ಕೊಪ್ಪಳ: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜಕಾರಣ ಬಿಟ್ಟು ಜ್ಯೋತಿಷ್ಯ ಹೇಳುವುದು ಒಳ್ಳೆಯದು. ಏಕೆಂದರೆ ಈ ಬಾರಿ ಅವರು ನಿರುದ್ಯೋಗಿಯಾಗುತ್ತಾರೆ. ಅವರಿಗೆ ಕ್ಷೇತ್ರವೇ ಇಲ್ಲ. ತಾಕತ್ತಿದ್ದರೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಬೇಕು. ಅವರು ಮುಂಬರುವ ಚುನಾವಣೆಯಲ್ಲಿ (Karnataka Election) ಬಾದಾಮಿಯಲ್ಲಿ ನಿಲ್ಲಲಿ, ವರುಣಾದಲ್ಲಿ ನಿಲ್ಲಲಿ, ನಾವು ಸೋಲಿಸುತ್ತೇವೆಯೋ ಇಲ್ಲವೋ ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಿಂದ ಸಿದ್ದರಾಮಯ್ಯ ಅವರನ್ನು ಓಡಿಸಿದ್ದಾರೆ. ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೆ.ಎಚ್. ಮುನಿಯಪ್ಪ ಅವರು ಕೋಪದಲ್ಲಿದ್ದಾರೆ. ಹೀಗಾಗಿ ಇನ್ನೂ ಕ್ಷೇತ್ರವನ್ನು ಫೈನಲ್ ಮಾಡಿಲ್ಲ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಅಭಿವೃದ್ಧಿ, ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆಯಾಗಬೇಕು. ಜಾತಿ, ಮತ, ವೈಷಮ್ಯವುಳ್ಳ ಚುನಾವಣೆಯಾಗಬಾರದು. ರಾಜ್ಯದಲ್ಲಿ ನಮ್ಮ ಯಾತ್ರೆಗಳು ನಡೆಯುತ್ತಿದ್ದು ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪೇಜ್ ಪ್ರಮುಖ ತಂಡ ರಚನೆ ಮಾಡಲಾಗಿದ್ದು, ಒಳ್ಳೆಯ ವಾತಾವರಣ ಇದೆ. ಬಿಜೆಪಿ ಚುನಾವಣಾ ಪೂರ್ವ ತಯಾರಿ ನಡೆಸುತ್ತಿದೆ. ಎಲ್ಲ ಕಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಹೆಚ್ಚು ಸ್ಥಾನವನ್ನು ಗೆಲ್ಲುತ್ತೇವೆ. ಜನಾರ್ದನರೆಡ್ಡಿ ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Fire Accident: ಮಕ್ಕಳಾಗುತ್ತೆ ಎಂಬ ಮೂಢನಂಬಿಕೆಗೆ ಕರಿಘಟ್ಟ ಅರಣ್ಯಕ್ಕೆ ಬೆಂಕಿ; ಪರದಾಡಿದ ಚಿಕ್ಕಪುಟ್ಟ ಅರಣ್ಯ ಜೀವಿಗಳು
ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ, ಖರ್ಗೆ ಅವರನ್ನು ಕರೆಸುವುದಿಲ್ಲವಾ? ಎಂದು ಪ್ರಶ್ನೆ ಮಾಡಿದ ಕಟೀಲ್, ಟಿಕೆಟ್ ನೀಡುವುದು ನಮ್ಮ ಪಕ್ಷದ ಪಾರ್ಲಿಮೆಂಟರಿ ಬೋರ್ಡ್ ಆಗಿದೆ. ಆ ಬೋರ್ಡ್ ಯಾರನ್ನು ಆಯ್ಕೆ ಮಾಡುತ್ತದೆಯೋ ಅವರೇ ನಮ್ಮ ಪಕ್ಷದ ಅಭ್ಯರ್ಥಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.