Site icon Vistara News

Karnataka Election: ಮುಗಿಯದ ಜೆಡಿಎಸ್ ಕದನ; ಹಾಸನದಲ್ಲಿ ಮಹಿಳಾ ಅಭ್ಯರ್ಥಿಗೇ ಟಿಕೆಟ್‌ ಎಂದ ಭವಾನಿ ಬೆಂಬಲಿಗರು

Prajwal Revanna Case

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಕುಟುಂಬ ಕಲಹ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಶತಾಯಗತಾಯ ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಅನ್ನು ಪಡೆಯಲೇಬೇಕು ಎಂಬ ನಿಟ್ಟಿನಲ್ಲಿ ಭವಾನಿ ರೇವಣ್ಣ ಮುಂದಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ಅವರ ಮಹಿಳಾ ಬೆಂಬಲಿಗರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಹಾಸನದಲ್ಲಿ ಮಹಿಳಾ ಅಭ್ಯರ್ಥಿಗೇ ಟಿಕೆಟ್‌ ಕೊಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ.

ಭವಾನಿ ರೇವಣ್ಣ ಅವರು ಈಚೆಗೆ ಕಾರ್ಯಕ್ರಮದಲ್ಲಿ ಈ ಕ್ಷೇತ್ರಕ್ಕೆ ಸ್ವಲ್ಪ ದಿನದಲ್ಲಿಯೇ ತಮ್ಮ ಹೆಸರು ಘೋಷಣೆಯಾಗಲಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ತಿರುಗೇಟು ಕೊಟ್ಟಿದ್ದರು. ಈಗ ಭವಾನಿ ರೇವಣ್ಣ ಅವರ ಅಭಿಮಾನಿಗಳು ಒಂದು ಹೆಜ್ಜೆ ಮುಂದಿಟ್ಟಿದ್ದು, ಈ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯನ್ನೇ ಘೋಷಿಸಬೇಕೆಂದು ಪಟ್ಟುಹಿಡಿದಿದ್ದಾರೆ.

ಹಾಸನ ಕ್ಷೇತ್ರಕ್ಕೆ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಂತೆ ಭವಾನಿ ರೇವಣ್ಣ ಬೆಂಬಲಿಗರು ಚುರುಕಾಗಿದ್ದು, ಭವಾನಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಅವರಿಗೆ ಟಿಕೆಟ್‌ ನೀಡುವ ವಿಚಾರ ಇಂದು-ನಿನ್ನೆಯ ಬೇಡಿಕೆಯಲ್ಲ. ಕಳೆದ ಹತ್ತು ವರ್ಷಗಳಿಂದಲೂ ಅವರಿಗೆ ಟಿಕೆಟ್ ಕೊಡುವಂತೆ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದೇವೆ. ಕುಟುಂಬ ರಾಜಕಾರಣ ಎಂದು ಹೇಳಲು ನಾವೇನು ಭವಾನಿ ರೇವಣ್ಣ ಅವರನ್ನು ನಾಮನಿರ್ದೇಶನ ಮಾಡಲು ಕೇಳುತ್ತಿಲ್ಲ. ಚುನಾವಣೆಯಲ್ಲಿ ಟಿಕೆಟ್ ನೀಡಲಿ, ಅವರು ಗೆದ್ದು ಆಯ್ಕೆಯಾಗಿ ಬರುತ್ತಾರೆ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Panchamasali Reservation : ಮೀಸಲಾತಿ ನೀಡದಿದ್ದರೆ 224 ಕ್ಷೇತ್ರದಲ್ಲೂ ಪ್ರವಾಸ : ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಭವಾನಿ ಅವರಿಗೇ ಈ ಬಾರಿ ಹಾಸನ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂಬುದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಒಕ್ಕೊರಲ ಒತ್ತಾಯವಾಗಿದೆ. ಕಾರ್ಯಕರ್ತರ ಅಭಿಪ್ರಾಯಕ್ಕೆ ನಾಯಕರು ಒಪ್ಪಿಗೆ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಭವಾನಿ ರೇವಣ್ಣ ಹೇಳಿದ್ದೇನು?

ಹಾಸನದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಎಚ್.ಡಿ.‌ರೇವಣ್ಣ ಪತ್ನಿ ಭವಾನಿ ರೇವಣ್ಣ ಭಾಗಿಯಾಗಿ, ಇನ್ನು 90 ದಿನಗಳಲ್ಲಿ ನಮ್ಮ ಚುನಾವಣೆ ಮುಗಿದು ಹೋಗಿರುತ್ತದೆ. ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಕೂಡ ಮಾತನಾಡಿಕೊಂಡು, ನಿರ್ಣಯ ತೆಗೆದುಕೊಂಡಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿಯೇ ನಮ್ಮ ಹೆಸರು ಕೂಡ ಹೇಳುತ್ತಾರೆ ಎಂದು ಹೇಳಿದ್ದರು.

ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ಏನು?

ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರ ಸ್ಪರ್ಧೆಯ ಅನಿವಾರ್ಯತೆ ಇದ್ದಿದ್ದರೆ ನಾನೇ ಹೇಳುತ್ತಿದ್ದೆ, ಕಣಕ್ಕೆ ಇಳಿಯುವಂತೆ ಸೂಚಿಸುತ್ತಿದ್ದೆ. ಇನ್ನು ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿಯನ್ನು ನಿಲ್ಲಿಸಿದ ಕಾರಣವೇ ಬೇರೆ ಇತ್ತು. ಪಕ್ಷದ ಮರ್ಯಾದೆ ಉಳಿಸಲು ಅವರನ್ನು ಸ್ಪರ್ಧೆಗೆ ನಿಲ್ಲುವಂತೆ ಸೂಚಿಸಿದ್ದೆ. ಈ ವಿಚಾರದಲ್ಲಿ ಯಾವುದೇ ಗೊಂದಲಗಳು ಬೇಡ. ನಮ್ಮ ಕುಟುಂಬದಲ್ಲಿ ಯಾವುದೇ ಸಂಘರ್ಷಗಳೂ ಇಲ್ಲ ಎಂದು ಕುಮಾರಸ್ವಾಮಿ ರಾಯಚೂರು ಜಿಲ್ಲೆಯ ಗಾಣದಾಳ ಗ್ರಾಮದಲ್ಲಿ ಜನವರಿ ೨೫ರಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: Tech Layoffs: 3900 ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್ ನೀಡಲು ಮುಂದಾದ ಐಬಿಎಂ

ಪಕ್ಷದ ಲಕ್ಷಾಂತರ ಜನರಿಗೆ ಕರೆ ಕೊಡುವ ಜವಾಬ್ದಾರಿ ನನ್ನದು. ಚನ್ನಪಟ್ಟಣದಲ್ಲಿ 20 ವರ್ಷದಿಂದ ಗೆಲ್ಲಲು ಆಗಿರಲಿಲ್ಲ. ಆದರೆ, ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಬಳಿಕ ಚನ್ನಪಟ್ಟಣದಲ್ಲಿ ಅಭ್ಯರ್ಥಿ ಇಲ್ಲವೆಂದು ಒತ್ತಡ ಹಾಕಿದರು. ಆದರೆ, ಸೋಲು ಕಂಡರು. ಆದರೆ, ಹಾಸನದಲ್ಲಿ ಚಿತ್ರಣ ಬೇರೆಯೇ ಇದೆ. ಅಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ಇಲ್ಲಿ ಕುಟುಂಬ ರಾಜಕೀಯದ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಆ ಮೂಲಕ ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್‌ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಎಚ್.ಪಿ.ಸ್ವರೂಪ್ ಹೇಳಿದ್ದೇನು?

ಇನ್ನು ಈ ಬಗ್ಗೆ ನಾಲ್ಕು ಬಾರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ದಿವಂಗತ ಎಚ್.ಎಸ್.‌ಪ್ರಕಾಶ್ ಪುತ್ರ, ಜೆಡಿಎಸ್ ಟಿಕೆಟ್‌ ಪ್ರಬಲ ಆಕಾಂಕ್ಷಿ ಎಚ್.ಪಿ.ಸ್ವರೂಪ್ ಸಹ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ್ದು, ತಾವೂ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದಾರೆ. ಭವಾನಿ‌ ಮೇಡಂ ಯಾವ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಜೆಡಿಎಸ್ ವರಿಷ್ಠರು ಯಾವ ತೀರ್ಮಾನ ತೆಗೆದುಕೊಂಡರೂ ಆ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನಾನು ಆಕಾಂಕ್ಷಿ, ನನಗೇ ಟಿಕೆಟ್ ಕೊಡುತ್ತಾರೆ ಎನ್ನುವ ಭರವಸೆ ಇದೆ ಎಂದು ಹೇಳಿದ್ದರು.

