Site icon Vistara News

Karnataka Election: ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ; ಭವಾನಿ ಅಗತ್ಯವಿದ್ದರೆ ನಾನೇ ಹೇಳುತ್ತಿದ್ದೆ: ಎಚ್.ಡಿ. ಕುಮಾರಸ್ವಾಮಿ

Karnataka Election news jds have capable candidate in Hassan If Bhavani needed it I would have said it myself says HD Kumaraswamy

ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಹಾಸನ ಕ್ಷೇತ್ರದಲ್ಲಿ ತಾವೇ ನಿಲ್ಲುವುದಾಗಿ ಭವಾನಿ ರೇವಣ್ಣ (Bhavani Revanna) ಹೇಳಿಕೊಂಡಿರುವುದು ಜೆಡಿಎಸ್‌ನಲ್ಲಿ ಆಂತರಿಕ ತಿಕ್ಕಾಟಕ್ಕೆ ಕಾರಣವಾಗಿದೆ. ಈ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಚುನಾವಣೆಗೆ ನಿಲ್ಲಬೇಕು ಎನ್ನುವ ಆಕಾಂಕ್ಷೆ ಇರುವುದು ತಪ್ಪಲ್ಲ. ಆದರೆ, ಈಗಾಗಲೇ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಭವಾನಿ ಅವರಿಗೆ ಟಿಕೆಟ್‌ ಕೊಡುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.

ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರ ಸ್ಪರ್ಧೆಯ ಅನಿವಾರ್ಯತೆ ಇದ್ದಿದ್ದರೆ ನಾನೇ ಹೇಳುತ್ತಿದ್ದೆ, ಕಣಕ್ಕೆ ಇಳಿಯುವಂತೆ ಸೂಚಿಸುತ್ತಿದ್ದೆ. ಇನ್ನು ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿಯನ್ನು ನಿಲ್ಲಿಸಿದ ಕಾರಣವೇ ಬೇರೆ ಇತ್ತು. ಪಕ್ಷದ ಮರ್ಯಾದೆ ಉಳಿಸಲು ಅವರನ್ನು ಸ್ಪರ್ಧೆಗೆ ನಿಲ್ಲುವಂತೆ ಸೂಚಿಸಿದ್ದೆ. ಈ ವಿಚಾರದಲ್ಲಿ ಯಾವುದೇ ಗೊಂದಲಗಳು ಬೇಡ. ನಮ್ಮ ಕುಟುಂಬದಲ್ಲಿ ಯಾವುದೇ ಸಂಘರ್ಷಗಳೂ ಇಲ್ಲ ಎಂದು ಕುಮಾರಸ್ವಾಮಿ ಗಾಣದಾಳ ಗ್ರಾಮದಲ್ಲಿ ಮಾಧ್ಯಮದವರಿಗೆ ತಿಳಿಸಿದರು.

ಪಕ್ಷದ ಲಕ್ಷಾಂತರ ಜನರಿಗೆ ಕರೆ ಕೊಡುವ ಜವಾಬ್ದಾರಿ ನನ್ನದು. ಚನ್ನಪಟ್ಟಣದಲ್ಲಿ 20 ವರ್ಷದಿಂದ ಗೆಲ್ಲಲು ಆಗಿರಲಿಲ್ಲ. ಆದರೆ, ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಬಳಿಕ ಚನ್ನಪಟ್ಟಣದಲ್ಲಿ ಅಭ್ಯರ್ಥಿ ಇಲ್ಲವೆಂದು ಒತ್ತಡ ಹಾಕಿದರು. ಆದರೆ, ಸೋಲು ಕಂಡರು. ಆದರೆ, ಹಾಸನದಲ್ಲಿ ಚಿತ್ರಣ ಬೇರೆಯೇ ಇದೆ. ಅಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ಇಲ್ಲಿ ಕುಟುಂಬ ರಾಜಕೀಯದ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: Karnataka Election : ಕಾಂಗ್ರೆಸ್‌ ಎಂದರೆ ಪ್ರೆಷರ್‌ ಕುಕ್ಕರ್‌ ಪಕ್ಷ: ಸಿಎಂ ಬೊಮ್ಮಾಯಿ ಹೊಸ ವ್ಯಾಖ್ಯಾನ

ಭವಾನಿ ರೇವಣ್ಣ ಹೇಳಿದ್ದೇನು?

ಹಾಸನದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಎಚ್.ಡಿ.‌ರೇವಣ್ಣ ಪತ್ನಿ ಭವಾನಿ ರೇವಣ್ಣ ಭಾಗಿಯಾಗಿ, ಇನ್ನು 90 ದಿನಗಳಲ್ಲಿ ನಮ್ಮ ಚುನಾವಣೆ ಮುಗಿದು ಹೋಗಿರುತ್ತದೆ. ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಕೂಡ ಮಾತನಾಡಿಕೊಂಡು, ನಿರ್ಣಯ ತೆಗೆದುಕೊಂಡಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿಯೇ ನಮ್ಮ ಹೆಸರು ಕೂಡ ಹೇಳುತ್ತಾರೆ ಎಂದು ಹೇಳಿದ್ದರು.

