Site icon Vistara News

Karnataka Election : ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗ ವರದಿ ಮಂಡನೆ, ಭೂರಹಿತ ಪರಿಶಿಷ್ಟರಿಗೆ 2 ಎಕರೆ: ಡಾ.ಜಿ. ಪರಮೇಶ್ವರ್‌

chitradurga congress samavesha parameshwara

ಚಿತ್ರದುರ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ಬಂದ ಮೊದಲ ಅಧಿವೇಶನದಲ್ಲೇ ಸದಾಶಿವ ಆಯೋಗದ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗುವುದು, ಭೂರಹಿತ ಪರಿಶಿಷ್ಟ ಕುಟುಂಬಗಳಿಗೆ ತಲಾ 2 ಎಕರೆ ಒಣಭೂಮಿ ನೀಡಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಘೋಷಿಸಿದರು.

ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿರುವ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಸಿ, ಎಸ್‌ಟಿ (SC/ST) ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲು ನ್ಯಾ. ನಾಗಮೋಹನ್ ದಾಸ್ ಅವರ ಸಮಿತಿ ಶಿಫಾರಸು ಮಾಡಿ 3 ವರ್ಷ ಕಳೆದರೂ ಬಿಜೆಪಿ ಸರ್ಕಾರಗಳು ಮೀಸಲಾತಿ ಹೆಚ್ಚಿಸಿರಲಿಲ್ಲ. ಈಗ ಚುನಾವಣೆ ಕಾರಣಕ್ಕೆ ಮೀಸಲಾತಿ ಹೆಚ್ಚಿಸಲು ಕಾಯ್ದೆ ರೂಪಿಸಲಾಗಿದೆ. ಆದರೆ, ಇದನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿಲ್ಲ ಎಂದು ಆರೋಪಿಸಿದರು.

ನಮ್ಮ ಸರ್ಕಾರ ಬಂದ ಮೊದಲ ಅಧಿವೇಶನದಲ್ಲೇ ಸದಾಶಿವ ಆಯೋಗದ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗುವುದು. ಆ ಮೂಲಕ ಈ ಸಮುದಾಯದ ಜನರಿಗೆ ರಕ್ಷಣೆ ಹಾಗೂ ಮೀಸಲಾತಿ ನೀಡಲಾಗುವುದು. SCSP-TSP ಕಾಯ್ದೆಗೆ ತಿದ್ದುಪಡಿ ತಂದು ಈ ಅನುದಾನದ ಮೊತ್ತವನ್ನು ಶೇ.100ರಷ್ಟು ವೆಚ್ಚ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್‌ ಘೋಷಿಸಿದರು.

ಇದನ್ನೂ ಓದಿ | Karnataka Election : ಪರಿಶಿಷ್ಟರ ಕೈಗೆ ಹಣ ಸಿಗಬಾರದು ಎಂದು ಬಿಜೆಪಿ ಮೀಸಲಾತಿ ತಪ್ಪಿಸಿದೆ: ಮಲ್ಲಿಕಾರ್ಜುನ ಖರ್ಗೆ

ಪಿಡಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಪರಿಶಿಷ್ಟರಿಗೆ ಸರ್ಕಾರ ನೀಡಿರುವ ಜಮೀನುಗಳು ಶಾಶ್ವತವಾಗಿ ಅವರಿಗೆ ಉಳಿಯುವಂತೆ ಕಾನೂನು ರಕ್ಷಣೆ ನೀಡಲಾಗುವುದು. ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಆಧರಿಸಿ ಭೂರಹಿತ ಪರಿಶಿಷ್ಟ ಕುಟುಂಬಗಳಿಗೆ ತಲಾ 2 ಎಕರೆ ಒಣಭೂಮಿ ನೀಡಲಾಗುವುದು ಎಂದು ಪರಮೇಶ್ವರ್‌ ಭರವಸೆ ನೀಡಿದರು.

