Site icon Vistara News

Karnataka Election : ಮೋದಿಯನ್ನು ನಾಲಾಯಕ್‌ ಮಗ ಎಂದ ಪ್ರಿಯಾಂಕ ಖರ್ಗೆ; ಕಾಂಗ್ರೆಸ್‌ ಮತ್ತೊಂದು ಎಡವಟ್ಟು

Modi priyanka Kharge

#image_title

ಕಲಬುರಗಿ: ಕಾಂಗ್ರೆಸ್‌ ನಾಯಕ, ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕಲಬುರಗಿಯ ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕ ಖರ್ಗೆ (Priyanka Kharge) ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ನಾಲಾಯಕ್‌ ಮಗ ಎಂದು ಹೇಳಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಕಂಡುಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ಕೆಲವು ದಿನದ ಹಿಂದಷ್ಟೇ ಮೋದಿ ಅವರನ್ನು ವಿಷದ ಹಾವು ಎಂದು ಕರೆದು ವಿವಾದಕ್ಕೆ ಒಳಗಾಗಿದ್ದರು. ಅದನ್ನು ಬಿಜೆಪಿ ಮತ್ತು ಪ್ರಧಾನಿ ಅವರು ಚುನಾವಣೆಯ ಪ್ರಚಾರದ ವಿಷಯವಾಗಿ ಬಳಸಿಕೊಳ್ಳುತ್ತಿದೆ. ಅದರ ನಡುವೆಯೇ ಪ್ರಿಯಾಂಕ ಖರ್ಗೆ ಅವರ ಮಾತು ಕೇಳಿಬಂದಿದೆ.

ಸೋಮವಾರ ಮುಂಜಾನೆ ಕಲಬುರಗಿಯ ಕಾಂಗ್ರೆಸ್‌ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಣಿಕಂಠ ರಾಠೋಡ್‌ ಅವರ ಪರ ಮೋದಿ ಪ್ರಚಾರ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡುತ್ತಾ ನಾಲಾಯಕ್‌ ಮಗ ಹೇಳಿಕೆ ಹೊರಬಿತ್ತು.

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇಲೆ ಕರ್ನಾಟಕ ಮಾತ್ರವಲ್ಲ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಲ್ಲೂ ಕ್ರಿಮಿನಲ್‌ ಕೇಸುಗಳಿವೆ. ಅಂಥವರ ಪರವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಮಾಡುತ್ತಾರ ಎಂದಾದರೆ ಅವರ ನೈತಿಕತೆ ಎಲ್ಲಿ ಹೋಯಿತು ಎಂದು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು..

ʻʻರಾಮ, ಹನುಮಂತ, ಶಿವ, ಮೋದಿ ಅವರ ಮುಖ ತೋರಿಸಿದರೆ ಮತ ಬರುತ್ತೆ ಎಂದುಕೊಂಡಿದ್ದಾರೆʼʼ ಎಂದು ಹೇಳಿದ ಪ್ರಿಯಾಂಕ ಖರ್ಗೆ, ʻʻಅಲ್ಲಾರಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಮಣಿಕಂಠ ರಾಥೋಡ್‌ ಮೇಲೆ ಕೇಸಿವೆ. ಮಕ್ಕಳಿಗೆ ಕೊಡುವ ಹಾಲಿನ ಪೌಡರ್ ಕದ್ದು ಅಕ್ಕಿ ಕದ್ದು ಮಾರಾಟ ಮಾಡ್ತಾರೆ, ಇಂಥವರ ಪರವಾಗಿ ಪ್ರಧಾನಿ ಬಂದು ಪ್ರಚಾರ ಮಾಡ್ತಾರಲ್ಲಾ.. ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ.ʼʼ ಎಂದು ಕೇಳಿದರು. ರಾಮ ರಾಜ್ಯ ಕಟ್ಟೋಕೆ ಹೋಗುವರು ರಾವಣನನ್ನು ತಂದು ನಿಲ್ಲಿಸಿದ್ದೀರಿ ಎಂದು ಹೇಳಿದರು.

ನಾಲಾಯಕ್‌ ಮಗ ಎಂದು ಹೇಳಿದ್ದೇಕೆ?

ಪ್ರಧಾನಿ ಮೋದಿ ಅವರು ಕಲಬುರಗಿಯಲ್ಲಿ ಪ್ರಚಾರಕ್ಕೆ ಬಂದಾಗ ಬಂಜಾರ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ನಿಮ್ಮ ಒಬ್ಬ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು ಹೇಳಿದ್ದರು. ಇದನ್ನು ಪ್ರಿಯಾಂಕ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ʻʻಕಲಬುರಗಿಗೆ ಬಂದಾಗ ಬಂಜಾರ ಸಮಾಜಕ್ಕೆ ಧೈರ್ಯ ಹೇಳಿದ್ದೀರಿ.. ಬಂಜಾರ ಸಮುದಾಯದ ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು. ಇಂತಹ ನಾಲಾಯಕ್ ಮಗ ಇದ್ದರೆ ಮನೆ ನಡೆಸೋಕೆ ಆಗುತ್ತಾ?ʼʼ ಎಂದು ಪ್ರಶ್ನಿಸಿದ್ದಾರೆ ಖರ್ಗೆ. ಕೋಲಿ ಕುರುಬ ಸಮುದಾಯಕ್ಕೆ ಯಾವಾಗ ಎಸ್ಟಿ ಮೀಸಲು ಕೊಡುತ್ತೀರಾ ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು. ʻʻನಮ್ಮ ಕಾಂಗ್ರೆಸ್‌ ನಾಯಕರ ಬಗ್ಗೆ ಟೀಕೆ ಮಾಡೊದಕ್ಕೆ ನಿಮಗೆ ಏನು ನೈತಿಕತೆ ಇದೆ? ನೀವು ಏನು ಕೆಲಸ ಮಾಡಿದ್ದೀರಿ ಹೇಳಿʼʼ ಎಂದರು ಪ್ರಿಯಾಂಕ ಖರ್ಗೆ.

