Site icon Vistara News

Karnataka Election: ಪ್ರಧಾನಿ ಮೋದಿ ಹೇಳಿಕೆಯನ್ನು ಮುಸ್ಲಿಂ ಓಲೈಕೆ ಅಂದುಕೊಳ್ಳಬೇಕಿಲ್ಲ: ಸಿಎಂ ಬೊಮ್ಮಾಯಿ

Karnataka Election news PM Modi remarks need not be construed as Muslim appeasement says CM Bommai

ಮೈಸೂರು: ಮುಸ್ಲಿಂ ಸಮುದಾಯದವರ ಜತೆ ಸೌಹಾರ್ದವಾಗಿರಿ, ಎಲ್ಲರನ್ನೂ ಸಮಾನವಾಗಿ ನೋಡಿ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಮುಸ್ಲಿಂ ಓಲೈಕೆ ಅಂದುಕೊಳ್ಳಬೇಕಿಲ್ಲ. ಆಯಾ ಕ್ಷೇತ್ರದ ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡಿದ್ದಾರೆ. ದೇಶವನ್ನು ಮುನ್ನಡೆಸುವಾಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಮುಂದಿನ ಚುನಾವಣೆ (Karnataka Election) ದೃಷ್ಟಿಯಿಂದ ನೋಡಬಾರದು ಎಂಬ ಅರ್ಥದಲ್ಲಿ ಅವರು ಹೇಳಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ ಶಿಕ್ಷಣದ ಕೊರತೆ, ಬಡತನ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಸಮಾನವಾಗಿ ಕರೆದೊಯ್ಯುವಂತೆ ಪ್ರಧಾನಿ ಹೇಳಿದ್ದಾರೆಂದು ಸಿಎಂ ತಿಳಿಸಿದರು. ನಮ್ಮ ಪಕ್ಷದ ಕೆಲವು ನಾಯಕರು ಮುಸ್ಲಿಂ ಮತ ಬೇಡ ಎಂದಿರುವುದು ಅವರ ವೈಯುಕ್ತಿಕ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಹೇಳಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಟಿಕೆಟ್ ಘೋಷಣೆ ವಿಚಾರವಾಗಿ ಮಾತನಾಡಿದ ಸಿಎಂ, ಚುನಾವಣೆ ಗೆಲ್ಲಲು ನಮ್ಮದು ವಿಭಿನ್ನ ತಂತ್ರಗಾರಿಕೆ ಇದ್ದು, ಯಾವ ರೀತಿಯ ಕಾರ್ಯತಂತ್ರವನ್ನು ಹೆಣೆಯಲಾಗಿದೆ ಎಂಬುದನ್ನು ಕಾದು ನೋಡಿ. ಜೆಡಿಎಸ್, ಕಾಂಗ್ರೆಸ್‌ನವರು ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿರಬಹುದು. ಅವರು ಮಾಡಿದರು ಎಂದು ನಾವೂ ಅವರನ್ನೇ ಅನುಸರಿಸಬೇಕಿಲ್ಲ. ಕಾಲ ಬಂದಾಗ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: Go Back Ashok: ಮಂಡ್ಯದಲ್ಲಿ ಹೆಚ್ಚಾದ ಅಶೋಕ್‌ ಗೋ ಬ್ಯಾಕ್‌ ಅಭಿಯಾನ; ಬೇಡ ಹೊಂದಾಣಿಕೆ ರಾಜಕಾರಣವೆಂದ ಬಿಜೆಪಿ ಕಾರ್ಯಕರ್ತರು

ಮಂಡ್ಯದಲ್ಲಿ ಯಾವುದೇ ವಿರೋಧ ಇಲ್ಲ- ಸಿಎಂ

ಮಂಡ್ಯದಲ್ಲಿ‌ ಉಸ್ತುವಾರಿ ಸಚಿವ ಆರ್.ಅಶೋಕ್‌ಗೆ ಗೋಬ್ಯಾಕ್ ಪೋಸ್ಟರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಸ್ತುವಾರಿ ನೇಮಕಕ್ಕೆ ಮಂಡ್ಯದಲ್ಲಿ ಸ್ವಪಕ್ಷದಿಂದ ಯಾವುದೇ ವಿರೋಧ ಇಲ್ಲ. ಆರ್.ಅಶೋಕ್‌ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಖುಷಿಯಿಂದ ಇದ್ದಾರೆ‌. ಯಾರೋ ಹತ್ತು ಜನ ಪೋಸ್ಟರ್ ಹಾಕುವುದರಿಂದ ಏನೂ ಆಗಲ್ಲ. ಇದಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ.
ಅದಕ್ಕಾಗಿ ನಾನು ಈ ಬಗ್ಗೆ ಗಮನಹರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Exit mobile version