ಕೋಲಾರ: ವಿಧಾನಸಭಾ ಚುನಾವಣೆ (Karnataka Election) ಸಂಬಂಧ ಕಾಂಗ್ರೆಸ್ ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭ ಮಾಡಿದೆ. ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯ ಭಾರತ್ ಜೋಡೊ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಮುಂದಿನ ಮುಖ್ಯಮಂತ್ರಿ ಅವರೇ ಆಗಬೇಕು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಜನ ಮಾತನಾಡುತ್ತಿದ್ದಾರೆ. ಅವರು ಬಡ ಜನರ ಪರವಾಗಿ ಇದ್ದಾರೆ ಎಂಬ ಕಾರಣಕ್ಕಾಗಿ ಈ ಕೂಗು ಕೇಳಿಬರುತ್ತಿದೆ. ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರಮುಖ ನಾಯಕರಿದ್ದಾರೆ. ಅನ್ನ, ನೀರು, ಊಟ ಕೊಟ್ಟ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ ಎಂದು ಹೇಳಿದರು.
ನಾನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಮಾತನಾಡುವುದಿಲ್ಲ. ನಾವೀಗ ಪಕ್ಕದ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿದ್ದೇವೆ. ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ರಮೇಶ್ ಕುಮಾರ್ ಘೋಷಣೆ ಕೂಗಿದರು.
ಗಾಂಧೀಜಿಗೆ ಅಂದು ತಲೆ ಬಗ್ಗಿಸಿ ನಮಸ್ಕಾರ ಮಾಡುತ್ತಲೇ ಎದ್ದವನು ಶೂಟ್ ಮಾಡಿದ್ದ. ಹೀಗಾಗಿ ಇಂದು ಯಾರಾದರೂ ಬಗ್ಗಿ ನಮಸ್ಕಾರ ಮಾಡಿದರೆ ನನಗೂ ಭಯ ಆಗುತ್ತೆ. ಅದಕ್ಕಾಗಿ ರಾಹುಲ್ ಗಾಂಧಿ ಇಂದು ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಗಾಂಧಿಯನ್ನು ಕೊಂದ ಗೋಡ್ಸೆ ಆರ್‌ಎಸ್‌ಎಸ್‌ನವನು. ಈ ದೇಶವನ್ನು ಮುನ್ನಡೆಸುತ್ತಿರುವ ಬಿಜೆಪಿ ಹಾಗೂ ಗೋಡ್ಸೆ ಒಂದೇ ಎಂದು ಹೇಳಿದರು.ಬುರ್ಕಾ, ಲವ್ ಜಿಹಾದ್ ಪ್ರಸ್ತಾಪ ಮಾಡುತ್ತಾರೆ. ಎಲ್ಲ ಧರ್ಮದವರು ಒಂದಾಗಿ ಬಾಳಬೇಕು ಎಂಬುದೇ ರಾಹುಲ್ ಗಾಂಧಿ ಅವರ ಜೋಡೊ ಯಾತ್ರೆಯ ಉದ್ದೇಶವಾಗಿದೆ. ನಾನು ಗೆದ್ದರೆ ವಿಧಾನಸೌಧಕ್ಕೆ ಹೋಗುತ್ತೇನೆ. ಇಲ್ಲದಿದ್ದರೆ ಮನೆಗೆ ಹೋಗುತ್ತೇನೆ. ನಿಮ್ಮೆಲ್ಲರಿಗೆ ಧ್ವನಿಯಾಗಿ ನಾನು ಅಸೆಂಬ್ಲಿಗೆ ಹೋಗಬೇಕು ಎಂದು ಹೇಳಿದರು.