Site icon Vistara News

Karnataka Election: ಪ್ರಜಾಧ್ವನಿಗೆ ಇರುವುದು ಎರಡೇ ಬಸ್‌; 4 ಇದ್ದಿದ್ರೆ ನಾನೂ ಸಾರಥಿ ಆಗ್ತಿದ್ದೆ: ಡಾ.ಜಿ.ಪರಮೇಶ್ವರ್‌

Dr G Parameshwara says New faces to be given first priority to give tickets in Congress:

#image_title

ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆ (Karnataka Election) ದೃಷ್ಟಿಯಿಂದ ಕಾಂಗ್ರೆಸ್‌ ಪಕ್ಷ ಆಯೋಜನೆ ಮಾಡಿರುವ ಪ್ರಜಾಧ್ವನಿ ಕಾರ್ಯಕ್ರಮ ಸಂಬಂಧ ಈಗ ನಿರ್ಧಾರವಾಗಿರುವಂತೆ ಎರಡು ಬಸ್ ಅನ್ನು ಮಾಡಲಾಗಿದೆ. ಒಂದು ವೇಳೆ ನಾಲ್ಕು ಬಸ್‌ ಮಾಡಿದರೆ ನಾನು ಪ್ರತ್ಯೇಕವಾಗಿ ಹೋಗುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದರು.

ಸುದ್ದಿಗಾರರೊಂದಿಗೆ ಶನಿವಾರ (ಫೆ. ೪) ಮಾತನಾಡಿದ ಅವರು, ಪಕ್ಷದ ತೀರ್ಮಾನದಂತೆ ಪ್ರಜಾಧ್ವನಿಗೆ ಈಗ ಎರಡು ಬಸ್‌ ಅನ್ನು ಮಾಡಲಾಗಿದ್ದು, ಒಂದು ಬಸ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಇನ್ನೊಂದು ಬಸ್‌ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವವಿದೆ. ಇನ್ನೂ ಎರಡು ಬಸ್‌ ಹೆಚ್ಚುವರಿ ಮಾಡಿದರೆ ನಾನು ಪ್ರತ್ಯೇಕವಾಗಿ ಹೋಗುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಪರಮೇಶ್ವರ್ ಉತ್ತರಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಪರಮೇಶ್ವರ್ ಅವರನ್ನು ಸೈಡ್‌ಲೈನ್ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನನ್ನು ಯಾರೂ ಸೈಡ್‌ಲೈನ್ ಮಾಡಿಲ್ಲ. ಹಾಗೆ ಮಾಡಿದ್ದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದರು. ಪ್ರಜಾಧ್ವನಿ ಯಾತ್ರೆಗೆ ಎರಡು ಟೀಂ ಮಾಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಹೌದು ಎರಡು ಟೀಂ ಮಾಡಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ. ಮತ್ತೊಂದು ಡಿಕೆಶಿ ಹೋಗುತ್ತಾರೆ. ಮೈಸೂರು ಭಾಗಕ್ಕೆ ಡಿಕೆಶಿ ಅವರು ಹೋಗುತ್ತಾರೆ. ನಾನು ಆ ಕಡೆಗೆ ಹೋಗುತ್ತೇನೆ. ಶುಕ್ರವಾರ (ಫೆ.೩) ಕೋಲಾರಕ್ಕೆ ಹೋಗಿದ್ದೆ ಎಂದರು.

ಜೆಡಿಎಸ್‌ನವರು 224 ಕ್ಷೇತ್ರಕ್ಕೆ ಅಭ್ಯರ್ಥಿ ಹಾಕುತ್ತಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿಯವರು ಕೆಲ ಅತೃಪ್ತರಿಗೆ ಟಿಕೆಟ್ ಕೊಟ್ಟರೆ ಕೊಡಬಹುದು. ಕಾಂಗ್ರೆಸ್‌ನಲ್ಲಿ ಜಾಸ್ತಿ ಹೊಸ ಮುಖಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಈಗಾಗಲೇ 110 ಮಹಿಳೆಯರು ಅರ್ಜಿ ಹಾಕಿದ್ದಾರೆ. ಕೆಲ ಮಾನದಂಡಗಳ‌ ಮೇಲೆ ಚುನಾವಣೆಗೆ ಟಿಕೆಟ್ ಹಂಚಿಕೆ ಆಗುತ್ತದೆ. ಇನ್ನು ನನಗೆ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ನನ್ನ ಜತೆ ಪ್ರಣಾಳಿಕೆ ಬಗ್ಗೆ ಮಾತ್ರವೇ ಚರ್ಚೆ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಜೆಡಿಎಸ್ ಕಾದುಕುಳಿತಿದೆ ಎಂಬ ವಿಚಾರದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ತುಮಕೂರು ‌ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಅಟಿಕಾ ಬಾಬು ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಗೊತ್ತಿಲ್ಲ. ನಾವು ಯಾರ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಮಾತಾನಾಡಬಾರದು. ಕೆಲ ದಿನಗಳ ಹಿಂದೆ ನನ್ನ ಮನೆಗೆ ಅಟಿಕಾ ಬಾಬು ಬಂದಿದ್ದರು. ನಾನು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದರು. ಟಿಕೆಟ್‌ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿರುವುದಾಗಿ ತಿಳಿಸಿದರು.

ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ತೆಗದುಕೊಂಡು ಹೋಗುವ ಪಕ್ಷವಾಗಿದೆ. ಪಕ್ಷದಲ್ಲಿ ದುಡಿದವರಿಗೆ ಮಾನ್ಯತೆ ಇದೆ‌. ಇನ್ನು ಕೆಲವರು ಪ್ರೀತಿ ವಿಶ್ವಾಸ ಗೆದ್ದಿರುತ್ತಾರೆ. ಅಂತಹವರು ನಮ್ಮ ಪಕ್ಷಕ್ಕೆ ಬರುವುದು ಒಂದು ರೀತಿಯಲ್ಲಿ ನಮಗೆ ಹೆಮ್ಮೆ. ಹೀಗಾಗಿ ಅಂತಹವರಿಗೆ ಪಕ್ಷದಿಂದ ಟಿಕೆಟ್ ಕೊಡುತ್ತೇವೆ. ಈ ಹಿಂದೆಲ್ಲ ಕೆಲವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | BJP Karnataka: ಈ ಸಾರಿ ಜೆಡಿಎಸ್ ಜತೆ ಬಿಲ್ಕುಲ್ ಒಳ ಒಪ್ಪಂದ ಇಲ್ಲ; ಪಕ್ಕಾ ಫೈಟ್: ಬಿಜೆಪಿ ಪಾಳೆಯದಲ್ಲಿ ಖಡಕ್ ಮಾತು

ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ನಮ್ಮ‌ ಪಕ್ಷದಿಂದ ಒಂದು ಸ್ಯಾಂಪಲ್ ಸರ್ವೇ ನಡೆದಿದೆ‌. ಆ ಸರ್ವೇಯಲ್ಲಿ ಬಂದ ಫಲಿತಾಂಶದಿಂದ ಕೆಲ ಬದಲಾವಣೆ ನಿರ್ಧಾರ ಮಾಡಲು ತೀರ್ಮಾನ ಮಾಡಿದ್ದೇವೆ. ನಾವು ಈ ಬಾರಿ ಗೆಲ್ಲಲೇಬೇಕು ಎಂದು ತಿಳಿಸಿದರು.

