ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ (Karnataka Election 2023) ಅಖಾಡದಲ್ಲಿ ಏಪ್ರಿಲ್ 29 ಮತ್ತು 30ರಂದು ಧೂಳೆಬ್ಬಿಸಿದ್ದ ಪ್ರಧಾನಿ ನರೇಂದ್ರ ಮೋದಿ (Prime Minister Narendra) ಅವರು ಇದೀಗ ಎರಡನೇ ಸುತ್ತಿನ ಮಿಂಚಿನ ಸಂಚಾರಕ್ಕೆ ರೆಡಿಯಾಗಿದ್ದಾರೆ. ಮೇ 2 ಮತ್ತು 3ರಂದು ರಾಜ್ಯದ ಏಳು ಕಡೆಗಳಲ್ಲಿ ಮೋದಿ ಅವರು ಸಮಾವೇಶ ಮತ್ತು ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ. ಕರಾವಳಿ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕಗಳಲ್ಲಿ ಸಂಚರಿಸಲಿರುವ ಅವರು ಒಟ್ಟು 62 ಕ್ಷೇತ್ರಗಳನ್ನು ಟಾರ್ಗೆಟ್ ಆಗಿ ಇಟ್ಟುಕೊಂಡು ಪ್ರಚಾರ ನಡೆಸಲಿದ್ದಾರೆ.
ಏಪ್ರಿಲ್ 29ರಂದು ಅವರು ಹುಮನಾಬಾದ್, ವಿಜಯಪುರ, ಕುಡಚಿಗಳಲ್ಲಿ ಸಾರ್ವಜನಿಕ ಸಮಾವೇಶಗಳಲ್ಲಿ ಭಾಗವಹಿಸಿದರೆ ಬೆಂಗಳೂರಿನಲ್ಲಿ ಅದ್ಧೂರಿ ರೋಡ್ ಶೋ ನಡೆಸಿದ್ದರು. ಏಪ್ರಿಲ್ 30ರಂದು ಕೋಲಾರ, ಚನ್ನಪಟ್ಟಣ ಬೇಲೂರುಗಳಲ್ಲಿ ಸಮಾವೇಶ ನಡೆಸಿದ್ದರೆ ಮೈಸೂರಿನಲ್ಲಿ ಅವರ ರೋಡ್ ಶೋ ಇತ್ತು.
ಇದೀಗ ಎರಡನೇ ಸುತ್ತಿನ ಮೊದಲದಿನ ನಾಲ್ಕು ಕಾರ್ಯಕ್ರಮಗಳು ಫಿಕ್ಸ್ ಆಗಿವೆ.
ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗ: ಚಳ್ಳಕೆರೆ ಕ್ರಾಸ್‌ನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸಮಾವೇಶ
ಮಧ್ಯಾಹ್ನ 12 ಗಂಟೆಗೆ ವಿಜಯ ನಗರ: ಹೊಸಪೇಟೆಯ ಸರ್ಕಾರಿ ಮುನ್ಸಿಪಲ್ ಮೈದಾನದಲ್ಲಿ ಸಮಾವೇಶ
ಮಧ್ಯಾಹ್ನ 2 ಗಂಟೆಗೆ ರಾಯಚೂರು: ಸಿಂಧನೂರಿಗೆ ಕರಟಗಿ ರಸ್ತೆಯ ಮೈದಾನದಲ್ಲಿ ಸಮಾವೇಶ
ಸಂಜೆ 4 ಗಂಟೆಗೆ ಕಲಬುರಗಿಯಲ್ಲಿ ರೋಡ್ ಶೋ: ಕಲಬುರಗಿಯ ಕೆಎಂಎಫ್‌ನಿಂದ ಸರ್ದಾರ್ ವಲ್ಲಭಬಾಯಿ ವೃತ್ತದವರೆಗೆ- ಹೀಗೆ ಕಾರ್ಯಕ್ರಮಗಳು ವ್ಯವಸ್ಥೆಗೊಂಡಿವೆ.
