ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮೇ 10ರ ಬುಧವಾರ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಫಲಿತಾಂಶ ಹೊರಬೀಳಲಿದೆ. ಈಗಾಗಲೆ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ, ತಂತ್ರ, ಪ್ರತಿತಂತ್ರ ರೂಪಿಸಿಸುತ್ತಿವೆ. ಇದೀಗ ಫಲಿತಾಂಶ ಘೋಷಣೆ ಆಗುತ್ತಿರುವ ಮೇ 13 ದಿನಾಂಕದಲ್ಲಿ, ಸಂಖ್ಯೆ 13 ಎನ್ನುವುದು ಬಿಜೆಪಿ ಜತೆಗೆ ಅನೇಕ ವರ್ಷಗಳಿಂದ ಜೋಡಿಸಿಕೊಂಡಿದೆ.
ಸಂಖ್ಯೆ 13 ಎನ್ನುವುದಕ್ಕೆ ಸಂಖ್ಯಾ ಶಾಸ್ತ್ರ ಜ್ಯೋತಿಷದಲ್ಲಿ ಭಿನ್ನ ಅಭಿಪ್ರಾಯಗಳಿವೆ. ಕೆಲವರು ಅತ್ಯಂಥ ಶಕ್ತಿಯುತ ಸಂಖ್ಯೆ ಎಂದರೆ ಕೆಲವರು ದೋಷಕಾರಕ ಎನ್ನುತ್ತಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಈ ಸಂಖ್ಯೆ ಅನೇಕ ವರ್ಷ ತಳುಕುಹಾಕಿಕೊಂಡಿತ್ತು.
ಬಾಜಪೇಯಿ ಜನಿಸಿದ್ದು ಡಿಸೆಂಬರ್ 25 ರಂದು. 25-12(ಡಿಸೆಂಬರ್) ಮಾಡಿದರೆ ಫಲಿತಾಂಶ 13 ಬರುತ್ತದೆ. ಅದೇ ರೀತಿ ವಾಜಪೇಯಿ ಜನಿಸಿದ್ದು 1924ರಲ್ಲಿ, ನಿಧನರಾಗಿದ್ದು 2018ರಲ್ಲಿ. ಈ ಎರಡೂ ಸಂಖ್ಯೆಗಳನ್ನು ಕಳೆದರೆ (2018-1924) ಉತ್ತರ 94 ಬರುತ್ತದೆ. ಈ ಎರಡೂ ಸಂಖ್ಯೆಯನ್ನು ಕೂಡಿಸಿದರೆ ಫಲಿತಾಂಶ 13 ಬರುತ್ತದೆ. ಈ ರೀತಿ ಸಂಖ್ಯಾ ಶಾಸ್ತ್ರದ ಲೆಕ್ಕಾಚಾರ ಒಂದೆಡೆಯಾದರೆ ರಾಜಕಾರಣದಲ್ಲೂ ಇದೇ ಸಂಖ್ಯೆಗಳು ಎದುರಾಗಿದ್ದವು.
ಅಟಲ್ ಬಿಹಾರಿ ವಾಜಪೇಯಿ ಮೊದಲ ಬಾರಿಗೆ ಪ್ರಧಾನಿಯಾಗಿ 1996ರ ಮೇ 13ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಬಹುಮತ ಸಾಬೀತುಪಡಿಸಲಾಗದೆ ಈ ಸರ್ಕಾರ 13 ದಿನದಲ್ಲಿ ಉರುಳಿಬಿದ್ದಿತ್ತು. ಎರಡನೇ ಬಾರಿಗೆ ಪ್ರಧಾನಿಯಾದ ವಾಜಪೇಯಿ 13 ತಿಂಗಳು ಅಧಿಕಾರ ನಡೆಸಿದರು, ಆ ಸರ್ಕಾರವೂ ಕುಸಿಯಿತು. ಮೂರನೇ ಬಾರಿ ವಾಜಪೇಯಿ ಪ್ರಧಾನಿಯಾದಾಗ 13 ಪಕ್ಷಗಳ ಮೈತ್ರಿ ಸರ್ಕಾರ ರಚಿಸಿದರು ಹಾಗೂ 1999ರ ಅಕ್ಟೋಬರ್ 13ರಂದು ಪ್ರಮಾಣವಚನ ಸ್ವೀಕರಿಸಿದರು. ಇದೇ 13 ಸಂಖ್ಯೆಯ ಬೆನ್ನುಬಿದ್ದ ವಾಜಪೇಯಿ 2004 ಲೋಕಸಭೆ ಚುನಾವಣೆಗೆ ಏಪ್ರಿಲ್ 13ರಂದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿತು.
