ಹಾಸನ/ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ಚುನಾವಣೆ (Karnataka Election) ಕಾವು ಏರತೊಡಗಿದೆ. ಇನ್ನು ಜೆಡಿಎಸ್ ಕುಟುಂಬ ಕಲಹ ಮತ್ತಷ್ಟು ಜಟಿಲಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಹಾಸನದಲ್ಲಿ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರೂ ಪಟ್ಟುಬಿಡದ ಭವಾನಿ ರೇವಣ್ಣ ಕ್ಷೇತ್ರ ಸಂಚಾರವನ್ನು ಆರಂಭಿಸಿದ್ದಾರೆ. ಈ ನಡುವೆ ಬುಸ್ತೇನಹಳ್ಳಿಯಲ್ಲಿ ಮುಂದಿನ ಶಾಸಕಿ ಭವಾನಿ ರೇವಣ್ಣ ಎಂಬ ಘೋಷಣೆ ಕೇಳಿಬಂದಿದೆ.
ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲೇಬೇಕೆಂದು ಪಣತೊಟ್ಟಿರುವ ಭವಾನಿ ರೇವಣ್ಣ, ಹಾಸನ ಕ್ಷೇತ್ರದ ಗ್ರಾಮಗಳ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಾಸನ ಹೊರವಲಯದ ಬುಸ್ತೇನಹಳ್ಳಿಯ ಮಾಸ್ತಿಯಮ್ಮ ದೇಗುಲದ ಪೂಜೆಯಲ್ಲಿ ಶುಕ್ರವಾರ (ಜ.೨೭) ಭಾಗಿಯಾಗಿದ್ದರು. ದೇಗುಲ ಜೀರ್ಣೋದ್ಧಾರವಾದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂಜೆಯಲ್ಲಿ ಅವರು ಭಾಗಿಯಾಗಿದ್ದರು.
ಇದನ್ನೂ ಓದಿ: JDS Karnataka : ಎಲ್ಲ ಸೈಲೆಂಟಾಗಿರಿ; ನಾನೇ ಸರಿಮಾಡುವೆ: ಹಾಸನ ಸಮಸ್ಯೆ ಬಗೆಹರಿಸಲು ಸ್ವತಃ ಮೈದಾನಕ್ಕಿಳಿದ ಎಚ್.ಡಿ. ದೇವೇಗೌಡ
ಈ ವೇಳೆ ಮುಂದಿನ ಶಾಸಕಿ ಭವಾನಿ ಎಂದು ಅಲ್ಲಿ ಸೇರಿದ್ದ ಜನ ಘೋಷಣೆ ಕೂಗಿದ್ದಾರೆ. ಮಾಸ್ತಿಯಮ್ಮ ದೇಗುಲ ಉದ್ಘಾಟನೆ ಬಳಿಕ ಅನ್ನದಾನ ಸ್ಥಳದತ್ತ ಭವಾನಿ ರೇವಣ್ಣ ಹೊರಟಿದ್ದರು. ಆಗ ಕಾರ್ಯಕ್ರಮ ಆಯೋಜಕರು ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಾ, “ಮುಂದಿನ ಎಂಎಲ್‌ಎ ಭವಾನಿ ಮೇಡಂ ಅವರ ಕೈಯಿಂದ ಪ್ರಸಾದವನ್ನು ಸ್ವೀಕರಿಸಿ” ಎಂದು ಪ್ರಕಟಣೆ ಹೊರಡಿಸಿದ್ದು ಎಲ್ಲರ ಗಮನ ಸೆಳೆಯಿತು.
ರಾಜಕೀಯದ ಬಗ್ಗೆ ಏನೂ ಪ್ರತಿಕ್ರಿಯೆ ಕೊಡಲ್ಲ- ಭವಾನಿ
ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲದ ಬಗ್ಗೆ ಸದ್ಯಕ್ಕೆ ಏನೂ ಪ್ರತಿಕ್ರಿಯೆ ಕೊಡುವುದಿಲ್ಲ. ದೊಡ್ಡ ಗೇಣಗೆರೆ ಪಂಚಾಯಿತಿ ವ್ಯಾಪ್ತಿಯ ಬುಸ್ತೇನಹಳ್ಳಿ ದೇಗುಲದ ಉದ್ಘಾಟನೆಯಲ್ಲಿ ಭಾಗಿಯಾಗಿದ್ದೇನೆ. ಯಾರು ಏನು ಹೇಳಿದರೂ ನಾನು ಏನನ್ನೂ ಮಾತನಾಡುವುದಿಲ್ಲ. ರಾಜಕೀಯದ ಬಗ್ಗೆ ಏನೂ ಪ್ರತಿಕ್ರಿಯೆ ಕೊಡುವುದಿಲ್ಲ. ಮುಂದೆ ನೋಡೋಣ, ಬಳಿಕ ಮಾತನಾಡುತ್ತೇನೆ ಎಂದು ಭವಾನಿ ರೇವಣ್ಣ ಉತ್ತರಿಸಿದ್ದಾರೆ.
