ಚಿಕ್ಕಮಗಳೂರು: ಈ ಗ್ರಾಮದ ರಸ್ತೆ ನಿರ್ಮಾಣಕ್ಕಾಗಿ ಟೆಂಡರ್ ಆಗಿ ಒಂದೂವರೆ ದಶಕ ಕಳೆದರೂ ರಸ್ತೆ ನಿರ್ಮಾಣ ಮಾತ್ರ ಮರೀಚಿಕೆಯಾಗಿದೆ. ಇಂದು ಆಗಲಿದೆ, ನಾಳೆ ಆಗಲಿದೆ ಎಂದು ಕಾದು ಕಾದು ಸುಸ್ತಾದ ಶಂಕರಕುಡಿಗೆ ಗ್ರಾಮಸ್ಥರು ಈಗ ಚುನಾವಣೆಯನ್ನೇ (Karnataka Election) ಬಹಿಷ್ಕಾರ ಮಾಡಿದ್ದಾರೆ.
ಕಳಸ ತಾಲೂಕಿನ ಶಂಕರಕುಡಿಗೆ ಹಾಗೂ ತನೋಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ನಿತ್ಯ ನರಕದರ್ಶನವಾದಂತೆ ಆಗಿತ್ತು. ಈ ರಸ್ತೆ ದುರಸ್ತಿಗಾಗಿ 15 ವರ್ಷದಿಂದ ಬೇಡಿಕೆ ಇಡುತ್ತಲೇ ಬರಲಾಗುತ್ತಿತ್ತು. ಕೊನೆಗೆ ಕಳೆದ ವರ್ಷ ಹಣ ಬಿಡುಗಡೆಯಾಗಿ ಟೆಂಡರ್ ಸಹ ಆಗಿತ್ತು. ರಸ್ತೆ ಕಾಮಗಾರಿ ಮಾಡುತ್ತೇವೆ ಎಂದು ಬಂದ ಗುತ್ತಿಗೆದಾರ ರಸ್ತೆ ಅಗೆದು ಮತ್ತೆ ಈ ಕಡೆ ಮುಖ ಹಾಕಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿ ವರ್ಷಗಳೇ ಕಳೆದರೂ ಸ್ಥಳೀಯರ ಸಂಚಾರಕ್ಕೆ ಮಾತ್ರ ಸುಸ್ಥಿರ ರಸ್ತೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಅಗೆದು ಹೋದ ಗುತ್ತಿಗೆದಾರ ಈ ವಾರ ಬರಬಹುದು, ಮುಂದಿನ ತಿಂಗಳು ಬರಬಹುದು ಎಂದೆಲ್ಲ ಕಾದು ಕುಳಿತರೂ ಬರಲಿಲ್ಲ. ಮಳೆಗಾಲದಲ್ಲಂತೂ ರಸ್ತೆಯ ಪರಿಸ್ಥಿತಿ ಹೇಳತೀರದಾಗಿತ್ತು. ಅಧಿಕಾರಿಗಳು ಸಹ ಇತ್ತ ಮುಖ ಮಾಡಲಿಲ್ಲ. ಹೀಗಾಗಿ ಪಟ್ಟಣಕ್ಕೆ ಹೋಗುವ ಗ್ರಾಮಸ್ಥರು ಅರ್ಜಿ ಕೊಟ್ಟು ಬರುತ್ತಿದ್ದರೇ ವಿನಃ ಯಾವುದೇ ಪ್ರಯೋಜನ ಆಗಿರಲಿಲ್ಲ. ಶಂಕರಕುಡಿಗೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ರಸ್ತೆಯೇ ದೊಡ್ಡ ಸಮಸ್ಯೆಯಾಗಿ ಕಾಡತೊಡಗಿತ್ತು. ಅಧಿಕಾರಿಗಳೂ ಕ್ಯಾರೆ ಎನ್ನಲಿಲ್ಲ ಎಂಬುದು ಜನರ ಆಕ್ರೋಶ ಹೆಚ್ಚಲು ಕಾರಣವಾಯಿತು. ಈಗ ಕೊನೆಯ ಅಸ್ತ್ರವಾಗಿ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ರಸ್ತೆ ಮಾಡಿಸಿ ಮತ ಕೇಳಿ ಎಂದು ಈಗ ಇಲ್ಲಿನ ಜನ ಹೇಳುತ್ತಿದ್ದಾರೆ.
ಇದನ್ನೂ ಓದಿ: Karnataka Election: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಸ್ಪರ್ಧೆ: ಪ್ರಮೋದ್ ಮುತಾಲಿಕ್
ಈ ರಸ್ತೆ ಕಾಮಗಾರಿಗಾಗಿ ಒಂದು ವರ್ಷದ ಹಿಂದೆಯೇ 70 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾಮಗಾರಿಗೆಂದು ಗ್ರಾಮಕ್ಕೆ ಬಂದು ಹೋದ ಗುತ್ತಿಗೆದಾರ ರಸ್ತೆ ಅಗೆದು ನಾಪತ್ತೆಯಾಗಿದ್ದಾರೆ. ಈ ಬಾರಿ ರಸ್ತೆ ಮಾಡುವವರೆಗೆ ಎಂದು ನಾವು ಬಿಡುವವರಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.