ಈ ಸಂಖ್ಯೆ ಬಿಜೆಪಿಗೆ ಅಷ್ಟೇನೂ ಶುಭವಲ್ಲ ಎನ್ನುವುದು ಮುಂದಿನ ದಿನಗಳಲ್ಲೂ ಸಾಬೀತಾಗುತ್ತಾ ಬಂದಿದೆ. 2004ರ ಅಕ್ಟೋಬರ್ 13ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡಲಾಗಿತ್ತು. ಅದೇ ವರ್ಷ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿ, ಹೇಗಾದರೂ ಮಾಡಿ ದಿನಾಂಕವನ್ನು ಬದಲಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮೊರೆಯಿಟ್ಟಿತ್ತು. ಅಕ್ಟೋಬರ್ 13ರಂದು ಸರ್ವ ಪಿತೃ ಅಮಾವಾಸ್ಯೆಯಿದ್ದು, ಅಂದು ಮಹಾರಾಷ್ಟ್ರದ ಬಹಳಷ್ಟು ಜನರು ತಮ್ಮ ಪೂರ್ವಜರಿಗೆ ಪಿತೃ ತರ್ಪಣೆ ಮಾಡುತ್ತಾರೆ, ಹಾಗಾಗಿ ದಿನಾಂಕ ಬದಲಾಯಿಸಿ ಎಂದು ಕೋರಿತ್ತು. ಆದರೆ ದಿನಾಂಕ ಬದಲಾಗಲಿಲ್ಲ. ಈ ಚುನಾವಣೆಯಲ್ಲಿ, ಕಾಂಗ್ರೆಸ್ ಜತೆ ಮೈತ್ರಿ ಮಡಿಕೊಂಡಿದ್ದ ಎನ್‌ಸಿಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿ-ಶಿವಸೇನೆ ಮೈತ್ರಿಗೆ ಸೋಲಾಗಿತ್ತು.
ಇತ್ತೀಚೆಗೆ ತ್ರಿಪುರಾದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದೆ. ಆದರೆ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ತಿಪ್ರ ಮೋರ್ಚಾ ಪಕ್ಷವು 13 ಸ್ಥಾನ ಗೆಲ್ಲುವುದರೊಂದಿಗೆ ಅಧಿಕೃತ ಪ್ರತಿಪಕ್ಷವಾಗಿದೆ.
ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಖ್ಯೆ 13 ಒಳ್ಳೆಯದು ಎನ್ನುವ ಲೆಕ್ಕಾಚಾರವಿದೆ. 2014ರಲ್ಲಿ ಬಿಜೆಪಿ 283 ಸ್ಥಾನ ಗಳಿಸಿತು. ಮೂರೂ ಸಂಖ್ಯೆಯನ್ನು ಕೂಡಿದರೆ (2+8+3) 13 ಉತ್ತರ ಲಭಿಸುತ್ತದೆ. ಅದೇ ರೀತಿ ಎನ್‌ಡಿಎ ಒಟ್ಟು ಸಂಖ್ಯೆ 337 ಕೂಡಿದರೆ, ಯುಪಿಎ ಗಳಿಸಿದ 58 ಸೀಟು ಕೂಡಿದರೂ 13 ಉತ್ತರ ಲಭಿಸುತ್ತದೆ. ಪ್ರಧಾನಿ ಮೋದಿಯವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲು 2013ರ ಸೆಪ್ಟೆಂಬರ್ 13ನ್ನು ಆಯ್ಕೆ ಮಾಡಲಾಗಿತ್ತು. ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಡಿಸೆಂಬರ್ 13ನ್ನು ಆಯ್ಕೆ ಮಾಡಲಾಗಿತ್ತು. ಹೀಗೆ ಬಿಜೆಪಿಗೆ 13 ಸಂಖ್ಯೆ ಎನ್ನುವುದು ಕೆಲವು ಬಾರಿ ಒಳಿತಾಗಿ, ಕೆಲವು ಬಾರಿ ಕೆಡುಕಾಗಿ ಪರಿಣಮಿಸಿದೆ. ಈ ಬಾರಿ ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶ ಮೇ 13ಕ್ಕೆ ಹೊರಬರಲಿದ್ದು, ಏನಾಗುತ್ತದೆ ಎನ್ನುವುದು ಕಾದುನೋಡಬೇಕಿದೆ.
