Site icon Vistara News

Karnataka Election: ವಿಧಾನಸಭೆಗೆ ಸ್ಪರ್ಧಿಸುವೆನೆಂದು ಪತ್ರ ಬರೆದ ಎಂಎಲ್‌ಸಿ ಆಯನೂರು ಮಂಜುನಾಥ್;‌ ಈಶ್ವರಪ್ಪಗೆ ಅಡ್ಡಗಾಲು?

Karnataka Election news MLC Ayanur Manjunath writes letter saying he will contest assembly elections

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯರಾಗಿರುವ ಆಯನೂರು ಮಂಜುನಾಥ್ (MLC Ayanur Manjunath) ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪದವೀಧರರಿಗೆ ಬಹಿರಂಗ ಪತ್ರ ಬರೆದು, ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನೂ ವಿವರಿಸಿದ್ದಾರೆ. ಈಗ ಇವರು ಶಿವಮೊಗ್ಗ ನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆನ್ನಲಾಗಿದ್ದು, ಹಾಲಿ ಶಾಸಕ, ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ (KS Eshwarappa) ಅವರಿಗೆ ಅಡ್ಡಗಾಲು ಹಾಕಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತದೆ.

ವಿವಿಧ ಸಮೂಹಗಳ ಹಿತರಕ್ಷಣೆಗಾಗಿ ಹೋರಾಟ ಮಾಡಿದ್ದರೂ, ಸದನದಲ್ಲಿ ಗಟ್ಟಿ ಧ್ವನಿಯಲ್ಲಿ ಪ್ರತಿನಿಧಿಸುವ ಪ್ರಯತ್ನ ಮಾಡಿದ್ದರೂ ಅದಕ್ಕೆ ತಕ್ಕ ಫಲ ಸಿಕ್ಕಿಲ್ಲ. ಪರಿಷತ್ತಿನಲ್ಲಿನ ತಮ್ಮ ಮಾತುಗಳು, ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೆ ಒಳಪಡಲಿಲ್ಲ. ಈ ಹಿನ್ನೆಲೆಯಲ್ಲಿ ತಮಗೆ ಅವಕಾಶ ದೊರೆತಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಅದಕ್ಕೆ ಎಲ್ಲರ ಬೆಂಬಲ, ಸಹಕಾರ ಇರಲಿ ಎಂದು ಆಯನೂರು ಮಂಜುನಾಥ್‌ ಪತ್ರದಲ್ಲಿ ವಿವರಿಸಿದ್ದಾರೆ.

ಶಿವಮೊಗ್ಗ ನಗರದ ಮೇಲೆ ಕಣ್ಣು

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕೆ.ಎಸ್.‌ ಈಶ್ವರಪ್ಪ ಅವರು ಹಾಲಿ ಶಾಸಕರಾಗಿದ್ದಾರೆ. ಅವರೇ ಮತ್ತೊಮ್ಮೆ ಸ್ಪರ್ಧೆ ಮಾಡುವ ಆಸಕ್ತಿ ಹೊಂದಿದ್ದಾರೆ. ತಮಗೆ ವಯಸ್ಸಿನ ಕಾರಣಕ್ಕೆ ಟಿಕೆಟ್‌ ಕೈತಪ್ಪುವುದಾದರೆ ಪುತ್ರ, ಜಿಪಂ ಮಾಜಿ ಸದಸ್ಯ ಇ. ಕಾಂತೇಶ್‌ ಅವರಿಗೆ ಟಿಕೆಟ್‌ ನೀಡುವಂತೆ ಕಸರತ್ತು ನಡೆಸಿದ್ದಾರೆನ್ನಲಾಗಿದೆ. ಈ ಮಧ್ಯೆ ಶಿವಮೊಗ್ಗ ನಗರದ ಮೇಲೆ ಕಣ್ಣಿಟ್ಟಿರುವ ಆಯನೂರು ಮಂಜುನಾಥ್‌, ಕ್ಷೇತ್ರದ ಹೆಸರನ್ನು ಪ್ರಸ್ತಾಪ ಮಾಡದೆ ವಿಧಾನ ಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಆಯನೂರು ಬರೆದಿರುವ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Ramesh Jarakiholi : ರಮೇಶ್‌ ಜಾರಕಿಹೊಳಿ ಭೇಟಿಗೆ ಅವಕಾಶ ನೀಡದ ಅಮಿತ್‌ ಶಾ, ದೆಹಲಿಯಲ್ಲಿ ಕಾಯುತ್ತಿರುವ ಸಾಹುಕಾರ್‌