ನಮ್ಮ ತಂದೆ ಪಕ್ಷಕ್ಕೆ ಅವರದ್ದೇ ಆದ ಕೊಡುಗೆಯನ್ನು ನೀಡಿದ್ದಾರೆ. ದೇವೇಗೌಡರು ನಮ್ಮ ತಂದೆಯವರನ್ನು ಜೆಡಿಎಸ್‌ಗೆ ಕರೆದುಕೊಂಡು ಬಂದು ಆರು ಭಾರಿ ಟಿಕೆಟ್ ಕೊಟ್ಟಿದ್ದಾರೆ. ನಾವೂ ಆ ಕುಟುಂಬಕ್ಕೆ ಋಣಿಯಾಗಿರುತ್ತೇವೆ. ನಮ್ಮ ತಂದೆ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ. ಹಾಗಾಗಿ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಸ್ವರೂಪ್ ತಿಳಿಸಿದ್ದರು.

ಇದನ್ನೂ ಓದಿ: Paresh Mesta: 5 ವರ್ಷವಾದರೂ ತಪ್ಪದ ಕೋರ್ಟ್‌ ಅಲೆದಾಟ; ಶಾಸಕ ದಿನಕರ ಶೆಟ್ಟಿ ವಿರುದ್ಧ ಹಿಂದು ಕಾರ್ಯಕರ್ತರ ಆಕ್ರೋಶ

ದೇವೇಗೌಡರೇ ಅಂತಿಮ ಎಂದಿದ್ದ ಪ್ರಜ್ವಲ್ ರೇವಣ್ಣ

ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್‌ ನೀಡುವ ವಿಚಾರ ದೊಡ್ಡವರಿಗೆ ಬಿಟ್ಟಿದ್ದು. ಅದನ್ನು ರೇವಣ್ಣ ಅಥವಾ ಕುಮಾರಸ್ವಾಮಿ ಅವರಾಗಲಿ ನಿರ್ಧರಿಸುವುದಕ್ಕೆ ಆಗಲ್ಲ. ಯಾವುದೇ ಕ್ಷೇತ್ರದ ಅಭ್ಯರ್ಥಿಯಾದರೂ ದೇವೇಗೌಡರು ನಿರ್ಧರಿಸಬೇಕು ಎಂದು ಭವಾನಿ ರೇವಣ್ಣ ಅವರ ಪುತ್ರ, ಸಂಸದ ಪ್ರಜ್ವಲ್‌ ರೇವಣ್ಣ ಮಂಗಳವಾರ (ಜ.೨೪) ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಾಸನ ಕ್ಷೇತ್ರ ಎಚ್‌.ಡಿ.ದೇವೇಗೌಡರಿಗಾಗಿ ಇರುವ ಕ್ಷೇತ್ರ. ನಾನು ಕೂಡ ಹಾಸನದ ಸಂಸದ ಆಗಬೇಕೆಂದು ಬಯಸಿರಲಿಲ್ಲ. ನಾನು ವಿಧಾನಸಭಾ ಕ್ಷೇತ್ರವನ್ನು ಕೇಳಿದ್ದೆ. ಆದರೆ, ಅವರೇ ಎಂಪಿ ಆಗು ಎಂದು ಹೇಳಿದ್ದರು. ಹೀಗಾಗಿ ನಾನು ಅಲ್ಲಿ ಸ್ಪರ್ಧಿಸಿದ್ದೆ. ಆದ್ದರಿಂದ ದೇವೇಗೌಡರು ಏನು ನಿರ್ಧರಿಸುತ್ತಾರೋ ಅದೇ ಅಂತಿಮ ಎಂದು ಹೇಳಿದ್ದರು.

Exit mobile version