Site icon Vistara News

Karnataka Election : ಭಾರಿ ಮಳೆ; ಮಸ್ಟರಿಂಗ್‌ ಕೇಂದ್ರದಲ್ಲಿದ್ದ ಮರ ಬಿದ್ದು ನೆಲಕ್ಕುರುಳಿದ ಟೆಂಟ್‌

Mustering centre tent collapsed after tree fell on it in Aland

Mustering centre tent collapsed after tree fell on it in Aland

ಕಲಬುರಗಿ: ಜಿಲ್ಲೆಯ ಆಳಂದದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭಾರಿ ಸಮಸ್ಯೆಯಾಗಿದೆ. ಇಲ್ಲಿನ ವಿಧಾನಸಭಾ ಚುನಾವಣಾ (Karnataka Election 2023) ಮಸ್ಟರಿಂಗ್‌ ಕೇಂದ್ರದಲ್ಲಿದ್ದ ಮರವೊಂದು ಉರುಳಿ ಬಿದ್ದ ಹಿನ್ನೆಲೆಯಲ್ಲಿ ಮತದಾನ ಕೇಂದ್ರಗಳಿಗೆ ಇವಿಎಂ ಮೆಷಿನ್‌ ಹಂಚಿಕೆ ಮತ್ತಿತರ ಕಾರ್ಯಗಳಿಗಾಗಿ ಹಾಕಲಾಗಿದ್ದ ಟೆಂಟ್‌ ನೆಲಕ್ಕೆ ಉರುಳಿದೆ.

ಮಸ್ಟರಿಂಗ್‌ ಕೇಂದ್ರದಲ್ಲಿ ಮಳೆಗೆ ಟೆಂಟ್‌ ಕಳಚಿಬಿದ್ದಿರುವುದು.

ಆಳಂದ ತಾಲೂಕಿನ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿರುವ ಮತದಾನ ಕೇಂದ್ರದಲ್ಲಿರುವ (Election center) ಮರ ಉರುಳಿದೆ. ಮತದಾನ ಕೇಂದ್ರದಲ್ಲಿರುವ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿದ್ದು, ಮತದಾನ ಕೇಂದ್ರ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಈ ನಡುವೆ, ಮಳೆಯಿಂದಾಗಿ ಮತದಾನ ಕೇಂದ್ರದಲ್ಲಿನ ವಿದ್ಯುತ್ ಸಂಪರ್ಕ ಕಡಿತವಾಗಿ ಅಧಿಕಾರಿಗಳು ಪರದಾಡಬೇಕಾಯಿತು.

ಟೆಂಟ್‌ನ ಒಳಗಿದ್ದ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು.

ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ: ಮಹಿಳಾ ಇನ್‌ಸ್ಪೆಕ್ಟರ್‌ ಅಮಾನತು

ಬೆಂಗಳೂರು: ಮಸ್ಟರಿಂಗ್‌ ಕೇಂದ್ರದಲ್ಲಿ ಸಿಬ್ಬಂದಿಗಳಿಗೆ ಮತಗಟ್ಟೆ ತರಬೇತಿ ನೀಡುವ ವೇಳೆ ಉದ್ಧಟತನ ತೋರಿಸಿದ್ದಕ್ಕಾಗಿ ಮಹಿಳಾ ಇನ್ಸ್‌ಪೆಕ್ಟರ್‌ ಒಬ್ಬರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಬೆಂಗಳೂರಿನ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿತ್ತು. ಇಲ್ಲಿ ಇನ್ಸ್‌ಪೆಕ್ಟರ್‌ ಭವ್ಯ ಅವರನ್ನು ಅವರನ್ನು ತರಬೇತಿಗೆ ನಿಯೋಜನೆ ಮಾಡಲಾಗಿತ್ತು. ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿಯನ್ನು ಅಲ್ಲಿ ನೀಡಲಾಗುತ್ತಿತ್ತು. ಈ ವೇಳೆ ಅವರು ತರಬೇತಿಗೆ ಹಾಜರಾಗದೆ ಪೇಪರ್ ಓದುತ್ತಾ ಕುಳಿತಿದ್ದರು!

ಪತ್ರಿಕೆ ಓದುತ್ತಾ ಕುಳಿತಿದ್ದ ಇನ್ಸ್‌ಪೆಕ್ಟರ್‌ ಭವ್ಯ ಅವರನ್ನು ನೋಡಲ್ ಅಧಿಕಾರಿ ಹಾಗು ಸೆಕ್ಟರ್ ಅಧಿಕಾರಿ ಪ್ರಶ್ನಿಸಿದಾಗ ಅವರು ಉದ್ಧಟತನ ಮೆರೆದರು ಎನ್ನಲಾಗಿದೆ.

