Site icon Vistara News

Karnataka Election : ಬಜರಂಗ ದಳ ಬ್ಯಾನ್‌ ಮಾಡ್ಬೇಕಾಗಿಲ್ಲ, ತಪ್ಪು ಮಾಡಿದಾಗ ಕ್ರಮ ಕೈಗೊಂಡ್ರೆ ಸಾಕು ಎಂದ ರಮ್ಯಾ

Need not to Ban Bajarang dal, opines Actress Ramya

Need not to Ban Bajarang dal, opines Actress Ramya

ವಿಜಯಪುರ: ʻʻಬಜರಂಗ ದಳ ಇರಲಿ, ಯಾವುದೇ ಸಂಘಟನೆ ಇರಲಿ, ನಿಷೇಧ (Bajarangdal Ban) ಮಾಡುವ ಅಗತ್ಯ ಇರಲ್ಲ. ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ತಂದರೆ ಕಾನೂನು ಪ್ರಕಾರ ಕೈಗೊಳ್ಳಲು ಅವಕಾಶವಿದೆ. ಹೀಗಾಗಿ ಬ್ಯಾನ್‌ ಎನ್ನುವುದು ಸರಿಯಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯʼ- ಹೀಗೆಂದು ಹೇಳಿದರು ಚಿತ್ರ ನಟಿ, ಮಾಜಿ ಸಂಸದೆ ರಮ್ಯಾ (Actress Ramya)

ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಹಿರಿಯ ನಾಯಕ ಎಂ.ಬಿ. ಪಾಟೀಲ್‌ (MB Patil) ಅವರ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಅವರು ಎಂ.ಬಿ. ಪಾಟೀಲ್‌ ಅವರ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.

ʻʻಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಧಾರ್ಮಿಕ ವಿಷಯವಾಗಿ ಮಾತನಾಡಿದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸುವ ಅಧಿಕಾರ ಇದೆ. ನ್ಯಾಯಾಲಯ ಈಗಾಗಲೇ ನಿರ್ದೇಶನ ನೀಡಿದೆ. ಹೀಗಾಗಿ ಸಂಪೂರ್ಣವಾಗಿ ಬ್ಯಾನ್‌ ಮಾಡುವುದು ಸರಿಯಲ್ಲ. ಬ್ಯಾನ್ ಎನ್ನುವ ಶಬ್ದ ಸರಿಯಲ್ಲ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯʼʼ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕಿಯಾಗಿರುವ ಚಿತ್ರ ನಟಿ ರಮ್ಯಾ ಅವರು, ʻʻಡಬಲ್ ಇಂಜಿನ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿಯದ್ದು ಡಬಲ್‌ ಎಂಜಿನ್‌ ಸರ್ಕಾರವಲ್ಲ. ಟ್ರಬಲ್‌ ಎಂಜಿನ್‌ ಸರ್ಕಾರʼʼ ಎಂದು ಲೇವಡಿ ಮಾಡಿದರು.

ಎಂ.ಬಿ ಪಾಟೀಲ್‌ ಹೊಗಳಿದ ರಮ್ಯಾ

ʻʻನಾನು ಎಂ.ಬಿ ಪಾಟೀಲ್ ಹಾಗೂ ಇತರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಬಂದಿದ್ದೇನೆ. ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಎಂ ಬಿ ಪಾಟೀಲ್ ಅವರು ನನ್ನ ಪರವಾಗಿ ಪ್ರಚಾರ ಮಾಡಿದ್ದರು. ನನ್ನ ಗೆಲುವಿಗೆ ಸಾಥ್ ನೀಡಿದ್ದರು. ಎಂ.ಬಿ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ, ಅವರೊಬ್ಬ ಉತ್ತಮ ರಾಜಕಾರಣ. ಜಿಲ್ಲೆಯಲ್ಲಿ ನೀರು ಹರಿಸಿದ್ದಾರೆ. ನೀರು ಸಿಕ್ಕ ಕಾರಣ ರೈತರು ತೋಟಗಕಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವಿವಿಧ ಕೃಷಿ ಕಾಯಕಗಳನ್ನು ಮಾಡುತ್ತಿದ್ದಾರೆʼʼ ಎಂದು ಎಂ.ಬಿ. ಪಾಟೀಲ್‌ ಅವರ ಸಾಧನೆಗಳನ್ನು ವಿವರಿಸಿದರು. ಬಬಲೇಶ್ವರದಲ್ಲಿ ಎಂ.ಬಿ ಪಾಟೀಲ್‌ ಪರ ಅಲೆಯಿದೆ ಎಂದ ಅವರು, ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಪುತ್ರ ಗಾಳಿಯಲ್ಲಿ ಗುಂಡು ಹಾರಿಸಿದ್ದು ಭಯಾನಕವಾಗಿದೆ. ಇಲ್ಲಿನ ಮಕ್ಕಳಿಗೆ ಬಂದೂಕು ಬೇಕಾ ಪುಸ್ತಕ ಪೆನ್ನು ಬೇಕಾ ಎಂಬುದರ ನಿರ್ಣಯವಾಗಬೇಕಾಗಿದೆ ಎಂದರು.