ಎಚ್.ಪಿ.ಸ್ವರೂಪ್ ಹೇಳಿದ್ದೇನು?

ಇನ್ನು ಈ ಬಗ್ಗೆ ನಾಲ್ಕು ಬಾರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ದಿವಂಗತ ಎಚ್.ಎಸ್.‌ಪ್ರಕಾಶ್ ಪುತ್ರ, ಜೆಡಿಎಸ್ ಟಿಕೆಟ್‌ ಪ್ರಬಲ ಆಕಾಂಕ್ಷಿ ಎಚ್.ಪಿ.ಸ್ವರೂಪ್ ಸಹ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ್ದು, ತಾವೂ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದಾರೆ. ಭವಾನಿ‌ ಮೇಡಂ ಯಾವ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಜೆಡಿಎಸ್ ವರಿಷ್ಠರು ಯಾವ ತೀರ್ಮಾನ ತೆಗೆದುಕೊಂಡರೂ ಆ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನಾನು ಆಕಾಂಕ್ಷಿ, ನನಗೇ ಟಿಕೆಟ್ ಕೊಡುತ್ತಾರೆ ಎನ್ನುವ ಭರವಸೆ ಇದೆ ಎಂದು ಹೇಳಿದ್ದರು.

ನಮ್ಮ ತಂದೆ ಪಕ್ಷಕ್ಕೆ ಅವರದ್ದೇ ಆದ ಕೊಡುಗೆಯನ್ನು ನೀಡಿದ್ದಾರೆ. ದೇವೇಗೌಡರು ನಮ್ಮ ತಂದೆಯವರನ್ನು ಜೆಡಿಎಸ್‌ಗೆ ಕರೆದುಕೊಂಡು ಬಂದು ಆರು ಭಾರಿ ಟಿಕೆಟ್ ಕೊಟ್ಟಿದ್ದಾರೆ. ನಾವೂ ಆ ಕುಟುಂಬಕ್ಕೆ ಋಣಿಯಾಗಿರುತ್ತೇವೆ. ನಮ್ಮ ತಂದೆ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ. ಹಾಗಾಗಿ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಸ್ವರೂಪ್ ತಿಳಿಸಿದ್ದರು.

ಇದನ್ನೂ ಓದಿ: Karnataka Election: ಅಭಿಷೇಕ್‌ ಅಂಬರೀಶ್‌ ಬಿಜೆಪಿ ಸೇರ್ಪಡೆಗೆ ಮಾತುಕತೆ ನಡೆದಿದೆ, ಇನ್ನೆರಡು ದಿನದಲ್ಲಿ ಹೇಳುವೆ: ನಾರಾಯಣಗೌಡ

ದೇವೇಗೌಡರೇ ಅಂತಿಮ ಎಂದಿದ್ದ ಪ್ರಜ್ವಲ್ ರೇವಣ್

ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್‌ ನೀಡುವ ವಿಚಾರ ದೊಡ್ಡವರಿಗೆ ಬಿಟ್ಟಿದ್ದು. ಅದನ್ನು ರೇವಣ್ಣ ಅಥವಾ ಕುಮಾರಸ್ವಾಮಿ ಅವರಾಗಲಿ ನಿರ್ಧರಿಸುವುದಕ್ಕೆ ಆಗಲ್ಲ. ಯಾವುದೇ ಕ್ಷೇತ್ರದ ಅಭ್ಯರ್ಥಿಯಾದರೂ ದೇವೇಗೌಡರು ನಿರ್ಧರಿಸಬೇಕು ಎಂದು ಭವಾನಿ ರೇವಣ್ಣ ಅವರ ಪುತ್ರ, ಸಂಸದ ಪ್ರಜ್ವಲ್‌ ರೇವಣ್ಣ ಮಂಗಳವಾರ (ಜ.೨೪) ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಾಸನ ಕ್ಷೇತ್ರ ಎಚ್‌.ಡಿ.ದೇವೇಗೌಡರಿಗಾಗಿ ಇರುವ ಕ್ಷೇತ್ರ. ನಾನು ಕೂಡ ಹಾಸನದ ಸಂಸದ ಆಗಬೇಕೆಂದು ಬಯಸಿರಲಿಲ್ಲ. ನಾನು ವಿಧಾನಸಭಾ ಕ್ಷೇತ್ರವನ್ನು ಕೇಳಿದ್ದೆ. ಆದರೆ, ಅವರೇ ಎಂಪಿ ಆಗು ಎಂದು ಹೇಳಿದ್ದರು. ಹೀಗಾಗಿ ನಾನು ಅಲ್ಲಿ ಸ್ಪರ್ಧಿಸಿದ್ದೆ. ಆದ್ದರಿಂದ ದೇವೇಗೌಡರು ಏನು ನಿರ್ಧರಿಸುತ್ತಾರೋ ಅದೇ ಅಂತಿಮ ಎಂದು ಹೇಳಿದ್ದರು.

Exit mobile version