ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆಗೆ (Karnataka Election) ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ 10ರೊಳಗೆ ಪ್ರಕಟಿಸುವುದಾಗಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಒಟ್ಟು 30 ಕ್ಷೇತ್ರಗಳಲ್ಲಿ 13 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. 17 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಇಲ್ಲವೇ ಫೆಬ್ರವರಿ 10ರೊಳಗೆ ರಾಜ್ಯದ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇನೆ ಎಂದು ತಿಳಿಸಿದರು.
ಬಸವಣ್ಣನ ತತ್ವಗಳ ಮೇಲೆ ಪಕ್ಷ ನಮ್ಮ ಪಕ್ಷವನ್ನು ಸ್ಥಾಪನೆ ಮಾಡಿದ್ದೇನೆ. ಮೊದಲಿಂದಲೂ ಹಿಂದು-ಮುಸ್ಲಿಂ ಸಹೋದರರು ಎಂಬ ರೀತಿಯಲ್ಲಿಯೇ ನಡೆದುಕೊಂಡು ಬಂದಿದ್ದೇನೆ. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯಲ್ಲಿದ್ದಾಗಲೂ ಮುಸ್ಲಿಂ ಬಾಂಧವರು ನಮ್ಮ ಕುಟುಂಬದ ಜತೆಗಿದ್ದರು. ನಾವು ಜಾತ್ಯತೀತವಾಗಿದ್ದೆವು ಎಂದು ಹೇಳಿದರು.
ಇದನ್ನೂ ಓದಿ: Karnataka Election: ಸಿ.ಪಿ. ಯೋಗೇಶ್ವರ್-ಎಚ್.ಡಿ. ಕುಮಾರಸ್ವಾಮಿ ಕೊಕ್ಕರೆ, ಮೀನು ಜಟಾಪಟಿ!
ಬುಟ್ಟಿಯಲ್ಲಿ ಹಾವಿದೆ ಎಂಬಂತೆ ರೆಡ್ಡಿ ಇದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜನಾರ್ದನ ರೆಡ್ಡಿ, ನನ್ನ ಕೆಲಸವನ್ನು ನಾನು ಮಾಡಿಕೊಳ್ಳುತ್ತಿದ್ದೇನೆ. ಬೇಕಿದ್ದವರಿಗೆ ಕಾಣಿಸಿಕೊಂಡು ಬರಮಾಡಿಕೊಳ್ಳುತ್ತಿದ್ದೇನೆ. ಕಾಂಗ್ರೆಸ್‌ನವರ ಮುಂದೆ ಕೆಲಸ ಮಾಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.