ಭಿನ್ನಾಭಿಪ್ರಾಯ ತರಲು ಅಪಪ್ರಚಾರ

ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ರಾಜೀನಾಮೆ ಸುದ್ದಿ ಹರಿದಾಡಿತ್ತು. ಆದರೆ, ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರ ಜತೆ ಸುಮಾರು 3 ಗಂಟೆ ಚರ್ಚೆ ಮಾಡಿದ್ದೇನೆ. ನಾವು ಯಾವ ರೀತಿ ಚುನಾವಣೆಗೆ ಹೋಗಬೇಕು. ನಮ್ಮ ರಣ ನೀತಿ ಹೇಗಿರಬೇಕು, ಚುನಾವಣಾ ಪ್ರಣಾಳಿಕೆಗಳು ಹೇಗೆ ಇರಬೇಕು, ಜನ ಅದನ್ನು ಒಪ್ಪುತ್ತಾರಾ ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ, ಅದನ್ನು ಬೇರೆ ಬೇರೆ ರೀತಿ ಬಿಂಬಿಸಿದ್ದಾರೆ. ಕಾಂಗ್ರೆಸ್ ಹೊರಡಿಸಿದ ಎಲ್ಲ ಪ್ರಣಾಳಿಕೆಗಳು ನನ್ನ ಗಮನಕ್ಕೆ ಬಂದಿದೆ‌. ನಾವೆಲ್ಲರೂ ಒಟ್ಟಿಗೆ ಸೇರಿ ಮಾಡಿದ್ದೇವೆ‌. ಕೆಲವರು ನಮ್ಮಲ್ಲಿ ಭಿನ್ನಾಭಿಪ್ರಾಯ ತರಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಗೃಹಲಕ್ಷ್ಮೀ ಭಾಗ್ಯಕ್ಕೆ ಕೆಲವರು ಎಲ್ಲಿಂದ ಹಣ ತರುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆಲ್ಲ ನಾವು ಉತ್ತರ ಕೊಟ್ಟಿದ್ದೇವೆ. ನಾವು ಜನರಿಗೆ ಪ್ರಣಾಳಿಕೆ ಕೊಟ್ಟ ಮೇಲೆ ಅದನ್ನು ಜಾರಿಗೆ ತರಬೇಕು. ಇದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. 1ನೇ ತರಗತಿಯಿಂದ 5ನೇ ತರಗತಿಯವರೆಗೆ ಸರ್ಕಾರಿ ಶಾಲೆಗೆ ತೆರಳುವ ಮಕ್ಕಳಿರುವ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಅದಕ್ಕೆ ವರ್ಷಕ್ಕೆ 3600 ಕೋಟಿ ರೂಪಾಯಿ ಬೇಕಾಗುತ್ತದೆ. ನಿನ್ನೆ ಚಿತ್ರದುರ್ಗದಲ್ಲಿ 10 ಪ್ರಣಾಳಿಕೆಯನ್ನು ಘೋಷಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿ, ನಾನು 8 ವರ್ಷ ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. 224 ಕ್ಷೇತ್ರದಲ್ಲೂ ಸಹ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಯಾರು ಅಂತ ತಿರ್ಮಾನ ಆಗಬೇಕು. ಶುಕ್ರವಾರ ನಮ್ಮ ಮುಖಂಡರ ಜತೆ ಸಭೆ ನಡೆದಿದ್ದು, ಕೆಲ ತೀರ್ಮಾನ ಮಾಡಲಾಗಿದೆ‌ ಎಂದು ಹೇಳಿದರು.

ಗುಬ್ಬಿ ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ವಿಚಾರಕ್ಕೆ ಉತ್ತರಿಸಿ, ಅವರು ನಮ್ಮ ಪ್ರಧಾನಮಂತ್ರಿಗಳು. ಕಾಮಗಾರಿಗೆ ಅವರೇ ಅಡಿಗಲ್ಲು ಹಾಕಿ ಇನ್ನು ಎರಡು ವರ್ಷಗಳಲ್ಲಿ ಇಲ್ಲಿಂದ ಹೆಲಿಕಾಪ್ಟರ್ ಹಾರಾಡುತ್ತದೆ ಎಂದಿದ್ದರು. ಕಾರಣಾಂತರಗಳಿಂದ 7 ವರ್ಷಗಳ ಬಳಿಕ ಉದ್ಘಾಟನೆಯಾಗುತ್ತಿದೆ. ಅ ಬಗ್ಗೆ ಅವರನ್ನೇ ಕೇಳಬೇಕು ಎಂದರು.

ಇದನ್ನೂ ಓದಿ | BJP Executive : ಕಾಂಗ್ರೆಸ್‌ನದು ಬೀದಿಜಗಳ, ಜೆಡಿಎಸ್‌ ಒಳಜಗಳ, ನಮ್ಮ ಗೆಲುವು ಅಚಲ ಎಂದ ನಳಿನ್‌ ಕುಮಾರ್‌ ಕಟೀಲ್‌

ಎಚ್‌ಎಎಲ್ ಘಟಕದಲ್ಲಿ ಒಟ್ಟು 6500 ಜನಕ್ಕೆ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದಷ್ಟು ತುಮಕೂರು ಜಿಲ್ಲೆಯ ಜನರಿಗೆ ಹೆಚ್ಚಿನ ಉದ್ಯೋಗ ಕೊಡಬೇಕು. ನಮ್ಮಲ್ಲಿ ಐಟಿಐ, ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದವರು ಇದ್ದಾರೆ. ಅವರಿಗೆ ತರಬೇತಿ ಕೊಟ್ಟು‌ ಕೆಲಸ ಕೊಡಬೇಕು ಎಂದು ಹೇಳಿದರು.

Exit mobile version