ಮಂಗಳೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಗ್ರಹಗತಿಗಳೇ ಸರಿಯಿಲ್ಲ. ಅವರು ಅಧಿಕಾರದಲ್ಲಿದ್ದಾಗ ತಮ್ಮ ಸುತ್ತಲಿನ ಗ್ರಹಗಳೊಂದಿಗೆ ನಡೆಸಿದ ಹಗರಣದ ಪಾಪಗಳು ಈಗ ಅವರ ಸುತ್ತಲೇ ಸುತ್ತುತ್ತಿವೆ. ಭ್ರಷ್ಟಾಚಾರದ ಬಗ್ಗೆ ಗಂಟೆಗಟ್ಟಲೇ ಭಾಷಣ ಮಾಡುವ ಸಿದ್ದರಾಮಯ್ಯನವರು ಈಗ ಅವರೇ ನಡೆಸಿದ ಭ್ರಷ್ಟಾಚಾರದ ಬಗ್ಗೆ ಮಾತ್ರ ಬಾಯಿ ಮೇಲೆ ಬೆರಳಿಟ್ಟು ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಈಗ ಸರಣಿ ಟ್ವೀಟ್ ಮಾಡಿರುವ ಕಟೀಲ್ ಅವರು ಸಿದ್ದರಾಮಯ್ಯ ಮೇಲೆ ಮುಗಿಬಿದ್ದಿದ್ದಾರೆ.
ಸರಣಿ ಟ್ವೀಟ್‌ನಲ್ಲೇನಿದೆ?
೨. ಹಗರಣಗಳ ಸರಮಾಲೆಯನ್ನೇ ತೊಟ್ಟಿರುವ ಅವರು ತಮ್ಮ ಅಧಿಕಾರಾವಧಿಯ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನ ಪಟ್ಟು, ಕಡೆಗೆ ತನಿಖಾ ಸಂಸ್ಥೆ ಲೋಕಾಯುಕ್ತವನ್ನೇ ಮುಚ್ಚಿಹಾಕಿದ್ದರು. ಆದರೆ ಸಿದ್ದಣ್ಣ, ಮತ್ತೆ ಲೋಕಾಯುಕ್ತ ಮರುಸ್ಥಾಪನೆಯಾಗುತ್ತದೆ, ಹಗರಣಗಳ ಮಾಲೆ ನೇಣು ಕುಣಿಕೆಯಾಗುತ್ತದೆ ಎಂದು ಎಣಿಸಿರಲಿಲ್ಲ ಎಂದೆನಿಸುತ್ತದೆ.
೩. ತಮ್ಮ ವಿರುದ್ಧದ ತನಿಖೆಗೆ ಭಯಪಟ್ಟು ರಾತ್ರೋರಾತ್ರಿ ದೇಶದ ಶಕ್ತಿಶಾಲಿ ತನಿಖಾ ಸಂಸ್ಥೆಯೆನಿಸಿದ್ದ ಲೋಕಾಯುಕ್ತಕ್ಕೆ ಬೀಗ ಜಡಿದು ಎಸಿಬಿ ಎನ್ನುವ ಹಲ್ಲಿಲ್ಲದ ಸಂಸ್ಥೆ ಸ್ಥಾಪಿಸಿ ತಮ್ಮ ಮಾತು ಕೇಳುವ ಅಧಿಕಾರಿಗಳ ತಂದು ಕೂರಿಸಿದ್ದು ರಾಜ್ಯದ ಜನ ಮರೆತಿಲ್ಲ ಸಿದ್ದರಾಮಣ್ಣ!
ಇದನ್ನೂ ಓದಿ: Karnataka Election : ಭಾವಿ ಸಚಿವರ ಮೇಲೆ ದಾಳಿ ಆರಂಭಿಸಿದ ಕಾಂಗ್ರೆಸ್! : ರಮೇಶ್ ಜಾರಕಿಹೊಳಿ ಹೇಳಿಕೆ ಆಧರಿಸಿ ಟೀಕೆ
೪. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕಕ್ಕೆ ತಿಳಿಯುವುದಿಲ್ಲವೇ? ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಲೇ ಇರುವ ಬಿಜೆಪಿಯ ಕೆಲಸಗಳಿಂದ ಹೆದರಿ, ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಸ್ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು.
೫. ಅಭಿವೃದ್ಧಿ ವಿಷಯದಲ್ಲಿ ಮತ ಕೇಳಲು ಮುಖವಿಲ್ಲದ ಕಾಂಗ್ರೆಸ್ ಬಿಜೆಪಿಯ ಮೇಲೆ ದಿನಕ್ಕೊಂದು ರೀತಿಯ ಸುಳ್ಳು ಆರೋಪ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿನ ಶಾಸಕರು ಮತ್ತು ಸಚಿವರ ಸ್ವಂತ ‘ಅಭಿವೃದ್ಧಿ’ ನೋಡಿಯೇ ಜನರು ನಿಮ್ಮನ್ನು ಮನೆಗೆ ಕಳುಹಿಸಿದ್ದಲ್ಲವೇ ಸಿದ್ದರಾಮಯ್ಯನವರೇ?
