Site icon Vistara News

Karnataka Election: ಬೆಂಗಳೂರಿನಲ್ಲಿ ʼಸ್ನೇಹ ಮಿಲನʼಗಳ ಭರಾಟೆ: ಮತಬೇಟೆಗೆ ಮುಂದಾದ ಅನ್ಯ ಜಿಲ್ಲೆಗಳ BJP ಶಾಸಕರು

karnataka election other district MLAs conducting campaign in Bengaluru

#image_title

ರಮೇಶ ದೊಡ್ಡಪುರ, ಬೆಂಗಳೂರು
ವಿಧಾನಸಭೆ ಚುನಾವಣೆಯಲ್ಲಿ ಮತಗಳನ್ನು ಗಳಿಸಲು ಅವರವರ ಕ್ಷೇತ್ರಗಳಲ್ಲಿ ಮತ ಯಾಚನೆ ಸಾಮಾನ್ಯ. ಅಲ್ಲಿನ ಎಲ್ಲ ಜನರನ್ನೂ ತಲುಪಿ ಮತ ಸೆಳೆಯಲು ವಿವಿಧ ಆಮಿಷಗಳನ್ನೂ ಒಡ್ಡಲಾಗುತ್ತದೆ. ಆದರೆ ಇದೀಗ ರಾಜ್ಯದ ವಿವಿಧೆಡೆಯ ಶಾಸಕರು ಬೆಂಗಳೂರಿನಲ್ಲಿ ಮತಬೇಟೆಗೆ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆ, ತಾಲೂಕಿನ ಜನರೂ ಇದ್ದಾರೆ. ಕೆಲವರು ಇಲ್ಲಿಯೇ ನೆಲೆ ಕಂಡುಕೊಂಡಿದ್ದರೆ, ಬಹಳಷ್ಟು ಜನರು ಸದ್ಯದ ಕೆಲಸಕ್ಕಾಗಿ ತಾತ್ಕಾಲಿಕವಾಗಿ ವಾಸವಿದ್ದಾರೆ. ಇವರೆಲ್ಲರ ಮತಗಳು ಇನ್ನೂ ತಮ್ಮ ಊರಿನ ಮತಗಟ್ಟೆಯಲ್ಲೇ ಇವೆ. ಅವುಗಳನ್ನು ಸೆಳೆಯಬೇಕೆಂದು ಇದೀಗ ಶಾಸಕರು ಬೆಂಗಳೂರಿನಲ್ಲೇ ಕೌಟುಂಬಿಕ, ಮನರಂಜನಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕಾರ್ಯಕ್ರಮ ನಡೆಸುತ್ತಿರುವುದು ರಾಜಕೀಯಕ್ಕಾದರೂ ಸ್ನೇಹ ಮಿಲನ, ಸ್ನೇಹ ಸಮ್ಮಿಲನ ಎಂಬಂತಹ ಹೆಸರನ್ನು ಇರಿಸಲಾಗುತ್ತಿದೆ.

ಕಳೆದ ವರ್ಷದಿಂದಲೇ ಈ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ನಡೆಯುತ್ತಿವೆ. 2022ರ ಸೆಪ್ಟೆಂಬರ್‌ನಲ್ಲಿ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅರಮನೆ ಮೈದಾನದಲ್ಲಿ ʼಸ್ನೇಹ ಮಿಲನʼ ಕಾರ್ಯಕ್ರಮ ಆಯೋಜಿಸಿದ್ದರು. ಕುಟುಂಬ ಸದಸ್ಯರೊಂದಿಗೆ ಇಡೀ ದಿನ ಕಳೆಯುವ ಕಾರ್ಯಕ್ರಮದಲ್ಲಿ ಮನರಂಜನೆ, ಕ್ರೀಡೆಗಳು, ಪ್ರತಿಭಾ ಪ್ರದರ್ಶನಗಳಿಗೆ ಅವಕಾಶ ನೀಡಲಾಗಿತ್ತು. ಬಹುತೇಕ ಇದೇ ಮಾದರಿಯನ್ನು ಇತರೆ ಎಲ್ಲ ಶಾಸಕರೂ ಅನುಸರಿಸಿದ್ದಾರೆ.