ಪ್ರಜಾತಂತ್ರದ ನಾಲ್ಕೂ ಮನೆಗಳಾಗಿರುವ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಾಗಿ ಆಯನೂರು ಮಂಜುನಾಥ್ ಕಾರ್ಯನಿರ್ಹವಣೆ ಮಾಡಿದ್ದಾರೆ. ಹಾಲಿ ಪರಿಷತ್‌ ಸದಸ್ಯರಾಗಿದ್ದು, ಪುನಃ ವಿಧಾನಸಭೆ ಪ್ರವೇಶಕ್ಕೆ ಚಿಂತನೆ ನಡೆಸುತ್ತಿದ್ದಾರೆ.

#image_title

ಆಯನೂರು ಮಂಜುನಾಥ್ ಪತ್ರದಲ್ಲೇನಿದೆ?‌

ನೈರುತ್ಯ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ತಮ್ಮಿಂದ ಆಯ್ಕೆಯಾದ ನಂತರ ಸದನದಲ್ಲಿ ಪ್ರಾಮಾಣಿಕವಾಗಿ ನಿಮ್ಮನ್ನು ಪ್ರತಿನಿಧಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇವೆ.

ಸರ್ಕಾರಿ ಹಾಗೂ ಖಾಸಗಿ ನೌಕರರ, ಶಿಕ್ಷಕರ, ಉಪನ್ಯಾಸಕರ, ಅನುದಾನಿತ, ಅನುದಾನ ರಹಿತ ಶಿಕ್ಷಕರ ಹಾಗೂ ಶಿಕ್ಷಕೇತರ ನೌಕರರ, ಅತಿಥಿ ಉಪನ್ಯಾಸಕ/ಶಿಕ್ಷಕರ ಸಮಸ್ಯೆಗಳಲ್ಲದೆ, ಪೌರ ಕಾರ್ಮಿಕರು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಿರುದ್ಯೋಗ ಪದವೀಧರರು ಮತ್ತು ಸಂಘಟಿತ ಹಾಗೂ ಅಸಂಘಟಿತ ನೌಕರರು/ಕಾರ್ಮಿಕರು ಇತ್ಯಾದಿ ಸಮೂಹಗಳ ಹಿತರಕ್ಷಣೆಗಾಗಿ ಸದನದಲ್ಲಿ ಗಟ್ಟಿಧ್ವನಿಯಲ್ಲಿ ಪ್ರತಿನಿಧಿಸುವ ಪ್ರಯತ್ನವನ್ನು ಮಾಡಿದ್ದೇನೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಭದ್ರಾ ಮೇಲ್ದಂಡೆ: ರಾಜ್ಯದ ಮೊದಲ ಕೇಂದ್ರ ಯೋಜನೆ

ನಿವೃತ್ತ ನೌಕರರ ಮುಸ್ಸಂಜೆ ಬದುಕಿನ ಭದ್ರತೆಗಾಗಿ NPS/OPS ಪೆನ್ಶನ್‌ಗಾಗಿ ದಿಟ್ಟ ನಿಲುವಿನ ಹೋರಾಟ ಮಾಡಿದ್ದೇನೆ. ನಮ್ಮದೇ ಸರ್ಕಾರವಿದ್ದರೂ ಸಹ ನಿರ್ಭೀತಿಯಿಂದ ನೌಕರ ಹಾಗೂ ಕಾರ್ಮಿಕ ಬಂಧುಗಳ ಪರವಾಗಿ ಹೋರಾಟವನ್ನು ಮಾಡಿರುವುದು ತಮ್ಮೆಲ್ಲರ ಗಮನದಲ್ಲಿದೆ ಎಂದು ನಂಬಿದ್ದೇನೆ. ಆದರೆ, ವಿಧಾನ ಪರಿಷತ್ತಿನಲ್ಲಿ ನಾನು ಮಾಡಿದ ಹೋರಾಟಕ್ಕೆ ತಕ್ಕ ಫಲ ದೊರೆತಿಲ್ಲ ಎನ್ನುವುದನ್ನು ನಾನು ಮನಗಂಡಿದ್ದೇನೆ.

