಕಲಿಗರು ಇಲ್ಲವೇ ಹೆಣ್ಣು ಮಗಳು ಅಂತ ಬಳಸಿದ್ರೆ ಈಗಲೇ ರಾಜೀನಾಮೆ ಕೊಡ್ತೀನಿ. ಇಲ್ಲವೇ ಸುರೇಶ್ ರಾಜೀನಾಮೆ ಕೊಡ್ತಾರಾ? ನಾನು ಕ್ರಿಶ್ಚಿಯನ್ ಮತಾಂತರದ ಬಗ್ಗೆ ಮಾತನಾಡಿದ್ದೀನಿ. ಅವತ್ತು ಬರದಿರುವವರು ಇವತ್ತು ಬರುತ್ತಿದ್ದಾರೆ ಅಂತ ಹೇಳಿದ್ದೇನೆ. ಒಕ್ಕಲಿಗರ ಹೆಣ್ಣು ಮಗಳು ಅಂತ ಇದ್ರೆ ನಾನು ನೇಣು ಹಾಕಿಕೊಳ್ಳುತ್ತೇನೆ. ಇಲ್ಲ ಅಂದ್ರೆ ಡಿಕೆ ಸುರೇಶ್ ಸಿದ್ದವಾಗಿದ್ದಾರಾ? ಎಂದು ಪ್ರಶ್ನಿಸಿದರು.