ಬೆಳಗಾವಿ: ಬೆಳಗಾವಿಯ ಮೂರು ಕ್ಷೇತ್ರದಲ್ಲಿ ಅಹಿಂದ, ಮರಾಠ ಸೇರಿದರೆ ಶೇಕಡಾ 74ರಷ್ಟು ಮತಗಳು ಆಗುತ್ತವೆ. ಇಲ್ಲಿ ಬಂದು ದೊಡ್ಡ ದೊಡ್ಡ ಮಾತನಾಡಿ ಹೋಗುತ್ತೀರಲ್ಲವೇ? ನಾವು ಒಂದಾದರೆ ಅವರ ಪರಿಸ್ಥಿತಿ ಏನಾಗುತ್ತದೆ? ಅಹಿಂದ ಇರಬಹುದು, ಮರಾಠ ಇರಬಹುದು ನಾವು ಒಂದು ಟಿಕೆಟ್ ಕೇಳುತ್ತೇವೆ. ಆರು ಪರ್ಸೆಂಟ್ ಇದ್ದವರು 50 ಟಿಕೆಟ್ ಕೇಳುತ್ತಾರೆ. ಚುನಾವಣೆ (Karnataka Election) ಆಗಲಿ ಈ ಸಮುದಾಯವನ್ನು ಒಗ್ಗೂಡಿಸುವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkhiholi) ಗುಡುಗಿದರು. ಈ ಮೂಲಕ ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡಿದರು.
ಗೋಕಾಕ್‌ನಲ್ಲಿ ಭಾನುವಾರ (ಫೆ. ೧೨) ಏರ್ಪಡಿಸಿದ್ದ ಕ್ಷತ್ರಿಯ ಮರಾಠ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಥದ್ದನ್ನೆಲ್ಲ ವಿಚಾರ ಮಾಡಿ ಹೆಜ್ಜೆ ಇಟ್ಟರೆ ಮುಂದಿನ 2023ರ ಚುನಾವಣೆಗೆ ದೊಡ್ಡ ಪ್ರಮಾಣದಲ್ಲಿ ಬರುತ್ತೇವೆ. ಚುನಾವಣೆ ಆಗಲಿ, ಈ ಸಮುದಾಯವನ್ನು ಒಗ್ಗೂಡಿಸಿ ಇಡೀ ರಾಜ್ಯ ನಮ್ಮತ್ತ ನೋಡುವ ಶಕ್ತಿ ಇದೆ. ನಾವೆಲ್ಲರೂ ಒಂದಾಗಿ ಪಕ್ಷಾತೀತವಾಗಿ ಸ್ವಾಮೀಜಿಯವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡೋಣ. ಸ್ವಾಮೀಜಿ ನೇತೃತ್ವದಲ್ಲಿ ಸಮಾಜದ ಬೇಡಿಕೆಯನ್ನು ಮುಂದಿಟ್ಟು ಹೋರಾಡುವ ಮೂಲಕ ವಿಧಾನಸೌಧವನ್ನು ನಡಗುವ ಹಾಗೇ ಮಾಡಬಹುದು ಎಂದು ಹೇಳಿದರು.
ಅಹಿಂದ, ಮರಾಠ ಸೇರಿದರೆ ಶೇಕಡಾ 74ರಷ್ಟು ಮತಗಳು ಆಗುತ್ತವೆ. ಇಲ್ಲಿ ಬಂದು ದೊಡ್ಡ ದೊಡ್ಡ ಮಾತನಾಡಿ ಹೋಗುತ್ತೀರಲ್ಲವೇ? ನಾವು ಒಂದಾದರೆ ಅವರ ಪರಿಸ್ಥಿತಿ ಏನಾಗುತ್ತೆ? ಎಂದು ರಮೇಶ್ ಜಾರಕಿಹೊಳಿ ಹೇಳುವ ಮೂಲಕ ಪರೋಕ್ಷವಾಗಿ ಗೋಕಾಕ್‌ನಲ್ಲಿ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ತಮ್ಮ ವಿರುದ್ಧ ಮಾತನಾಡಿದ್ದ ನಾಯಕರಿಗೆ ಟಾಂಗ್ ನೀಡಿದರು.