  1. ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅರಮನೆ ಮೈದಾನದಲ್ಲಿ 2022ರ ಸೆಪ್ಟೆಂಬರ್‌ 18ರಂದು ಸ್ನೇಹಮಿಲನ ನಡೆಸಿದ್ದರು.
  2. ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಜನವರಿ 8ರಂದು ಸ್ನೇಹ ಸಮ್ಮಿಲನ ಆಯೋಜಿಸಿದ್ದರು
  3. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 15ರಂದು ಕಾರ್ಯಕ್ರಮ ಆಯೋಜಿಸಿದ್ದರು.
  4. ತೀರ್ಥಹಳ್ಳಿ ಶಾಸಕ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಜಯನಗರದಲ್ಲಿರುವ ಎಬಿವಿಪಿ ಕಚೇರಿಯ ಕಟ್ಟಡದಲ್ಲಿ ಫೆಬ್ರವರಿ 24ರಂದು ಸ್ನೇಹ ಸಮ್ಮಿಲನ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಕಂದಾಯ ಸಚಿವ ಆರ್‌. ಅಶೋಕ್‌ ಭಾಗವಹಿಸಿದ್ದರು.
  5. ಶೃಂಗೇರಿ ಮಾಜಿ ಶಾಸಕ ಹಾಗೂ ಈ ಬಾರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಡಿ.ಎನ್‌. ಜೀವರಾಜ್‌ ಅವರು ಜ್ಞಾನಜ್ಯೋತಿ ಸಭಾಂಗಣದಲ್ಲಿ ಫ್ರಬ್ರವರಿ 26ರಂದು ಸ್ನೇಹ ಮಿಲನ ನಡೆಸಿದ್ದರು.
  6. ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಮಾರ್ಚ್‌ 4ರಂದು ವಿಜಯನಗರದ ಬಂಟರ ಭವನದಲ್ಲಿ ಮೂಲ್ಕಿ ಮತ್ತು ಮೂಡಬಿದಿರೆ ಮೂಲದ ಜನರಿಗೆ ಕಾರ್ಯಕ್ರಮ ನಡೆಸಿದರು.
  7. ಬಂಟ್ವಾಳ ಶಾಸಕ ರಾಜೇಶ್‌ ನಾಯಕ್‌ ಅವರು ಜಯಮಹಲ್‌ ಪ್ಯಾಲೇಸ್‌ನಲ್ಲಿ ಮಾರ್ಚ್‌ 5ರಂದು ಸ್ನೇಹ ಸಂಗಮ ಕಾರ್ಯಕ್ರಮ ನಡೆಸಿದ್ದರು.

ಇದರಲ್ಲಿ ಎಲ್ಲರೂ ಬಿಜೆಪಿ ಶಾಸಕರೆ. ಬೇರೆ ಪಕ್ಷದ ಶಾಸಕರೂ ಅಲ್ಲಲ್ಲಿ ಕಾರ್ಯಕ್ರಮ ನಡೆಸಿದ್ದಾರಾದರೂ ಬಿಜೆಪಿ ಶಾಸಕರದ್ದೇ ಮೇಲುಗೈ.

  1. ಬೆಂಗಳೂರಿನಲ್ಲಿ ನೆಲೆಸಿರುವ ನಾಗಮಂಗಲ ಮತದಾರರನ್ನು ಸೆಳೆಯಲು ಜೆಡಿಎಸ್‌ ಶಾಸಕ ಸುರೇಶ್‌ ಗೌಡ ಅವರು ಮಾರ್ಚ್‌ 5ರಂದು ಪ್ರತಿಜ್ಞಾ ಸಮಾವೇಶ ಆಯೋಜಿಸಿ ಎಚ್‌.ಡಿ. ಕುಮಾರಸ್ವಾಮಿಯವರನ್ನು ಆಹ್ವಾನಿಸಿದ್ದರು.
  2. ಅದೇ ದಿನ ನಾಗಮಂಗಲದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಹಾಗೂ ಮಾಜಿ ಶಾಸಕ ಚೆಲುವರಾಯಸ್ವಾಮಿ ಬೆಂಗಳೂರಿನ ನಂದಿ ಲಿಂಕ್‌ ಗ್ರೌಂಡ್‌ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.

ಬೆಂಗಳೂರಿನಲ್ಲಿ ನೆಲೆಸಿರುವ ಮತದಾರರನ್ನು ತಮ್ಮತ್ತ ಸೆಳೆದು ಚುನಾವಣೆ ಸಮಯದಲ್ಲಿ ಊರಿಗೆ ಆಗಮಿಸಿ ಮತ ಚಲಾಯಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶ. ಅನೇಕ ಸಂದರ್ಭದಲ್ಲಿ ಕೆಲವೇ ನೂರು ಮತಗಳಿಂದ ಜಯಗಳಿಸಿದ, ಸೋತ ಉದಾಹರಣೆಗಳಿವೆ. ಹಾಗಾಗಿ ಪ್ರತಿ ಮತವೂ ಮುಖ್ಯವಾದದ್ದು. ಇತ್ತೀಚೆಗೆ ಮೃತಪಟ್ಟ ಕಾಂಗ್ರೆಸ್‌ ನಾಯಕ ಧ್ರುವ ನಾರಾಯಣ ಅವರು ಈ ಹಿಂದೆ ಕೇವಲ ಒಂದು ಮತದ ಅಂತರದಲ್ಲಿ ಜಯಗಳಿಸಿದ್ದರು.