ಬಿಜೆಪಿಗೆ ಠೇವಣಿ ಇಲ್ಲದ ಕ್ಷೇತ್ರದಲ್ಲಿ ನಮೋ ಸಮಾವೇಶ
ರಾಯಚೂರಿನಲ್ಲಿ ಮೋದಿ ಸಮಾವೇಶ ನಡೆಯುವ ಸಿಂಧನೂರು ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿಗೆ ಠೇವಣಿಯೇ ಸಿಕ್ಕಿಲ್ಲ. ಇಲ್ಲಿ ಸಮಾವೇಶ ನಡೆಸುವ ಮೂಲಕ ಪ್ರಭಾವ ಬೀರಲು ನರೇಂದ್ರ ಮೋದಿ ಯತ್ನಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳೇ ಇದುವರೆಗೆ ಗೆದ್ದಿದ್ದು. ಬಿಜೆಪಿ ಹೊಸ ಟ್ರೆಂಡ್ ಸೃಷ್ಟಿಸಲು ಠೇವಣಿ ಇಲ್ಲದ ಕ್ಷೇತ್ರದಲ್ಲಿ ಸಮಾವೇಶ ಆಯೋಜಿಸಲಾಗಿದೆ.
ವಿಶೇಷವೆಂದರೆ, ಇಲ್ಲಿನ ರಾಯಚೂರು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಪ್ರಭಾವ ತೀವ್ರವಾಗಿದೆ. ಇದನ್ನು ಬಳಸಿಕೊಂಡು 10 ಕ್ಷೇತ್ರಗಳಿಗೆ ಅನುಕೂಲಕರ ರೀತಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ. ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೊಪ್ಪಳ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಉಳಿದಂತೆ ಚಿತ್ರದುರ್ಗ, ವಿಜಯನಗರ, ಕಲಬುರಗಿಯಲ್ಲಿ ಪಕ್ಷದ ಬಲವರ್ಧನೆಗೆ ಮೋದಿ ಪ್ರಭಾವ ಬಳಕೆಯಾಗಲಿದೆ.
ಮೇ 3ರಂದು ಮೂಲ್ಕಿ, ಕಾರವಾರ ಮತ್ತು ಕಿತ್ತೂರುಗಳಲ್ಲಿ ಸಮಾವೇಶ ನಡೆಯಲಿದೆ. ಕರಾವಳಿ, ಮಲೆನಾಡು ಭಾಗವನ್ನು ಕೇಂದ್ರೀಕರಿಸಿ ಈ ದಿನ ಪ್ರಚಾರ ನಡೆಯುತ್ತಿದೆ.
ಮೇ 6 ಮತ್ತು 7ರಂದು ಎಲ್ಲಿ ಪ್ರಚಾರ?
ಮೋದಿ ಅವರು ಮೇ 6 ಮತ್ತು 7ರಂದು ಮೂರನೇ ಮತ್ತು ಅಂತಿಮ ಸುತ್ತಿನ ಪ್ರಚಾರ ನಡೆಸಲಿದ್ದಾರೆ. ಮೇ 6ರಂದು ಚಿತ್ತಾಪುರ, ನಂಜನಗೂಡು ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಮಾವೇಶ ನಡೆದಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ರೋಡ್ ಶೋ ಇರಲಿದೆ. ಮೇ 7ರಂದು ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರದಲ್ಲಿ ಸಮಾವೇಶ ನಡೆಯಲಿದ್ದರೆ, ಬೆಂಗಳೂರು ಸೆಂಟ್ರಲ್‌ನಲ್ಲಿ ರೋಡ್ ಶೋ ಇರಲಿದೆ.
ಇದನ್ನೂ ಓದಿ : Modi in Karnataka: ಮೇ 3ಕ್ಕೆ ಮೂಲ್ಕಿಯಲ್ಲಿ ಪ್ರಧಾನಿ ಮೋದಿ ಸಮಾವೇಶ; ಕುಡ್ಲದ ಆತಿಥ್ಯದಲ್ಲೇನಿದೆ?
karnataka-election: Narendra Modi to enter Karnataka tomorrow for the second round of Election tour