೬. ಅನ್ನ ಭಾಗ್ಯ ಹಗರಣ, ವಕ್ಫ್ ಮಂಡಳಿ ಆಸ್ತಿ ಅವ್ಯವಹಾರ, ಅರ್ಕಾವತಿ ಭೂ ಹಗರಣ, ಬಿಬಿಎಂಪಿ ಅವ್ಯವಹಾರ, ತಮ್ಮ ಪುತ್ರನ ಸಂಸ್ಥೆಗೆ ಸರ್ಕಾರಿ ಕೆಲಸದ ಗುತ್ತಿಗೆ ನೀಡಿದ್ದು, ಮೈಸೂರಿನ ಮರಳು ದಂಧೆ, ಇಂದಿರಾ ಕ್ಯಾಂಟೀನ್ ಹಗರಣ, ಕಡೆಗೆ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರ ಕಾರ್ಮಿಕರ ಹೆಸರಿನಲ್ಲೂ ನಕಲಿ ವೇತನ ಪಾವತಿ ನಿಮ್ಮ ಸಾಧನೆಯಲ್ಲವೇ?’
ಇದನ್ನೂ ಓದಿ: ChatGPT: ಏನಿದು ಚಾಟ್‌ಬಾಟ್? ಮನುಷ್ಯರ ಕೆಲಸ ಕಿತ್ತುಕೊಳ್ಳುತ್ತಾ?
೭. ಏನೇ ಮಾಡಿದರೂ ಜಯಿಸಿಕೊಳ್ಳುತ್ತೇನೆ ಎಂಬ ಹುಂಬತನವನ್ನು ಬಿಟ್ಟುಬಿಡಿ ಸಿದ್ದರಾಮಯ್ಯನವರೇ. ನಾವು ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಲೋಕಾಯುಕ್ತವನ್ನು ಮರುಸ್ಥಾಪಿಸಿದ್ದೇವೆ. ಅದರ ಮೂಲಕವೇ ಕಾಂಗ್ರೆಸ್ ನಡೆಸಿದ ಎಲ್ಲ ಭ್ರಷ್ಟಾಚಾರದ ಕೆಲಸಕ್ಕೂ ಕೊನೆಯ ಮೊಳೆ ಹೊಡೆದು ರಾಜ್ಯದ ಜನರಿಗೆ ಸ್ವಚ್ಛ ಆಡಳಿತ ನೀಡಲಿದ್ದೇವೆ.
೮. ಅಂದಹಾಗೆ ನಿಮ್ಮ ಪಕ್ಷದ ಅಧ್ಯಕ್ಷರೇ ನಿಮ್ಮ ರಾಜಕೀಯದ ನಿವೃತ್ತ ಜೀವನಕ್ಕೆ ಅಣಿಮಾಡಿ ಕೊಡುತ್ತಿದ್ದಾರಂತೆ? ಕೋಲಾರದಲ್ಲಿ ನಿಮ್ಮಿಂದ ಸೋತ ನಾಯಕರೇ ನಿಮ್ಮ ವಿರುದ್ಧ ಕತ್ತಿ ಮಸೆದಿಟ್ಟಿದ್ದಾರೆ ಎಂಬ ಸುದ್ದಿ ಇದೆ. ಮಾಡಿದ ಪಾಪಗಳು ಕಡೆಯಲ್ಲಿ ಕಾಡುತ್ತವೆಯಲ್ಲವೇ ಸಿದ್ದರಾಮಯ್ಯನವರೇ? ತಮ್ಮ ರಾಜಕೀಯ ನಿವೃತ್ತ ಜೀವನಕ್ಕೆ ಶುಭ ಹಾರೈಕೆಗಳು.
೯. ನೀವೀಗ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಬಹುದು. ನಿಮಗೆ ಅದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ ಎನ್ನುವುದು ರಾಜ್ಯದ ಜನತೆಗೆ ಈಗಾಗಲೇ ಅರ್ಥವಾಗಿದೆ. ಆದರೆ ಒಂದು ಮಾತು. ನನ್ನ ವಿರುದ್ಧದ ಕೋಪವನ್ನು ನಮ್ಮ ಪರಶುರಾಮಸೃಷ್ಟಿ ಕರಾವಳಿಯ ಮೇಲಾಗಲೀ, ನಮ್ಮ ಯಕ್ಷಗಾನದ ಮೇಲಾಗಲೀ ತೋರಿಸಿ. ನಿಮ್ಮದು ಉತ್ತರ ಕುಮಾರನ ಪೌರುಷ ಎಂದು ಮತ್ತೆ ನಿರೂಪಿಸದಿರಿ.
ಇದನ್ನೂ ಓದಿ: Sukesh Chandrashekar : ಜಾಕ್ವೆಲಿನ್ ಜತೆ ನಾನು ಕ್ಲೋಸ್ ಆಗಿದ್ದಕ್ಕೆ ನೋರಾ ಹೊಟ್ಟೆಕಿಚ್ಚು ಪಟ್ಟಿದ್ದಳು ಎಂದ ಸುಕೇಶ್
ಈ ರೀತಿಯಾಗಿ ನಳಿನ್ ಕುಮಾರ್ ಕಟೀಲ್ ಅವರು ಸಿದ್ದರಾಮಯ್ಯ ಮೇಲೆ ಸರಣಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಅವಧಿಯಲ್ಲಿ ಭಷ್ಟ್ರಾಚಾರ ನಡೆದಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.