Site icon Vistara News

Karnataka Election: ನಾನು ಪ್ರಚಾರಕ್ಕೆ ಬಳಸಲು ಜನರಿಂದ ಹಣ ಕೇಳಿದ್ದೇನೆ: ಸುನೀಲ್‌ ಕುಮಾರ್‌ಗೆ ಮುತಾಲಿಕ್‌ ತಿರುಗೇಟು

V Sunil kumar- Pramod muthalik

ಉಡುಪಿ: ವಿಧಾನಸಭಾ ಚುನಾವಣಾ (Karnataka Election) ಕಣ ರಂಗೇರುತ್ತಿದೆ. ಹಲವಾರು ಕ್ಷೇತ್ರಗಳು ಇಂದು ಅದರದ್ದೇ ಆದ ರೀತಿಯಲ್ಲಿ ವಿಶೇಷತೆ ಹಾಗೂ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಕೆಲವು ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿಗಳು ಭಾರಿ ಸವಾಲನ್ನು ಒಡ್ಡುವ ಸಾಧ್ಯತೆಯೂ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿರುವ ಕ್ಷೇತ್ರಗಳಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರವೂ ಒಂದು. ಇಲ್ಲಿ ಹಾಲಿ ಸಚಿವ ಸುನಿಲ್ ಕುಮಾರ್ ವರ್ಸಸ್ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಂಬಂತೆ ಬಿಂಬಿತವಾಗುತ್ತಿದ್ದು, ವಾಕ್ಸಮರಗಳು ತಾರಕಕ್ಕೇರಿದೆ. ಇದೇ ವೇಳೆ ಸಾರ್ವಜನಿಕರಿಂದ ಪ್ರವೋದ್‌ ಮುತಾಲಿಕ್‌ ಹಣ ಕೇಳಿರುವುದು ಚರ್ಚಾ ವಿಷಯವಾಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.

ತನ್ನಲ್ಲಿ ಚುನಾವಣೆಯನ್ನು ಎದುರಿಸಲು ಸಾಕಷ್ಟು ಹಣವಿಲ್ಲ. ಆದರೆ, ಜನಸೇವೆ ಮಾಡಬೇಕೆಂಬುದು ಆಶಯವಾಗಿದೆ. ಅಲ್ಲದೆ, ಹಿಂದು ಅಸ್ತಿತ್ವಕ್ಕಾಗಿ ನನ್ನನ್ನು ಜನ ಬೆಂಬಲಿಸಬೇಕಿದೆ. ಈ ನಿಟ್ಟಿನಲ್ಲಿ ನನ್ನ ಚುನಾವಣೆಯ ಖರ್ಚಿಗೆ ಜನರೇ ಹಣ ನೀಡಬೇಕು ಎಂದು ಪ್ರಮೋದ್ ಮುತಾಲಿಕ್ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುನಿಲ್‌ ಕುಮಾರ್‌, “ನೀವು ಹಣ ಮಾಡಲು ಕಾರ್ಕಳಕ್ಕೆ ಬಂದಿದ್ದಾ? ಎಂದು ಪ್ರಶ್ನೆ ಮಾಡಿದ್ದರು. ಈಗ ಮುತಾಲಿಕ್‌ ಈ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸುನಿಲ್ ಕುಮಾರ್ ಆತಂಕಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ. ದುಡ್ಡೇ ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ. ಸುನಿಲ್‌ ಕುಮಾರ್‌ ಅವರೇ, ನಾನು ದುಡ್ಡಿಗೋಸ್ಕರ ಕಾರ್ಕಳಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ಸುನಿಲ್ ಕುಮಾರ್ ಎಲ್ಲಿದ್ದರು? ಈಗ ಎಲ್ಲಿ ತಲುಪಿದ್ದಾರೆ? ಏನು ಆಗಿದ್ದಿರಿ? ಈಗೇನು ಆಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನೀವು ಹತಾಶೆಯ ಮನೋಭಾವನೆಯನ್ನು ವ್ಯಕ್ತಪಡಿಸಿದ್ದೀರಿ. ಮುತಾಲಿಕ್ ಹಣ ಮಾಡುವವನಲ್ಲ, ಈ ಆರೋಪ ನಿಮಗೆ ಶೋಭೆ ತರುವುದಿಲ್ಲ. ಕಾರ್ಯಕರ್ತರ ಓಡಾಟ ಊಟ ತಿಂಡಿ ಪ್ರವಾಸಕ್ಕೆ ನೂರು ರೂಪಾಯಿ ಕೇಳಿದ್ದೇನೆ. ಕಾರ್ಕಳದ 40 ಹಳ್ಳಿ ತಲುಪಲು ನಾನೊಬ್ಬನೇ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಹಣ ಕೇಳಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: WPL 2023: ಆರ್​ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್​

ಡೋಂಗಿ ಹಿಂದುವಾದ, ಭ್ರಷ್ಟಾಚಾರ ವಿರುದ್ಧ ನಾನು ಹೋರಾಡಲು ಬಂದಿದ್ದೇನೆ. ಅಸಲಿ ಹಿಂದುತ್ವ ತೋರಿಸಿ ಕೊಡಲು ಕಾರ್ಕಳಕ್ಕೆ ಬಂದಿದ್ದೇನೆ. ಮತದ ಜತೆಗೆ ಮತದಾರರಿಂದ ನೂರು ರೂಪಾಯಿ ಕೇಳುತ್ತಿದ್ದೇನೆ. ನಾನು ನಿಮ್ಮ ತರ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್, ಬೇನಾಮಿ ಜಮೀನು ಮಾಡಿದ್ದರೆ ಹಣ ಕೇಳುತ್ತಿರಲಿಲ್ಲ. ನನ್ನ ಬಳಿ ಏನೂ ಇಲ್ಲ. ನಾನು ಜನರಿಂದ ಹಣ ಕೇಳುತ್ತಿದ್ದೇನೆ ಎಂದು ಮುತಾಲಿಕ್‌ ಹೇಳಿದ್ದಾರೆ.

Exit mobile version