ಚುನಾವಣೆಯಲ್ಲಷ್ಟೇ ಒಗ್ಗಟ್ಟಾಗಿದ್ದರೆ ಆಗದು. ನಾವು ಬೇಡಿಕೊಳ್ಳುತ್ತಾ ಅಡ್ಡಾಡೋದಕ್ಕಿಂತ ನಮ್ಮಲ್ಲೇ ಅಧಿಕಾರ ಬರಬೇಕು ಅಂದರೆ ಒಗ್ಗಟ್ಟಾಗಬೇಕು. ಚುನಾವಣೆಯಲ್ಲಿ ಒಗ್ಗಟ್ಟಾಗಬೇಕು. ಬೆಳಗಾವಿ ಜಿಲ್ಲೆಯ ಹದಿನೆಂಟು ಕ್ಷೇತ್ರಗಳ ಪೈಕಿ ಹತ್ತು ಕ್ಷೇತ್ರದಲ್ಲಿ ಮರಾಠ ಸಮುದಾಯ ಇಲ್ಲದೇ ಗೆಲ್ಲಲು ಯಾವುದೇ ಪಕ್ಷಕ್ಕೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಯಾರ ಬೆಂಬಲವೂ ಇಲ್ಲದೇ ಮರಾಠರು ಗೆಲ್ಲುತ್ತಾರೆ. ಪಕ್ಷ ಯಾವುದೇ ಇರಲಿ, ನಾನು ಇಲ್ಲಿ ಒಂದೇ ಪಕ್ಷಕ್ಕೆ ಸೀಮಿತವಾಗಿ ಮಾತನಾಡಲು ಬರುವುದಿಲ್ಲ. ರಾಜ್ಯಸಭಾ ಸದಸ್ಯ ಸ್ಥಾನವನ್ನು ಮರಾಠ ಸಮುದಾಯಕ್ಕೆ ಯಾಕೆ ಕೊಡಲಿಲ್ಲವೆಂದು ನಾನು ಬೆಳಗಾವಿಯಲ್ಲಿ ನಡೆದಿದ್ದ ದೊಡ್ಡ ಸಭೆಯಲ್ಲಿ ಪ್ರಶ್ನೆ ಮಾಡಿದ್ದೆ. ಆ ಸಭೆಯಲ್ಲಿ ಯಡಿಯೂರಪ್ಪ, ಅರುಣ್ ಸಿಂಗ್ ಸೇರಿ ಹಲವರು ಇದ್ದರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಪಕ್ಷೇತರ ಯಾರೇ ಇರಲಿ ಮರಾಠ ಸಮುದಾಯದ ವೋಟ್ ಪಡೆಯಲು ಮಾತ್ರ ಇದೀರಾ ಎಂದು ಕೇಳಿದ್ದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: WhatsApp New Feature: ವಾಟ್ಸಾಪ್‌ನ ಚಾಟ್‌ನೊಳಗೇ 100 ಮೀಡಿಯಾ ಫೈಲ್ ಷೇರ್ ಮಾಡಬಹುದು!
ಖಾನಾಪುರ, ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಯಮಕನಮರಡಿ, ಚಿಕ್ಕೋಡಿ, ಕಾಗವಾಡ, ಅಥಣಿ ಸೇರಿ ಹತ್ತು ಕ್ಷೇತ್ರದಲ್ಲಿ ಮರಾಠರಿದ್ದಾರೆ. ಜಾರಕಿಹೊಳಿ ಕುಟುಂಬವು ಮರಾಠ ಸಮಾಜದ್ದಾಗಿದೆ. ಹಿಂದುಳಿದ ಸಮಾಜ, ಎಸ್‌ಸಿ, ಎಸ್‌ಟಿ, ಮರಾಠ ಸಮಾಜ, ಮುಸ್ಲಿಮರ ಜತೆಗೂ ನಮ್ಮ ಬಾಂಧವ್ಯ ಇದೆ. ಮುಸಲ್ಮಾನರ ಸಮಾಜ ಸಹ ನಮ್ಮದು ಎಂದು ರಮೇಶ್ ಜಾರಕಿಹೊಳಿ ಹೇಳಿದರು.