ʻʻಗೊಂಡ ಹಾಗೂ ಕೋಲಿ ಸಮಾಜದ ಮೀಸಲಾತಿ ಬೇಡಿಕೆ ಬಗ್ಗೆ ಏನು ಮಾಡಿದಿರಿ? ನಾನು ಖುದ್ದಾಗಿ ನಿಮ್ಮ ಸಚಿವರಿಗೆ ಹೋಗಿ ಮೂರು ಬಾರಿ ಮನವಿ ಕೊಟ್ಟಿದ್ದೇನೆ. ನಾನು ಸಚಿವನಾಗಿದ್ದಾಗಲೇ ಹೋಗಿ ಪತ್ರ ಕೊಟ್ಟು ಬಂದಿದ್ದೇನೆ.. ನಿಮ್ಮ ಕುಲ ಬಾಂಧವರಿಗೆ ನೀವೇ ಚೂರಿ ಹಾಕುತ್ತಿದ್ದೀರಿʼʼ ಎಂದು ಹೇಳಿದರು ಪ್ರಿಯಾಂಕ ಖರ್ಗೆ.

ಕಾಂಗ್ರೆಸ್‌ ನಿಮ್ಮನ್ನು 91 ಬಾರಿ ಟೀಕಿಸಿದ್ದು ಯಾವಾಗ?

ಕಾಂಗ್ರೆಸ್‌ ನನ್ನನ್ನು 91 ಬಾರಿ ಟೀಕಿಸಿದೆ ಎಂದು ಹೇಳಿದ್ದೀರಲ್ಲಾ, ಯಾವಾಗ ಎಂದು ಹೇಳುತ್ತೀರಾ? ನಿಮಗೆ ಅಭಿವೃದ್ಧಿ ವಿಚಾರ, ಭ್ರಷ್ಟಾಚಾರದ ಬಗ್ಗೆ ಪತ್ರ ಓದೋಕೆ ಟೈಮ್‌ ಇಲ್ಲ. ಬೇರೆ ಪತ್ರ ಓದೋಕೆ ಟೈಮ್‌ ಬಂತಾ ಮೋದಿಯವರೇ? ನಿಮಗೆ 40% ಕಮಿಷನ್ ಬಗ್ಗೆ ಗುತ್ತಿಗೆದಾರರ ಬರೆದ ಪತ್ರ ಓದೋಕೆ ಟೈಂ ಇಲ್ಲಾ ಸ್ವಾಮಿ ಎಂದು ಕಿಚಾಯಿಸಿದರು. ಪೊಲೀಸ್‌ ನೇಮಕಾತಿ 40% ಭ್ರಷ್ಟಾಚಾರದ ಆರೋಪದ ಬಗ್ಗೆ ಒಂದಾದರೂ ಮಾತು ಆಡಿದಿರಾ ಎಂದು ಕೇಳಿದರು.

ʻʻಬಿಜೆಪಿ ನಾಯಕರ ಮೇಲೆ ನನಗೆ ಬಹಳ ಅನುಕಂಪ ಇದೆ. ಜಿಲ್ಲೆ, ತಾಲೂಕಿನಲ್ಲಿ ಬಿಜೆಪಿಯಲ್ಲಿ ನಾಯಕತ್ವ ಇಲ್ಲ. ಹೀಗಾಗಿ ರವಿಕುಮಾರ್ ಅವರನ್ನು ಕರೆಸಿ ಮಾಡುತ್ತಿದ್ದಾರೆ.. ರವಿಕುಮಾರ್ ಅವರಿಗೆ ಚಿಜೆಪಿಗಿಂತಲೂ ಚಿತ್ತಾಪುರದ ಮೇಲೆ ಚಿಂತೆ. ಬಿಜೆಪಿ ನಾಯಕರು ಚಿತ್ತಾಪುರ ಜನಕ್ಕೆ ಅವಮಾನ ಮಾಡುತ್ತಿದ್ದಾರೆʼʼ ಎಂದು ಹೇಳಿದರು.

ಇದನ್ನೂ ಓದಿ : Modi in Karnataka : ತಮ್ಮ ವಿರುದ್ಧದ 91 ಬೈಗುಳಗಳ ಲೆಕ್ಕ ಇಟ್ಟ ಮೋದಿ; ಮೊದಲ ದಿನ 9 ಟಾರ್ಗೆಟ್‌

Exit mobile version