ʻʻನಾನು ಮಾಡುತ್ತಿರುವುದು ಸರಿ , ತರಬೇತಿ ಕೊಡುವುದು ನಿಮ್ಮ ಕೆಲಸ ತರಬೇತಿ ಪಡೆಯುವುದು ಬಿಡುವುದು ನಮ್ಮಿಷ್ಟ. ನೀವ್ ಹೇಳಿದಂತೆ ಕೇಳೊದಕ್ಕೆ ನಾನು ನಿಮ್ಮ ಡಿಪಾರ್ಟ್ಮೆಂಟ್ ಅಲ್ಲ. ಈ ತರಬೇತಿ ಉಪಯೋಗಕ್ಕಿಲ್ಲʼʼ ಎಂದು ಹೇಳುವ ಮೂಲಕ ಭವ್ಯ ಅವರು ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ.

ʻʻನನ್ನ ಬಗ್ಗೆ ಯಾರಿಗೆ ಬೇಕಾದರೂ ದೂರು ನೀಡಿ. ಏನು ಬೇಕಾದರೂ ಮಾಡಿಕೊಳ್ಳಿ. ನಾನು ಇರುವುದೇ ಹೀಗೆʼʼ ಎಂದು ಭವ್ಯ ಹೇಳಿದಾಗ ಅಧಿಕಾರಿಗಳು ಬಿಬಿಎಂಪಿ ಆಯುಕ್ತರಿಗೆ ವಿಷಯ ತಿಳಿಸಿದ್ದರು.

ಬಿಬಿಎಂಪಿ ಆಯುಕ್ತರು ಪ್ರಜಾಪ್ರಾತಿನಿಧ್ಯ ಕಾಯ್ದೆಯಡಿ ಇನ್ಸ್‌ಪೆಕ್ಟರ್‌ ಭವ್ಯ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲು ಸೂಚಿಸಿದರು. ಜಿಲ್ಲಾ ಚುನಾವಣಾಧಿಕಾರಿಗಳ ಮೂಲಕ ಇವರು ಅಮಾನತು ಮಾಡಲಾಗಿದೆ.

ತಾಯಿಯನ್ನು ಕಳೆದುಕೊಂಡರೂ ಕರ್ತವ್ಯಪ್ರಜ್ಞೆ ಮೆರೆದ ಪೊಲೀಸ್‌

ಗದಗ: ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರು ಹೆತ್ತ ತಾಯಿಯನ್ನೇ ಕಳೆದುಕೊಂಡರೂ ಚುನಾವಣಾ ಕೆಲಸಕ್ಕೆ ಹಾಜರಾಗುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಗದಗ ಬೆಟಗೇರಿ ಬಡವಾಣೆ ಠಾಣೆಯ ಕಾನ್ಸ್‌ಟೇಬಲ್‌ ಆಗಿರುವ ಅಶೋಕ್ ಗದಗ ಅವರೇ ಮಾತೃ ವಿಯೋಗದ ನೋವಿನ ನಡುವೆಯೂ ನಡುವೆಯೂ ಕರ್ತವ್ಯಕ್ಕೆ ಹಾಜರಾದರು.

ಅಶೋಕ್‌ ಗದಗ ಅವರ ತಾಯಿ ಶಂಕ್ರವ್ವ ಸತ್ಯಪ್ಪ ಗದಗ (78) ಅನಾರೋಗ್ಯದ ಹಿನ್ನೆಲೆಯಲ್ಲಿ ಸೋಮವಾರ ಸಾವನ್ನಪ್ಪಿದ್ದರು. ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದರು.

ತಾಯಿ ಅಗಲಿದ ದುಃಖದಲ್ಲಿಯೂ ಕರ್ತವ್ಯಕ್ಕೆ ಹಾಜರಾದರು. ಈ ರೀತಿ ಕರ್ತವ್ಯ ಪ್ರಜ್ಞೆ ಮೆರೆದ ಅಶೋಕ್‌ ಅವರನ್ನು ಪೊಲೀಸ್ ಇಲಾಖೆಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಗದಗ ನಗರದ ಜೆಟಿ ಕಾಲೇಜ್ ನಲ್ಲಿ ನಡೆದ ಮಸ್ಟರಿಂಗ್ ಕಾರ್ಯದ ಕರ್ತವ್ಯವನ್ನು ಅವರು ನೆರವೇರಿಸಿದರು. ಅಶೋಕ್‌ ಅವರು ಮೂಲತಃ ಗದಗ ತಾಲೂಕಿನ ಹಾತಲಗೇರಿ ಗ್ರಾಮದವರು.

ಇದನ್ನೂ ಓದಿ: Karnataka Election 2023: ಗದಗ ಮಸ್ಟರಿಂಗ್‌ ಸೆಂಟರ್‌ವೊಳಗೆ ಹಾವು ಪ್ರತ್ಯಕ್ಷ; ಯಲಹಂಕದಲ್ಲಿ ತಲೆ ತಿರುಗಿ ಬಿದ್ದ ಸಿಬ್ಬಂದಿ

Exit mobile version