ಮೊದಲನೆಯದು ನೇರವಾಗಿ ಮತ ಸೆಳೆಯುವುದು ಒಂದಾದರೆ, ಬೆಂಗಳೂರಿನಲ್ಲಿರುವವರಿಂದ ಕ್ಷೇತ್ರದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವ ಪ್ರಯತ್ನವೂ ಇದಕ್ಕೆ ಕಾರಣ. ಬೆಂಗಳೂರಿನಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಿದರೆ ಅದರ ಸುದ್ದಿ ಸ್ಥಳೀಯವಾಗಿ ಪ್ರಕಟವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕಾರ್ಯಕ್ರಮಗಳ ಫೋಟೊಗಳು, ವಿಡಿಯೋ ಹರಿದಾಡುತ್ತದೆ. ಶಾಸಕರು ತಮ್ಮನ್ನು ಆಥ್ಮೀಯವಾಗಿ ಮಾತನಾಡಿಸಿದ ಫೋಟೊಗಳನ್ನು ಕ್ಷೇತ್ರದಲ್ಲಿನ ಸ್ನೇಹಿತರು, ಕುಟುಂಬದವರಿಗೆ ಹಂಚುತ್ತಾರೆ. ಇದರಿಂದ ಶಾಸಕರ ಕುರಿತು ಜನರಲ್ಲಿ ಮೃದು ಭಾವನೆ ಮೂಡುತ್ತದೆ. ಬೆಂಗಳೂರಿನಲ್ಲಿರುವವರಿಗೆ ಕ್ಷೇತ್ರದಲ್ಲಿ ಮತ ಇಲ್ಲದಿದ್ದರೂ ಅವರು ತಮ್ಮ ಸ್ನೇಹಿತರು ಹಾಗೂ ಕುಟುಂಬದವರ ಮೇಲೆ ಪ್ರಭಾವ ಬೀರಿ ಮತ ಹಾಕಿಸಬಹುದು ಎಂಬ ಲೆಕ್ಕಾಚಾರವೂ ಇದರ ಹಿಂದಿದೆ.

ಅನ್ಯ ರಾಜ್ಯಗಳ ಸಮಾವೇಶ

ಅನ್ಯ ಜಿಲ್ಲೆಗಳ ಮತಗಳನ್ನು ಸೆಳೆಯುವುದು ಒಂದೆಡೆಯಾದರೆ, ಬೆಂಗಳೂರಿನಲ್ಲಿ ನೆಲೆಸಿರುವ ಅನ್ಯ ರಾಜ್ಯದ ಮತದಾರರಿಗೂ ಬಿಜೆಪಿ ಗಾಳ ಹಾಕಿದೆ. ಇಲ್ಲಿಯೇ ಅನೇಕ ತಲೆಮಾರುಗಳಿಂದ ನೆಲೆಸಿರುವ ರಾಜಸ್ಥಾನಿ, ಗುಜರಾತಿ, ಬಂಗಾಳಿ, ಬಿಹಾರಿ ಕುಟುಂಬಗಳು ಇಲ್ಲಿಯೇ ಮತದಾರರಾಗಿದ್ದಾರೆ. ಆದರೆ ತಂತಮ್ಮ ರಾಜ್ಯಗಳ ರಾಜಕಾರಣ, ಅಲ್ಲಿನ ರಾಜಕಾರಣಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಬೆಂಗಳೂರಿನಲ್ಲಿ ಉತ್ತರ ಭಾರತೀಯರ ಸಮುದಾಯವಾರು ಸಭೆಗಳನ್ನು ನಡೆಸುತ್ತಿರುವ ಬಿಜೆಪಿ, ಆಯಾ ರಾಜ್ಯದ ಬಿಜೆಪಿ ನಾಯಕರು, ಮುಖ್ಯಮಂತ್ರಿ, ಸಚಿವರು, ಕೇಂದ್ರ ಸಚಿವರನ್ನು ಆಹ್ವಾನಿಸಿ ಸಭೆ ನಡೆಸಲಾಗುತ್ತಿದೆ. ಕಡಿಮೆ ಸಂಖ್ಯೆಯಲ್ಲಿದ್ದರೂ ಈ ಮತಗಳನ್ನೂ ಬಿಡಬಾರದು ಎಂದು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ.

ಇದನ್ನೂ ಓದಿ: Farmers Suicide: 10 ವರ್ಷದಲ್ಲಿ 7,398 ರೈತರ ಆತ್ಮಹತ್ಯೆ; ದಿನಕ್ಕಿಬ್ಬರ ಸಾವು: ಮೂರೂ ಪಕ್ಷದ ಅವಧಿಯಲ್ಲಿ ನೀಗಲಿಲ್ಲ ಅನ್ನದಾತನ ಬವಣೆ

Exit mobile version