ನವ ದೆಹಲಿ: ʻನಿಮಗೆ ಸರ್ಕಸ್ ನೋಡಬೇಕಾ? ಹಾಗಿದ್ದರೆ ಕರ್ನಾಟಕದಲ್ಲಿ (Karnataka Election 2023) ಕಾಂಗ್ರೆಸ್ (Karnataka Congress) ಹೇಗೆ ಸಿಎಂ ಆಯ್ಕೆ ಮಾಡ್ತಿದೆ ಎನ್ನೋದನ್ನು ನೋಡಿ ಸಾಕುʼʼ ಎಂದು ಟ್ವೀಟ್ ಮಾಡಿದ ಬಿಜೆಪಿಯ ವಕ್ತಾರ ಅಮಿತ್ ಮಾಳವೀಯ (Amit Malviya) ಅವರಿಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಬಿಜೆಪಿ ಕೂಡಾ ತನ್ನ ಮುಖ್ಯಮಂತ್ರಿಗಳ ಆಯ್ಕೆಗಾಗಿ ಸಮಾಲೋಚನೆಗಳನ್ನು ನಡೆಸುತ್ತದೆ. ಆದರೆ, ಯಾವತ್ತೂ ಬಿಜೆಪಿಯ ಸಿಎಂ ಪದ ಆಕಾಂಕ್ಷಿಗಳು ಒಬ್ಬರು ಇನ್ನೊಬ್ಬರ ಮೇಲೆ ಮುಗಿಬೀಳುವುದಿಲ್ಲ. ಬೆಂಬಲಿಗರನ್ನು ಕರೆದುಕೊಂಡು ಬರುವುದಿಲ್ಲ. ಮಾಧ್ಯಮದ ಮೂಲಕ ಬೆದರಿಕೆ ಹಾಕುವುದಿಲ್ಲ ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು. ಜತೆಗೆ ʻʻಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದುವುದು ಬಿಡಿ, ನಿರ್ಧಾರ ತೆಗೆದುಕೊಳ್ಳುವ ತಂಡದಲ್ಲೂ ಇರುವುದಿಲ್ಲ. ಅವರು ಆಗಾಗ ಹೈಕಮಾಂಡ್ ಹೈಕಮಾಂಡ್ ಅನ್ನುತ್ತಿರುತ್ತಾರೆ. ಕಾಂಗ್ರೆಸ್ ಅಧ್ಯಕ್ಷರು ಕೇವ ಒಬ್ಬ ಪೋಸ್ಟ್ ಮ್ಯಾನ್ ರೀತಿಯಲ್ಲಿ ಇದ್ದಾರೆʼʼ ಎಂದು ಅಮಿತ್ ಮಾಳವೀಯ ಹೇಳಿದ್ದರು.
ಇದಕ್ಕೆ ನೆಟ್ಟಿಗರು ತಿರುಗೇಟು ನೀಡಿದ್ದು, ನಿಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂದು ಮೊದಲು ನೋಡಿಕೊಳ್ಳಿ. ಗಾಜಿನ ಮನೆಯಲ್ಲಿ ಇರುವವರು ಅಲ್ಲೇ ಬಟ್ಟೆ ಬದಲಿಸಬಾರದು, ಅಂಡರ್‌ಗ್ರೌಂಡ್‌ನಲ್ಲಿರುವ ಕೋಣೆಗೆ ಹೋಗಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶ (Karnataka Election 2023) ಬಂದು ಇನ್ನೂ 72 ಗಂಟೆಗಳು ಆಗಿಲ್ಲ. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಮುಕ್ತವಾಗಿ ನಡೆಯುತ್ತಿವೆ. 2017ರಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಎಂದು ಘೋಷಿಸಲು ಎಷ್ಟು ದಿನ (9) ತೆಗೆದುಕೊಂಡಿದ್ದೀರಿ ಎಂದು ನೆನಪಿಸಿಕೊಳ್ಳಿ ಎಂದು ಒಬ್ಬ ನೆಟ್ಟಿಗರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸಂಪುಟ ಎಷ್ಟು ಸರಾಗವಾಗಿ ರಚನೆಯಾಯಿತು (35 ದಿನಗಳ ಬಳಿಕ) ಎಂದು ದೇಶವೇ ನೋಡಿದೆ. ಅಸ್ಸಾಂ ಮುಖ್ಯಮಂತ್ರಿ ಆಯ್ಕೆಗೆ ಹತ್ತು ದಿನ ತೆಗೆದುಕೊಂಡಿದ್ದನ್ನೂ ಗಮನಿಸಿದೆ ಎಂದು ಛೂ ಬಾಣ ಬಿಟ್ಟಿದ್ದಾರೆ ಕೆಲವರು.
