ಬಾಗಲಕೋಟೆ: ಇಲ್ಲಿ ಗೆದ್ದರೆ ಬೆಂಗಳೂರನ್ನೇ ಕಂಟ್ರೋಲ್ ಮಾಡಬಹುದು ಎಂದು ಮಾಜಿ ಸಚಿವ ಕೆಆರ್‌ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ವಿಡಿಯೊ ವೈರಲ್ ಆಗಿದೆ. ಶನಿವಾರ ರಾತ್ರಿ ಜಿಲ್ಲೆಯ ಇಳಕಲ್‌ನ ನಂದವಾಡಗಿ ಗ್ರಾಮದ ಮಹಾಂತಲಿಂಗ ಶಿವಾಚಾರ್ಯ ಮಠಕ್ಕೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ ಮಾತನಾಡುವ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಹೊತ್ತಿನಲ್ಲಿ ಇವರ ಈ ಹೇಳಿಕೆಯ ವಿಡಿಯೊ ವೈರಲ್ ಆಗಿದೆ.
ಶ್ರೀಮಠದ ನೂತನ ಪೀಠಾಧಿಪತಿ ಡಾ. ಚನ್ನಬಸವ ದೇವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿದರು. ಇತ್ತೀಚೆಗೆ ಮಠದ ಕಾರ್ಯಕ್ರಮಕ್ಕೆ ರೆಡ್ಡಿ ಅವರನ್ನು ಆಹ್ವಾನಿಸಲಾಗಿತ್ತು. ಅಂದು ಕಾರ್ಯಕ್ರಮಕ್ಕೆ ಬರಲು ಆಗದಿದ್ದರಿಂದ ಶನಿವಾರ ರಾತ್ರಿ ಭೇಟಿ ನೀಡಿದ್ದರು.
ಈ ವೇಳೆ ಜನಾರ್ದನ ರೆಡ್ಡಿ ಅವರನ್ನು ಶ್ರೀಮಠದ ಪೀಠಾಧಿಪತಿಗಳಾದ ಡಾ. ಚನ್ನಬಸವ ದೇವರು ಶಾಲು ಹೊದಿಸಿ ಆಶೀರ್ವದಿಸಿದರು. ಈ ವೇಳೆ ಅಲ್ಲಿದ್ದವರೊಂದಿಗೆ ಸಹಜವಾಗಿ ಮಾತನಾಡುತ್ತಿರುವಾಗ, “ಇಲ್ಲಿ ಗೆದ್ದರೆ ಬೆಂಗಳೂರನ್ನು ಕಂಟ್ರೋಲ್ ಮಾಡಬಹುದು. ಆ ಬಳಿಕ ಈ ಭಾಗದಲ್ಲಿ ಅಭಿವೃದ್ಧಿ ಮಾಡಬಹುದು” ಎಂದು ರೆಡ್ಡಿ ನಗನಗುತ್ತಲೇ ಹೇಳಿದರು.
ಇದನ್ನೂ ಓದಿ: ಸಿಟ್ಟಿಗೆದ್ದು ಗಿರವಿ ಅಂಗಡಿಗೆ ಬೆಂಕಿ ಇಟ್ಟ ಗ್ರಾಹಕ; ಗಾಯಗೊಂಡ ಮಾಲೀಕ
ವಾರದಲ್ಲಿ 2 ಬಾರಿ ಇಳಕಲ್‌ಗೆ ಭೇಟಿ
ಜನಾರ್ದನ ರೆಡ್ಡಿ ಅವರು ಒಂದೇ ವಾರದಲ್ಲಿ ಇಳಕಲ್ ತಾಲೂಕಿಗೆ ಎರಡು ಸಲ ಭೇಟಿ ನೀಡಿದ್ದಾರೆ. ಕೆಆರ್‌ಪಿಪಿ ವತಿಯಿಂದ ಹುನಗುಂದ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆಯೇ ಎಂಬ ಚರ್ಚೆ ಈಗ ಹುಟ್ಟಿಕೊಂಡಿದೆ. ರೆಡ್ಡಿ ಸ್ಪರ್ಧೆ ಮಾಡುವ ಗಂಗಾವತಿ ಕ್ಷೇತ್ರಕ್ಕೆ ಸಮೀಪದಲ್ಲಿಯೇ ಹುನಗುಂದ ಕ್ಷೇತ್ರವಿರುವುದರಿಂದ ಇಲ್ಲಿ ಸ್ಪರ್ಧೆ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
ಕಳೆದ ವಾರ ಇಳಕಲ್ ನಗರದ ಸೈಯದ್ ಮುರ್ತುಜಾ ಶಾ ಖಾದ್ರಿ ದರ್ಗಾಕ್ಕೆ ರೆಡ್ಡಿ ಭೇಟಿ ನೀಡಿದ್ದರು. ಮುಸ್ಲಿಂ ಮುಖಂಡರ ಜತೆ ಚರ್ಚೆ ನಡೆಸಿದ್ದರು. ಈ ವೇಳೆ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಪ್ರಚಾರ ಪಡೆದಿರುವ ಪಕ್ಷೇತರ ಅಭ್ಯರ್ಥಿ ಎಸ್.ಆರ್. ನವಲಿಹಿರೇಮಠ ಅವರನ್ನೇ ಕೆಆರ್‌ಪಿಪಿ ಅಭ್ಯರ್ಥಿಯನ್ನಾಗಿ ಮಾಡಿದರೆ ತಮ್ಮ ಪಕ್ಷಕ್ಕೆ ಅನುಕೂಲ ಎಂದು ಮುಸ್ಲಿಂ ಮುಖಂಡರು ಸಲಹೆ ನೀಡಿದ್ದಾರೆಂದು ಹೇಳಲಾಗಿದೆ.