ಇತರರಿಗೂ 13 ಸಂಖ್ಯೆ ಪ್ರೀತಿ
ಬಿಜೆಪಿಗಷ್ಟೆ ಅಲ್ಲದೆ ದೇಶದ ಇತರೆ ರಾಜಕಾರಣಿಗಳಿಗೂ ಸಂಖ್ಯೆ 13ರ ಜತೆಗೆ ನಂಟಿದೆ. ಶಿವಸೇನೆಯ ಪ್ರಮುಖ ಬಾಳಸಾಹೇಬ್ ಠಾಕ್ರೆ ಅವರಿಗೆ ಸಂಖ್ಯೆ 13 ಅಚ್ಚುಮೆಚ್ಚು. ಬಾಳಾ ಸಾಹೇಬ್ ಠಾಕ್ರೆ ಜನಿಸಿದ್ದು 1948ರ ಜೂನ್ 13 ರಂದು. ಅವರು ತಮ್ಮ ಕಾರ್ಟೂನ್ ವಾರಪತ್ರಿಕೆ ಮಾರ್ಮಿಕ್ ಅನ್ನು ಆರಂಭಿಸಿದ್ದು 1960ರ ಆಗಸ್ಟ್ 13ರಂದು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಇದಕ್ಕೂ ಮೊದಲು ಅವರು ತಾಲ್ಕಟೋರ ರಸ್ತೆಯಲ್ಲಿರುವ 13ನೇ ಸಂಖ್ಯೆ ಮನೆಯಲ್ಲಿ ವಾಸವಿದ್ದರು. ಈ ಬಗ್ಗೆ ಒಮ್ಮೆ ಪ್ರತಿಕ್ರಿಯಿಸಿದ್ದ ಪ್ರಣಬ್ ಮುಖರ್ಜಿ, 13ನೇ ಸಂಖ್ಯೆಯ ಮನೆಗೆ ಮೊದಲು ಆಗಮಿಸುವ ವೇಳೆ ಅನೇಕರು ಎಚ್ಚರಿಕೆ ನೀಡಿದ್ದರು. 13 ಒಳ್ಳೆಯ ಸಂಖ್ಯೆ ಎಲ್ಲ ಎಂದಿದ್ದರು ಎಂದು ತಿಳಿಸಿದ್ದರು. ಆದರೆ ಆ ಮನೆಗೆ ಆಗಮಿಸಿದ ನಂತರ ಮುಖರ್ಜಿ, ದೇಶದ ರಾಜಕಾರಣದಲ್ಲಿ ಎತ್ತರಕ್ಕೆ ಏರುತ್ತಲೇ ಸಾಗಿದರು. ಮುಖರ್ಜಿ ಅವರು ಸಂಸತ್ ಭವನದಲ್ಲಿ ಹೊಂದಿದ್ದ ಕಚೇರಿ ಸಂಖ್ಯೆಯೂ 13. ಮುಖರ್ಜಿ ಮದುವೆಯಾಗಿದ್ದು 1957ರ ಜುಲೈ 13ರಂದು. ಯುಪಿಎ ಸರ್ಕಾರದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಪ್ರಣಬ್ ಮುಖರ್ಜಿ ಹೆಸರು ಅಧಿಕೃತವಾಗಿ ಘೋಷಣೆಯಾಗಿದ್ದು ಜೂನ್ 15 ಆದರೂ, ಈ ಕುರಿತ ಸುದ್ದಿ ಮೊದಲಿಗೆ ಚರ್ಚೆಗೆ ಬಂದಿದ್ದು ಜೂನ್ 13ರಂದು.
ಇದನ್ನೂ ಓದಿ: Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