ಮೈಸೂರು: ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ (Bajarangadal ban) ಮಾಡುವ ಪ್ರಸ್ತಾಪ ಮಾಡಿದ್ದನ್ನು ಮೈಸೂರಿನ ಸಂಸದ ಪ್ರತಾಪ ಸಿಂಹ ಅವರು ಖಂಡಿಸಿದ್ದಾರೆ. ʻʻಶಿವ ಬೆಟ್ಟವನ್ನು ಯೇಸು ಬೆಟ್ಟವಾಗಿ ಪರಿವರ್ತನೆ ಮಾಡಿದ ಡಿ.ಕೆ.ಶಿವಕುಮಾರ್ ಮತ್ತು ಹನುಮಂತನ ಜನ್ಮ ದಿನವನ್ನು ಪ್ರಶ್ನೆ ಮಾಡಿದ್ದ ಸಿದ್ದರಾಮಯ್ಯ ಅವರಿಂದ ಏನು ನಿರೀಕ್ಷೆ ಸಾಧ್ಯ? ಭಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರ ನವರಂಗಿ ಆಟ ಜನರಿಗೆ ಗೊತ್ತುʼʼ ಎಂದು ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಸಾಮಾ ಬಿನ್ ಲಾಡೆನ್, ಮುಲ್ಲಾ ಉಮರ್ ನೇತೃತ್ವದಂಥ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ. ಘಜ್ನಿ ಮೊಹಮ್ಮದ್, ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಪಠ್ಯ ಬರುತ್ತದೆʼʼ ಎಂದು ಎಚ್ಚರಿಸಿದರು.
ʻʻಪಾಪ್ಯುಲರ್ ಫ್ರಂಟ್ ಆಫ್ ಒಂದು ಸತ್ತ ಹಾವು. ಈಗ ಪ್ರಣಾಳಿಕೆಯಲ್ಲಿ ಬ್ಯಾನ್ ಆಗಿರುವ ಪಿಎಫ್‌ಐ ಹೆಸರನ್ನು ಪ್ರಸ್ತಾಪಿಸಿರುವುದು ನೋಡಿದರೆ ಪಿಎಫ್ಐ ಬ್ಯಾನ್ ತೆಗೆದು ಬಜರಂಗ ದಳವನ್ನು ಬ್ಯಾನ್ ಮಾಡುವಂತೆ ಕಾಣುತ್ತದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನವರಂಗಿ ಆಟ ಆಡುತ್ತಾರೆʼʼ ಎಂದು ಹೇಳಿದರು.
ಬಜರಂಗಿ ಎತ್ತಿದ ಪರ್ವತದಡಿ ಬೀಳುತ್ತೀರಿ..
ʻʻಸೀತೆಯನ್ನು ಹುಡುಕಿ ಕೊಂಡು ಹೋದ ಬಜರಂಗಿ ರಾಮನಿಗಾಗಿ ಪರ್ವತವನ್ನೇ ಎತ್ತಿ ಕೊಂಡು ಬಂದ. ಕರ್ನಾಟಕದ ಬಜರಂಗಿಗಳು ಹಿಂದೂತ್ವಕ್ಕಾಗಿ ಗೋ ಮಾತೆಗಾಗಿ ಅದೇ ಪರ್ವತದಡಿ ಕಾಂಗ್ರೆಸ್ ಅನ್ನು ಹಾಕಿ ಹೊಸಗಿ ಹಾಕುತ್ತಾರೆ.
ಎಚ್ಚರಿಕೆಯಿಂದ ಮಾತನಾಡಿʼʼ ಎಂದು ಪ್ರತಾಪಸಿಂಹ ಎಚ್ಚರಿಸಿದರು.
ʻʻರಾಮನ ಮೇಲೆ, ಹನುಮಂತ ಮೇಲೆ ಯಾಕೆ ಕಾಂಗ್ರೆಸಿಗರಿಗೆ ಯಾಕೆ ಇಷ್ಟು ಕೋಪ? ರಾಮ, ಹನುಮಂತ ಈ ದೇಶದ ಅಸ್ಮಿತೆಯ ಪ್ರತೀಕʼʼ ಎಂದು ಹೇಳಿದರು ಪ್ರತಾಪಸಿಂಹ.
ʻʻಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರ್ಕಾರ ರಚನೆ ಆಗಲ್ಲ. ಬದಲಾಗಿ ತಾಲಿಬಾನ್ ಸರಕಾರ ರಚನೆ ಆಗುತ್ತದೆ. ರಾಜ್ಯದಲ್ಲಿ ಅಕ್ರಮವಾಗಿ ಮುಸ್ಲಿಮರಿಗೆ ಮೀಸಲಾತಿ ಕೊಡಲಾಗುತ್ತಿತ್ತು. ಅದನ್ನು ನಾವು ತೆಗೆದಿದ್ದೇವೆ. ಕಾಂಗ್ರೆಸಿಗರು ಐತಿಹಾಸಿಕ ಅನ್ಯಾಯ ಮಾಡಿದ್ದರು. ನಾವು ನ್ಯಾಯ ನೀಡಿದ್ದೇವೆʼʼ ಎಂದು ಪ್ರತಾಪಸಿಂಹ ಸಮರ್ಥಿಸಿದರು.
ಬಜರಂಗಿಗಳು ಹೋರಾಡಿದ್ದು ಧರ್ಮಕ್ಕಾಗಿ, ನ್ಯಾಯಕ್ಕಾಗಿ
ʻʻಬಜರಂಗ ದಳದವರು ಯಾವ ಅಪಹರಣ ಮಾಡಿದ್ದಾರೆ. ಯಾರನ್ನು ಕೊಲೆ ಮಾಡಿದ್ದಾರೆ. ಅಶಾಂತಿ ಕದಡುವ ಕೆಲಸ ಏನು ಮಾಡಿದ್ದಾರೆ?ʼʼ ಪಿಎಫ್‌ಐ, ಕೆಎಫ್ ಡಿ ಸಂಘಟನೆ ಮೇಲೆ ನೂರಾರು ಕ್ರಿಮಿನಲ್ ಕೇಸ್ ಇವೆ. ಅವರಿಗೂ ಇವರಿಗೂ ಯಾವ ಹೋಲಿಕೆʼʼ ಎಂದು ಪ್ರತಾಪ್‌ಸಿಂಹ ಕಿಡಿಕಾರಿದರು.
ʻʻಬಜರಂಗ ದಳದವರು ಗೋಮಾತೆ ರಕ್ಷಣೆಗಾಗಿ, ಹಿಂದುತ್ವದ ರಕ್ಷಣೆಗಾಗಿ, ಕರ್ನಾಟಕದ ಹಿತ ರಕ್ಷಣೆಗಾಗಿ ಹೋರಾಟ ಮಾಡಿದ್ದಾರೆʼʼ ಎಂದು ಹೇಳಿದ ಪ್ರತಾಪಸಿಂಹ ಅವರು, ʻʻತಾಲಿಬಾನ್ ಸರ್ಕಾರ ಬಂದರೆ ಹಿಂದೂ ಸಂಘಟನೆಗಳಿಗೆ ಮಾತ್ರವಲ್ಲ ಹಿಂದುಗಳಿಗೆ, ಹಿಂದೂತ್ವಕ್ಕೆ ಉಳಿಗಾಲ ಇರಲ್ಲ. ರಾಮನ ಆದರ್ಶ ಪಾಲಿಸುವ ಯಾರಿಗೂ ಉಳಿಗಾಲವಿಲ್ಲ.ʼʼ ಎಂದು ಹೇಳಿದರು.
ಇದನ್ನೂ ಓದಿ: Congress Manifesto : ವಿನಾಶಕಾಲೇ ವಿಪರೀತ ಬುದ್ಧಿ; ಬಜರಂಗ ದಳ ನಿಷೇಧ ಪ್ರಸ್ತಾಪಕ್ಕೆ ವಿಜಯೇಂದ್ರ ಖಂಡನೆ