ಕಾನೂನು, ರಚನೆಯಾಗುವ ಪ್ರಮುಖ ನಿರ್ಧಾರಗಳು ಆಗಬೇಕಾದ ವಿಧಾನ ಸಭೆಯಲ್ಲಿ ರಾಜ್ಯದ ನೌಕರರು, ಕಾರ್ಮಿಕರು ಹಾಗೂ ಶೋಷಿತರ ಸಮಸ್ಯೆಗಳು ಕುರಿತಂತೆ ಗಂಭೀರ ಚರ್ಚೆಯಾಗದಿರುವ ಕಾರಣಕ್ಕಾಗಿ ವಿಧಾನ ಪರಿಷತ್ತಿನಲ್ಲಿ ನನ್ನ ಪ್ರಯತ್ನಕ್ಕೆ ನಿರೀಕ್ಷೆ ಮಾಡಿದಷ್ಟು ಫಲಿತಾಂಶ ಸಿಗುತ್ತಿಲ್ಲ ಎಂಬುದನ್ನು ತಾವೂ ಸಹ ಒಪ್ಪುತ್ತೀರೆಂದು ಭಾವಿಸಿದ್ದೇನೆ. ವಿಧಾನಸಭೆಯಲ್ಲಿ ಪರಿಣಾಮಕಾರಿ ಪ್ರಯತ್ನವಾಗದೆ, ಕೇವಲ ವಿಧಾನ ಪರಿಷತ್ತಿನಲ್ಲಿ ಯಶಸ್ಸು ಪಡೆಯುವುದು ಕಷ್ಟಸಾಧ್ಯವಾದ ಸಂಗತಿ.

ಅದರಿಂದ ಅಧಿಕಾರ ಕೇಂದ್ರವಾದ ವಿಧಾನ ಸಭೆಯಲ್ಲಿ ಈ ಬಾರಿ ತಮ್ಮೆಲ್ಲರ ಧ್ವನಿಯಾಗಬೇಕೆಂದು ಬಯಸಿದ್ದೇನೆ. ಅಲ್ಲೊಂದು ಶಾಸಕರ ತಂಡಕಟ್ಟಿ, ಎಲ್ಲ ಸ್ವರದ ನೌಕರರು ಹಾಗೂ ಕಾರ್ಮಿಕರ ಶೋಷಿತ, ದೀನದಲಿತರ ಧ್ವನಿಯಾಗಿ ಪ್ರತಿಧ್ವನಿಸಬೇಕೆಂದು ಬಯಸಿದ್ದೇನೆ. ಹಾಗಾದಾಗ ಮಾತ್ರ ಈ ಸಮೂಹಕ್ಕೆ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಬಹುದು ಎಂಬುದು ನನ್ನ ಪ್ರಬಲ ಅನಿಸಿಕೆಯಾಗಿದೆ.

ಇದನ್ನೂ ಓದಿ: PSI Scam : ಪಿಎಸ್‌ಐ ಹಗರಣದ ಎಫ್‌ಐಆರ್‌, ಎಲ್ಲ ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಆದೇಶ

ಆದ್ದರಿಂದ ಅವಕಾಶ ದೊರೆತಲ್ಲಿ ವಿಧಾನಸಭೆಯನ್ನು ಪ್ರವೇಶಿಸಲು ನಿರ್ಧರಿಸಿದ್ದೇನೆ. ಸದುದ್ದೇಶದ ನನ್ನ ಈ ನಿಲುವಿಗೆ ತಮ್ಮ ಸಹಕಾರ ಬೆಂಬಲ ಆಶೀರ್ವಾದಗಳು ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Exit mobile version