ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಗೆ (Karnataka Election) ನಾನು ಕಾರ್ಕಳದಿಂದಲೇ ಸ್ಪರ್ಧೆ ಮಾಡುತ್ತೇನೆ. ಆದರೆ, ಯಾವುದೇ ಪಕ್ಷದಿಂದ ಅಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ ಎಂದು ಪ್ರಮೋದ್ ಮುತಾಲಿಕ್ ಅಧಿಕೃತ ಘೋಷಣೆ ಮಾಡಿದ್ದಾರೆ.
ಸಾವಿರಾರು ಕಾರ್ಯಕರ್ತರ ಒತ್ತಡದಿಂದ ನೋವಿನ ಧನಿಯಾಗಿ ಈ ಘೋಷಣೆ ಮಾಡುತ್ತಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಏಳೆಂಟು ಬಾರಿ ಕ್ಷೇತ್ರವನ್ನು ಸುತ್ತಾಡಿದ್ದೇನೆ. ಎಲ್ಲ ಕಡೆ ಜನರು ಬೆಂಬಲಿಸಿದ್ದಾರೆ. ಹೀಗಾಗಿ ನನ್ನ ಸ್ಪರ್ಧೆ ಖಚಿತ. ಇತ್ತೀಚಿನ ಬೆಳವಣಿಗೆಯಿಂದ ಹಿಂದುಗಳಿಗೆ ನೋವಾಗಿದೆ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದುತ್ವದ ಪರ ಹಾಗೂ ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ: Bus Service: ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಿಗೆ ನೌಕರರು; ಮಂಗಳವಾರ ಬಸ್ ಸಂಚಾರದಲ್ಲಿಲ್ಲ ವ್ಯತ್ಯಯ
ನಾನು ಬಿಜೆಪಿ ಅಥವಾ ಆ ಪಕ್ಷದ ಸಿದ್ಧಾಂತದ ವಿರೋಧಿ ಅಲ್ಲ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳು ಅವರ ಪಕ್ಷದ ತತ್ವ ಸಿದ್ಧಾಂತದ ವಿರುದ್ಧ ನನ್ನ ಹೋರಾಟ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ, ಅದು ಸುಳ್ಳು ಎಂದು ಹೇಳಿದ ಮುತಾಲಿಕ್, ಬಿಜೆಪಿ ಅಂದು ಮಾಡಿದ ಅವಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ. ಬಿಜೆಪಿಗೆ ಹಿಂದುತ್ವದ ಬಗ್ಗೆ ಪ್ರಾಮಾಣಿಕತೆ ಇದ್ದರೆ ನನಗೆ ಕಾರ್ಕಳದಲ್ಲಿ ಆ ಪಕ್ಷದವರು ಬೆಂಬಲ ಕೊಡಬೇಕು ಎಂದು ಆಗ್ರಹಿಸಿದರು.