ಚಿಕ್ಕಮಗಳೂರು: ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟವಿದೆ. ಹಂತ ಹಂತದಲ್ಲೂ ನಾವು ಅಗ್ನಿ ಪರೀಕ್ಷೆಯನ್ನು ಎದುರಿಸಬೇಕು. ಆ ಸೀತಾ ಮಾತೆ ಕೂಡ ಅಗ್ನಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಇನ್ನು ಈ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಲೆಕ್ಕ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ತಮ್ಮ ಬಗ್ಗೆ ಹೇಳಿಕೊಂಡರು. ಅಲ್ಲದೆ, ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಇನ್ನು ಮೂರು ತಿಂಗಳೂ ತಾವು ಹೆಚ್ಚು ಮಾತನಾಡುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಮೂಡಿಗೆರೆ ತಾಲೂಕಿನ ಹಾಂದಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳೆ ಎಂದರೇ ಒಂದು ಸಂಘರ್ಷ, ಅದು ಮಹಿಳೆ ಜತೆಯೇ ಬರುತ್ತದೆ. ಹುಟ್ಟಿನಿಂದ ಸಾಯುವವರೆಗೂ ಪರೀಕ್ಷೆಗಳನ್ನು ಹೊತ್ತುಕೊಂಡೇ ಇರಬೇಕು, ಎದುರಿಸಬೇಕು, ಪಾಸಾಗಬೇಕು ಎಂದು ನೋವು ತೋಡಿಕೊಂಡರು.
ಇದನ್ನೂ ಓದಿ: ಜಾತಿ ಹೆಸರನ್ನು ಹಿಡಿದು ಆರೋಪ ಮಾಡುವುದು ಸರಿಯಲ್ಲ: ಎಚ್.ಡಿ. ಕುಮಾರಸ್ವಾಮಿ ಮಾತಿಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ
ಇನ್ನು ಮೂರು ತಿಂಗಳು ಮಾತನಾಡಲಾರೆ
ಇನ್ನು ಮೂರು ತಿಂಗಳು ಕೆಟ್ಟದ್ದನ್ನು ನೋಡಲ್ಲ, ಕೇಳಲ್ಲ, ಮಾತನಾಡಲ್ಲ. ಈ ಬಾರಿ ಬಹಳ ತಾಳ್ಮೆಯಿಂದ ಚುನಾವಣೆಯನ್ನು ಎದುರಿಸಬೇಕು ಎಂದು ಅಂದುಕೊಂಡಿದ್ದೇನೆ. ಸಿಡಿ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ, ಮಾಧ್ಯಮದವರಿಗೆ ವಿನಂತಿ ಕೂಡ ಮಾಡಿದ್ದೇನೆ. ಮೂರು ತಿಂಗಳು ತಾಳ್ಮೆಯಿಂದ ನಾನು ಮಾಡಿದ ಕೆಲಸದಿಂದ ಗೆಲ್ಲಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ. ಮಹಿಳೆಯರ ಪರವಾದ ಸರ್ಕಾರವನ್ನು ನಾವು ರೂಪಿಸಬೇಕಿದೆ ಎಂದು ಹೆಬ್ಬಾಳ್ಕರ್ ಹೇಳಿದರು.