ಹತ್ಯೆ ಮಾಡುವ ಕೀಳುಮಟ್ಟಕ್ಕೆ ಇಳಿಯಬಾರದು ಎಂದು ರಮ್ಯಾ

ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬಸ್ಥರನ್ನು ಫಿನಿಷ್‌ ಮಾಡುವುದಾಗಿ ಹೇಳಿದ ಆಡಿಯೋದ ಬಗ್ಗೆ ಆಘಾತ ವ್ಯಕ್ತಪಡಿಸಿದ ಚಿತ್ರನಟಿ ರಮ್ಯಾ, ಇದು ಕೀಳುಮಟ್ಟಕ್ಕೆ ಹೋಗಿರುವ ರಾಜಕಾರಣ ಅನ್ಸುತ್ತೆ.. ಮೊದಲು ಈ ರೀತಿ ಇರುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿ, ಇಶ್ಯೂ ಬಗ್ಗೆ ಫೈಟ್ ಮಾಡುತ್ತಿದ್ದರು. ರಾಜಕಾರಣ ಇಷ್ಟೊಂದು ಕೀಳುಮಟ್ಟಕ್ಕೆ ಹೋಗಿದೆಯಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು.

ರಮ್ಯಾ ರಾಜಕೀಯದಿಂದ ದೂರ ಉಳಿದಿದ್ದೇಕೆ?

ʻʻನಾನು ಸಂಸತ್‌ ಚುನಾವಣೆಯಲ್ಲಿ ಸೋತ ಬಳಿಕ 2017ರಲ್ಲಿ ಎಐಸಿಸಿ ಸೋಷಿಯಲ್ ಮೀಡಿಯಾದ ನೇತೃತ್ವ ವಹಿಸಿದ್ದೆ. ನಂತರ ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದೆ. ಆರೋಗ್ಯ ಸುಧಾರಣೆಯಾದ ಬಳಿಕ ಸಿನಿಮಾ ಹಾಗೂ ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ. ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆʼʼ ಎಂದು ಹೇಳಿದ ರಮ್ಯಾ, ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದರ ಬಗ್ಗೆ ಕಮೆಂಟ್‌ ಮಾಡಲ್ಲ ಎಂದರು.

ಎಂ ಬಿ ಪಾಟೀಲ್ ಪತ್ನಿ ಆಶಾ ಪಾಟೀಲ್, ಪುತ್ರ ಬಸನಗೌಡ ಹಾಗೂ ಕಾಂಗ್ರೆಸ್‌ ಮುಖಂಡರಾದ ಮುಖಂಡರಾದ ವಿದ್ಯಾರಾಣಿ ತುಂಗಳ ಪತ್ರಿಕಾಗೋಷ್ಠಿಯಲ್ಲಿ ರಮ್ಯಾ ಜತೆಗಿದ್ದರು.

ಗೌಡ್ರ ಹುಡುಗನೇ ಬೇಕಾ? ಬೇರೆ ಹುಡುಗನೂ ಓಕೇನಾ?

ರಮ್ಯಾ ಅವರನ್ನು ಕಂಡ ಕೂಡಲೇ ಎದುರಾಗುವ ಮದುವೆ ಯಾವಾಗ ಎನ್ನುವ ಪ್ರಶ್ನೆ ಇಲ್ಲೂ ಎದುರಾಯಿತು. ಈ ಬಾರಿ ಎದುರಾದ ಪೂರಕ ಪ್ರಶ್ನೆ ಎಂದರೆ ಗೌಡರ ಹುಡುಗನೇ ಆಗಬೇಕಾ ಎನ್ನುವುದು!

ಇತ್ತೀಚೆಗೆ ಮಂಡ್ಯದಲ್ಲಿ ಮಾತನಾಡಿದ್ದ ರಮ್ಯ, ಗೌಡ್ರ ಹುಡುಗನನ್ನು ಹುಡುಕಿ ಕೊಡಿ ಎಂದಿದ್ದರು. ವಿಜಯಪುರದ ಪತ್ರಕರ್ತರು, ಗೌಡ್ರೇ ಆಗಬೇಕಾ ಎಂದು ಕೇಳಿದಾಗ, ಹಾಗೇನಿಲ್ಲ ಒಳ್ಳೆ ಹುಡುಗ ಇದ್ರೆ ಸಾಕು. ನೀವೇ (ಮಾಧ್ಯಮದವರು) ಒಳ್ಳೆ ಹುಡುಗ ಹುಡುಕಿಕೊಡಿ ಎಂದು ನಗು ಬೀರಿದರು.

ಇದನ್ನೂ ಓದಿ : Mallikarjun Kharge: ಖರ್ಗೆ ಕುಟುಂಬದ ಸರ್ವನಾಶ; ಮಣಿಕಂಠನ ಆಡಿಯೊ ಅಸಲಿಯೇ ಅಲ್ಲ, ಕಟ್‌ ಆ್ಯಂಡ್ ಪೇಸ್ಟ್‌ ಎಂದ ಅಣ್ಣಾಮಲೈ

karnataka-election: Need not to Ban Bajarang dal, opines Actress Ramya

Exit mobile version