ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಕಾರ್ಯಕ್ರಮಗಳಿಂದ ದೂರವಿದ್ದ ಬಿ.ಎಸ್. ಯಡಿಯೂರಪ್ಪ ಅವರ ನಡುವೆ ರಾಜಕೀಯ ವಲಯದಲ್ಲಿ (Karnataka Election) ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಕೊಪ್ಪಳದಲ್ಲಿ ಗುರುವಾರ ನಡೆಯಲಿರುವ ಪಕ್ಷದ ಜಿಲ್ಲಾ ಕಚೇರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಿದ್ದಾರೆ. ಅದರೆ, ಈ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಅವರು ಆಡಿದ ಮಾತು ಇನ್ನಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ಕೊಪ್ಪಳಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ತಾನ್ಯಾಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ, ಮತ್ತು ಕೊಪ್ಪಳಕ್ಕೆ ಹೋಗುತ್ತಿರುವುದೇಕೆ ಎಂದು ವಿವರಿಸಿದ್ದಾರೆ. ಜತೆಗೆ ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ.
ನಿಜವೆಂದರೆ, ಕೊಪ್ಪಳದ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ಇರಲಿಲ್ಲ. ಆಹ್ವಾನ ಪತ್ರಿಕೆಯಲ್ಲೂ ಅವರ ಹೆಸರಿಲ್ಲ. ಮಾಧ್ಯಮಗಳಲ್ಲಿ ಇದು ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ಕಡೆಯ ಕ್ಷಣದಲ್ಲಿ ಯಡಿಯೂರಪ್ಪ ಅವರ ಮನೆಗೆ ಹೋಗಿ ಆಹ್ವಾನ ನೀಡಿದರು. ಇದೀಗ ಗುರುವಾರ ಬೆಳಗ್ಗೆ ಕೊಪ್ಪಳಕ್ಕೆ ಹೊರಟ ಯಡಿಯೂರಪ್ಪ ಅವರ ಜತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಜತೆಯಾಗಿದ್ದಾರೆ.
ಯಡಿಯೂರಪ್ಪ ಅವರು ಹೇಳುವುದೇನು?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರು ಕೊಪ್ಪಳಕ್ಕೆ ಬರುತ್ತಿದ್ದಾರೆ. ಅವರ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ನಿಜ ಅಂದರೆ, ಬೇರೆ ಕಾರಣಕ್ಕೆ ನಾನು ಇವತ್ತು ಕಾರ್ಯಕ್ರಮಕ್ಕೆ ಹೋಗದೇ ಇರೋ ಸ್ಥಿತಿ ಇತ್ತು. ಆದರೆ, ಹೋಗಲೇಬೇಕು ಅನ್ನೋ ಸ್ಥಿತಿ ಬಂತು. ಹೀಗಾಗಿ ಹೋಗ್ತಿದ್ದೇನೆ ಎಂದು ಹೇಳಿದರು ಯಡಿಯೂರಪ್ಪ.
ʻʻಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ಕಾರ್ಯಕ್ರಮಕ್ಕೆ ಬರ್ತಿದ್ದಾರೆ. ಇಬ್ಬರು ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳು ಇಲ್ಲ. ಮಾಧ್ಯಮ ಸ್ನೇಹಿತರು ಯಾವುದನ್ನು ಸೃಷ್ಟಿ ಮಾಡೋಕೆ ಹೋಗಬೇಡಿ. ನಾವೆಲ್ಲ ಒಟ್ಟಾಗಿ ಇದ್ದೇವೆ. ಒಂದಾಗಿ ಇದ್ದೇವೆʼʼ ಎಂದು ಸ್ಪಷ್ಟಪಡಿಸಿದರು.
ʻʻನಮ್ಮದು ಒಂದೇ ಅಜೆಂಡಾ. ಮುಂದೆ ನಡೆಯುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರೋದು. ಅದಕ್ಕೆ ಬೇಕಾದ ಎಲ್ಲಾ ಶ್ರಮ ಹಾಕುತ್ತೇನೆ. ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ಇದೆ. ನರೇಂದ್ರ ಮೋದಿಯವರು, ಅಮಿತ್ ಶಾ ಅವರು, ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಹೆಚ್ಚು ಕಾರ್ಯಕ್ರಮ ರಾಜ್ಯದಲ್ಲಿ ನಡೆಯಲಿದೆ. ಇದೆಲ್ಲದರ ಪರಿಣಾಮವಾಗಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆʼʼ ಎಂದು ಹೇಳಿದರು ಯಡಿಯೂರಪ್ಪ.
ನನ್ನನ್ನು ಯಾರೂ ನಿರ್ಲಕ್ಷ್ಯ ಮಾಡುತ್ತಿಲ್ಲ
ʻʻನನ್ನನ್ನು ಪಕ್ಷ ನೆಗ್ಲೆಕ್ಟ್ ಮಾಡುತ್ತಿಲ್ಲ. ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಎಲ್ಲಾ ಕಾರ್ಯಕ್ರಮಗಳಿಗೆ ನಾನು ಹೋಗ್ತಾ ಇದೇನೆ. ಸರ್ಕಾರಿ ಕಾರ್ಯಕ್ರಮಕ್ಕೆ ನಾನು ಹೋಗೋದು ಸರಿಯಲ್ಲ ಅಂತ ಹೋಗಿಲ್ಲ ಅಷ್ಟೆ. ಆದರೆ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನನ್ನನ್ನ ಯಾರು ಕರೆಯಬೇಕಾಗಿಲ್ಲ. ನನ್ನ ಕರ್ತವ್ಯ ನಾನು ಮಾಡ್ತೀನಿʼʼ ಎಂದು ಹೇಳಿದರು.
ʻʻಕೊಪ್ಪಳದ ಕಾರ್ಯಕ್ರಮದ ಆಹ್ವಾನ ಕೊನೆ ಘಳಿಗೆಯಲ್ಲಿ ಸಿಕ್ಕಿತು. ಹಿಂದೆಲ್ಲ ನಾನು ಹೋಗೋ ಸ್ಥಿತಿಯಲ್ಲಿ ಇರಲಿಲ್ಲ ಅದಕ್ಕೆ ಹೋಗಿರಲಿಲ್ಲ. ನಡ್ಡಾ ಬರ್ತಿದ್ದಾರೆ, ಆ ಕಾರಣಕ್ಕಾಗಿ ಹೋಗ್ತಿದ್ದೇನೆʼʼ ಎಂದು ಹೇಳಿದರು.
ʻʻಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪದಲ್ಲಿ ಸತ್ಯಾಂಶ ಇಲ್ಲ. ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನನಗೆ ನನ್ನದೇ ಆದ ಶಕ್ತಿ ಇದೆ. ನಾನು ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಪಕ್ಷ ಅಧಿಕಾರಕ್ಕೆ ತರಲು ಶ್ರಮ ಹಾಕಿದ್ದೇನೆ. ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಇದನ್ನೇ ಮುಂದುವರೆಸುತ್ತೇನೆ. ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳು ಇಲ್ಲʼʼ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇದನ್ನೂ ಓದಿ | ಬಿ.ಎಸ್. ಯಡಿಯೂರಪ್ಪ ಕೋಪ ಶಮನಗೊಳಿಸಿದ ಬಿಜೆಪಿ; ಕೊಪ್ಪಳಕ್ಕೆ ಆಗಮಿಸಲು ಕೊನೆಗೂ ಒಪ್ಪಿಗೆ