ʻʻಕರ್ನಾಟಕದಲ್ಲಿ ಜನರ ತೀರ್ಪು ಬಂದು ಇನ್ನೂ 72 ಗಂಟೆಯಾಗಿಲ್ಲ. ನೀವು ಮಾತ್ರ ನ್ಯಾನೋ ಸೆಕೆಂಡ್‌ನಲ್ಲಿ (ಅತಿ ಕಡಿಮೆ ಅವಧಿ) ಸಿಎಂ ಆಯ್ಕೆ ಮಾಡಬೇಕು ಎಂದು ಬಯಸುತ್ತೀರಿ. 2017ರಲ್ಲಿ ನೀವೇ ಯೋಗಿ ಆದಿತ್ಯನಾಥರನ್ನು ಸಿಎಂ ಎಂದು ಪ್ರಕಟಿಸಲು ಒಂದು ವಾರ ತೆಗೆದುಕೊಂಡಿರಿ. ಕಾಂಗ್ರೆಸ್ ಆಗಾಗ ಚುನಾವಣೆಗಳನ್ನು ಗೆಲ್ಲುವುದಿಲ್ಲ. ಹಾಗಾಗಿ ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಹೈಕಮಾಂಡ್ ಕಲ್ಚರ್ ಎಲ್ಲ ಪಕ್ಷದಲ್ಲೂ ಇದೆ ಎಂದು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.
ʻʻಅದೆಲ್ಲ ಇರ್ಲಿ.. ಬಿಜೆಪಿ ಮತ್ತು ಮೋದಿ ಯಾಕೆ ಇಷ್ಟು ಅಪಮಾನಕಾರಿಯಾಗಿ ಸೋತಿರಿ ಎಂದು ಮೊದಲು ಹೇಳಿ. ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಏನೇ ಇರಲಿ. ಅವರು ಕಾಂಗ್ರೆಸ್ ವಿರುದ್ಧ ಬಿಜೆಪಿಯನ್ನು ಎಬ್ಬಿಸಿ ನಿಲ್ಲಿಸಿದ್ದಾರೆ ಎನ್ನುವುದೇ ಸತ್ಯ. ಆದರೆ, ನೀವು ಪ್ರಚಾರದಲ್ಲಿ ಮೋದಿಯ ದೊಡ್ಡ ಕಟೌಟ್ ಹಾಕಿಸಿದಿರಿ, ಯಡಿಯೂರಪ್ಪ ಅವರ ಪಾಸ್ ಪೋರ್ಟ್ ಸೈಜ್ ಫೋಟೊ ಹಾಕಿಸಿದಿರಿ.. ಎಂದು ಇನ್ನೊಬ್ಬ ನೆಟ್ಟಿಗರು ಗೇಲಿ ಮಾಡಿದ್ದಾರೆ.
ಇದನ್ನೂ ಓದಿ: Karnataka CM: ಕೊಟ್ರೆ ಸಿಎಂ ಹುದ್ದೆ ಕೊಡಿ; ಇಲ್ಲಾಂದ್ರೆ ಏನೂ ಬೇಡ: ಹೈಕಮಾಂಡ್ ಎದುರು ಶಿವಕುಮಾರ್ ಖಡಕ್ ಮಾತು