Site icon Vistara News

Karnataka Election: ಯಡಿಯೂರಪ್ಪ ಎಲ್ಲರೂ ಒಪ್ಪಿರುವ ಧೀಮಂತ ನಾಯಕ; ಅವರಿಗೆ ಕಲ್ಲು ಹೊಡೆದರೆ ಬಿಜೆಪಿಗೆ ನಷ್ಟ: ವಿಜಯೇಂದ್ರ

Last time the ticket was lost at the last minute I will contest wherever the party says Vijayendra

ವಿಜಯಪುರ: ಬಿ.ಎಸ್. ಯಡಿಯೂರಪ್ಪನವರು ನಾಲ್ಕು ಬಾರಿ ಸಿಎಂ ಆಗಿ ಎಲ್ಲ ವರ್ಗದ ಜನರು ಒಪ್ಪಿಕೊಂಡ ಒಬ್ಬ ಧೀಮಂತ ‌ನಾಯಕ, ರೈತ ನಾಯಕ, ಒಬ್ಬ ಹೋರಾಟಗಾರ. ಯಡಿಯೂರಪ್ಪನವರಿಗೆ ಕಲ್ಲು ಎಸೆದರೆ ಅದು‌ ಪಕ್ಷಕ್ಕೆ ಹೊಡೆತ ಬೀಳುತ್ತದೆ. ಇದು‌ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಇಂಡಿ ತಾಲೂಕಿನ ಹೊರ್ತಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಅವರನ್ನು ಕಡೆಗಣಿಸಿದರೆ ಬರುವ ದಿನದಲ್ಲಿ ಇದು ಎಲ್ಲರಿಗೂ ಅರ್ಥವಾಗುತ್ತದೆ ಎನ್ನುವ ಮೂಲಕ ಬಿಜೆಪಿಗೆ ಬಿ.ಎಸ್‌. ಯಡಿಯೂರಪ್ಪ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

ಯಡಿಯೂರಪ್ಪ ಅವರ ವಿಚಾರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಮೌನವಾಗಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ್‌ ಅವರು ಹಿರಿಯರಿದ್ದಾರೆ. ಅವರ ಬಗ್ಗೆ ನಾನು ಮಾತನಾಡಲ್ಲ. ಆದರೆ ಯಡಿಯೂರಪ್ಪ ಅವರು ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿರುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಕಳೆದ ಬಾರಿ ವರುಣಾದಿಂದ ಸ್ಪರ್ಧಿಸಬೇಕಾಗಿತ್ತು, ಆದರೆ, ಕೊನೇ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿತ್ತು, ಆದರೆ ಈ ಬಾರಿ ಚುನಾವಣೆಯಲ್ಲಿ (Karnataka Election) ಹಾಗಾಗಬಾರದು ಎಂದುಕೊಂಡಿದ್ದೇನೆ. ಪಕ್ಷ ಯಾವ ಕ್ಷೇತ್ರಕ್ಕೆ ಸ್ಪರ್ಧಿಸಲು ಸೂಚಿಸುತ್ತದೆಯೋ ಅಲ್ಲಿಂದ ಸ್ಪರ್ಧಿಸುತ್ತೇನೆ. ಕಳೆದ ಬಾರಿಯೇ ವರುಣಾದಿಂದ ಟಿಕೆಟ್ ಸಿಗುತ್ತದೆ ಎಂದು ನಿರೀಕ್ಷೆಯಿತ್ತು. ಆದರೆ ಕೊನೇ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು, ಈ ಬಾರಿ ಸಿಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಏನೇ ಸಮಸ್ಯೆ ಇದ್ದರೂ ಕುಳಿತು ಬಗೆಹರಿಸಿಕೊಳ್ಳಬೇಕು, ನಾನಂತೂ ಇನ್ನೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವೆ. ನನಗೆ ಯತ್ನಾಳ್ ಅವರ ಬಗ್ಗೆ ವೈಯಕ್ತಿಕ ವಾದ ಯಾವುದೇ ವಿರೋಧಗಳಿಲ್ಲ. ನಮ್ಮ ಹೇಳಿಕೆಗಳು ಪಕ್ಷದ ಬೆಳವಣಿಗೆಗೆ ಪೂರಕವಾಗಿರಬೇಕು. ಮುಂದಿನ ದಿನಗಳಲ್ಲಿ ‌ಪಕ್ಷ ಬಲಪಡಿಸಿ ಅಧಿಕಾರಕ್ಕೆ ತರುವ ನಿಟ್ಟಿನಲಿ ಎಲ್ಲರೂ ಪ್ರಯತ್ನಿಸಬೇಕು‌ ಎಂದು ಹೇಳಿದರು.

ದೇಶದಲ್ಲಿ ಪ್ರಜೆಗಳಿಂದ ಧಿಕ್ಕರಿಸಲ್ಪಟ್ಟ ಪಕ್ಷ ಕಾಂಗ್ರೆಸ್ ಆಗಿದೆ. ಇಡೀ ದೇಶದಲ್ಲಿ ಜನರು ಕಾಂಗ್ರೆಸ್ಸಿನ ಪಕ್ಷವನ್ನು ದೂರ ಮಾಡಿದ್ದಾರೆ. ರಾಜ್ಯದಲ್ಲಿ ಕೂಡ ಜನರಿಂದ ದೂರವಾಗಿರುವ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಭ್ರಷ್ಟಾಚಾರದ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪ ಹಾಸ್ಯಾಸ್ಪದವಾಗಿದೆ. ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನದ್ದು ಅವಿನಾಭಾವ ಸಂಬಂಧವಿದೆ. ಭ್ರಷ್ಟಾಚಾರದ ಕುರಿತು ಮಾತನಾಡುವ ಯೋಗ್ಯತೆಯನ್ನು ಕಾಂಗ್ರೆಸ್‌ನವರು ಉಳಿಸಿಕೊಂಡಿಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Karnataka Election: ಬಿಜೆಪಿಗೆ ಬಿಎಸ್‌ವೈ ಅನಿವಾರ್ಯ; ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಿ: ವರಿಷ್ಠರಿಗೆ 35ಕ್ಕೂ ಹೆಚ್ಚು ಶಾಸಕರ ಪತ್ರ

ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವರ್ಸಸ್ ಸಿದ್ದರಾಮಯ್ಯ ಎಂಬಂತಾಗಿದೆ. ಮೊನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆಶಿಗೆ ಇರಿಸುಮುರಿಸು ಮೂಡುವಂತೆ ಮಾಡಲಾಗಿದೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡೋಕೆ ಡಿಕೆ ಶಿವಕುಮಾರ್‌ ರಾಜ್ಯಾಧ್ಯಕ್ಷರು ಆಗಬೇಕಾ ಎಂದು ವ್ಯಂಗ್ಯವಾಡಿದರು. ದಿನದಿಂದ ದಿನಕ್ಕೆ ಕಾಂಗ್ರೆಸ್‌ನ ಪಕ್ಷದಲ್ಲಿರುವ ಗೊಂದಲಗಳು ಹೆಚ್ಚಾಗುತ್ತಿವೆ. ಅದು ಜನರಿಗೆ ಶೀಘ್ರವೇ ಗೊತ್ತಾಗಲಿದೆ ಎಂದು ವಿಜಯೇಂದ್ರ ಹೇಳಿದರು.

Exit mobile version