Karnataka Election

ಪ್ರತ್ಯೇಕ ಮಹಿಳಾ ಪ್ರಣಾಳಿಕೆ: ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಮುಂಬರುವ ಚುನಾವಣೆಗೆ ಕಾಂಗ್ರೆಸ್‌ ಪ್ರತ್ಯೇಕ ಮಹಿಳಾ ಪ್ರಣಾಳಿಕೆ ಮಾಡಲು ಸಂಕಲ್ಪ ಮಾಡಿದೆ. ಅದಕ್ಕಾಗಿ ಎಲ್ಲ‌ ಮಹಿಳೆಯರು ಜ. 15ನೇ ತಾರೀಖಿನೊಳಗೆ ಅಭಿಪ್ರಾಯ ತಿಳಿಸಬೇಕು. ಬಹಳ ವಿಚಾರಗಳನ್ನು ಜನರಿಗೆ ತಿಳಿಸಲು ಯೋಜನೆಯಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದಾಗಿಂದ ದಲಿತ ಶಕ್ತಿ ಕಾಂಗ್ರೆಸ್ ಜತೆ ನಿಂತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೆಂಬಲ ನೀಡಿದೆ. ಕಾಂಗ್ರೆಸ್ ಪಕ್ಷದ ಬುನಾದಿ ಎಸ್‌ಸಿ, ಎಸ್‌ಟಿ ಸಮುದಾಯದವರು ಎಂಬುದನ್ನು ನಾವು ಎಂದಿಗೂ ಮರೆಯುವುದಿಲ್ಲ. ಕಾಂಗ್ರೆಸ್ ಸಂವಿಧಾನವನ್ನು ಕೊಟ್ಟು ನಿಮ್ಮನ್ನು ರಕ್ಷಣೆ ಮಾಡಿಕೊಂಡು ಬಂದಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ | YSV datta | ಪಕ್ಷ ತೊರೆದು ಕಾಂಗ್ರೆಸ್‌ ಸೇರಲಿರುವ ವೈಎಸ್‌ವಿ ದತ್ತಗೆ ಕೊಂಕು ಮಾತಿನ ವಿದಾಯ ಹೇಳಿದ ಜೆಡಿಎಸ್‌!

ಮಲ್ಲಿಕಾರ್ಜುನ ಖರ್ಗೆ ಅವರು ಅಲಂಕರಿಸಿರುವ ಸ್ಥಾನ ಸಣ್ಣದಲ್ಲ. ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಭೋಸ್, ಬಾಬು ಜಗಜೀವನ ರಾಂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರೆಲ್ಲ ಅಲಂಕರಿಸಿದ ಸ್ಥಾನವದು. ಅದು ಅವರಿಗೆ ಯಾರೋ ಕೊಟ್ಟ ಸ್ಥಾನವಲ್ಲ. ಅವರ ಸಾಮರ್ಥ್ಯಕ್ಕೆ ಒಲಿದಿರುವುದು. ಖರ್ಗೆ ಅವರ ಮುಖಂಡತ್ವದಲ್ಲಿ ಒಂದು ಸರ್ಕಾರ ರಚನೆ ಮಾಡಲು, ಅವರ ಕೈ ಬಲಪಡಿಸಲು ನಾವೆಲ್ಲ ನಿಂತಿದ್ದೇವೆ. ಅವರ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ನಾವು ಪ್ರತಿಜ್ಞೆ ಮಾಡಬೇಕಿದೆ. ರಾಷ್ಟ್ರದಲ್ಲಿ ಕಾಂಗ್ರೆಸ್ ಸಂಕಟದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಕರ್ನಾಟಕದಲ್ಲಿ 136 ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆ ನನಗೆ ಇದೆ ಎಂದು ಹೇಳಿದರು.

ಬಿಜೆಪಿ ಯಾವಾಗಲೂ ತಪ್ಪುದಾರಿಗೆ ಎಳೆಯಲು ಹೊರಡುತ್ತದೆ. ಸುಳ್ಳು ಹೇಳದೇ ಬಿಜೆಪಿಯವರಿಗೆ ಬದುಕಲು ಸಾಧ್ಯವಿಲ್ಲ. ಯಾವುದೇ ವಿಚಾರದಲ್ಲೂ ಅವರಿಗೆ ನುಡಿದಂತೆ ನಡೆಯಲಾಗಲಿಲ್ಲ. ಎಲ್ಲ ಜಾತಿಯವರಿಗೆ ಸುಳ್ಳಿನ ಭರವಸೆ ಮೇಲೆ ಬಿಜೆಪಿಯವರು ನಿಂತಿದ್ದಾರೆ. ಇಂದು ಇರುವುದು ಜನಾದೇಶದ ಸರ್ಕಾರವಲ್ಲ, ಆಪರೇಷನ್ ಕಮಲದ ಸರ್ಕಾರ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸ್ಥಳೀಯ ಭಾಷೆಗೆ ಒತ್ತಾಸೆ ನೀಡಿದ ಅಮಿತ್‌ ಶಾ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣನೆ

Exit mobile version