ಭವಾನಿ ಅವರನ್ನು ಬಿಜೆಪಿಗೆ ಆಹ್ವಾನ ನೀಡುವ ಬಗ್ಗೆ ಚಿಂತನೆ ಇತ್ತು ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವಾಲಯದ ಕೆಲಸಕ್ಕೆ ಬಂದಿದ್ದೇನೆ. ಅದನ್ನು ಮಾತ್ರ ಮಾತನಾಡುತ್ತೇನೆ. ಸಿ.ಟಿ. ರವಿ ಹೇಳಿಕೆ ಬಗ್ಗೆ ಅವರನ್ನೇ ಕೇಳಿ ಎಂದು ಹೇಳಿದರು.
ಬಿಜೆಪಿಯಿಂದ ಭವಾನಿ ಒಳ್ಳೇ ಅಭ್ಯರ್ಥಿ: ಸಿ.ಟಿ. ರವಿ
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ನಾನು ಒಂದೇ ಕುಟುಂಬದವರಲ್ಲಿ ಜಗಳ ಹಚ್ವಲು ಬಯಸುವುದಿಲ್ಲ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಭವಾನಿ ರೇವಣ್ಣ ಇಬ್ಬರ ಹೇಳಿಕೆಯನ್ನೂ ಗಮನಿಸಿದ್ದೇನೆ. ಭವಾನಿಯಕ್ಕ, ಹೊಳೆನರಸೀಪುರಕ್ಕೆ ನಿನಗಿಂತ ಒಳ್ಳೇ ಕ್ಯಾಂಡಿಡೇಟ್ ಇಲ್ಲ. ಆದರೆ, ನಮ್ಮ ಪಕ್ಷದಿಂದ ನೀವೇ ಒಳ್ಳೆಯ ಅಭ್ಯರ್ಥಿ ಎಂದು ಹೇಳೋಣ ಎಂದು ಮನಸ್ಸಿನಲ್ಲಿತ್ತು. ನಾನೇಕೆ ರೇವಣ್ಣ-ಭವಾನಿ ಅಕ್ಕನ ಮಧ್ಯೆ ಜಗಳ ಹಚ್ಚಲಿ. ಹಾಗಾಗಿ ನಾನು ಏನೂ ಹೇಳಲ್ಲ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Signature Forgery: ಬಿಎಂಟಿಸಿ ಎಂಡಿ ಸಹಿಯೇ ನಕಲು ಮಾಡಿದ ಅಧಿಕಾರಿಗಳು; ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು
ಟಿಕೆಟ್‌ಗಾಗಿ ಶೃಂಗೇರಿ ಶಾರದಾಂಬೆ ಮೊರೆ ಹೋದರಾ ರೇವಣ್ಣ?
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲಿಯೇ ಟಿಕೆಟ್ ಕೈ ತಪ್ಪುವ ಭೀತಿ ಹಿನ್ನೆಲೆಯಲ್ಲಿ ರೇವಣ್ಣ ಶೃಂಗೇರಿ ಶಾರದಾಂಬೆ ಮೊರೆ ಹೋದರೇ ಎಂಬ ಪ್ರಶ್ನೆ ಕಾಡುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದಲ್ಲಿ ಯಾವುದೇ ರಾಜಕೀಯ ನಿರ್ಣಯ ಕೈಗೊಳ್ಳುವ ಮುನ್ನ ಶಾರದಾಂಬೆ ಮೊರೆ ಹೋಗುವ ವಾಡಿಕೆಯನ್ನು ಇಟ್ಟುಕೊಳ್ಳಲಾಗಿದೆ. ಈಗ ಹಾಸನ ಟಿಕೆಟ್‌ಗಾಗಿ ಕುಟುಂಬದಲ್ಲಿ ಪೈಪೋಟಿ ಏರ್ಪಟ್ಟ ಬೆನ್ನಲ್ಲೇ ಶಾರದಾಂಬೆಗೆ ಎಚ್.ಡಿ. ರೇವಣ್ಣ ಅವರು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದುಕೊಂಡರು.