ಬೆಳಗಾವಿ: ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಕೆ, ಪದವೀಧರರಿಗೆ ಮಾಸಿಕ 3 ಸಾವಿರ ರೂ. ನಿರುದ್ಯೋಗ ಭತ್ಯೆ, ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ಸೇರಿ ಹಲವು ಉಚಿತ ಭರವಸೆಗಳ ಗ್ಯಾರಂಟಿ ಮೂಲಕ ರಾಜ್ಯದ ಜನರ ಮತ (Congress Guarantee) ಸೆಳೆಯಲು ಮುಂದಾಗಿರುವ ಕಾಂಗ್ರೆಸ್ ಆರನೇ ಗ್ಯಾರಂಟಿ ಘೋಷಣೆ ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂ. ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ 5 ಸಾವಿರ ರೂ. ವೇತನ ನೀಡುವುದಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಘೋಷಿಸಿದ್ದಾರೆ. ಇದು ಕಾಂಗ್ರೆಸ್‌ನ ಆರನೇ ಗ್ಯಾರಂಟಿಯಾಗಿದೆ.
“ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಅಡುಗೆ ಕಾರ್ಯಕರ್ತರಿಗೆ ಪ್ರಿಯಾಂಕಾ ಗಾಂಧಿಯವರು ಇಂದು ಗೌರವ ಧನ ಹೆಚ್ಚಳದ ಕಾಂಗ್ರೆಸ್ ಗ್ಯಾರಂಟಿಯನ್ನು ಘೋಷಿಸಿದ್ದಾರೆ. ಇದು ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಗ್ಯಾರಂಟಿ” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಈಗ 11,500 ರೂ. ಗೌರವಧನ ಇದೆ. ಅದನ್ನು 15 ಸಾವಿರ ರೂ.ಗೆ ಏರಿಕೆ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಹಾಗೆಯೇ, 5 ಸಾವಿರ ರೂ. ಇರುವ ಆಶಾ ಕಾರ್ಯಕರ್ತೆಯರ ಗೌರವಧನವನ್ನು 8 ಸಾವಿರ ರೂ.ಗೆ, 7,500 ರೂ. ಇರುವ ಅಂಗನವಾಡಿ ಸಹಾಯಕಿಯರ ವೇತವನ್ನು 10 ಸಾವಿರ ರೂ.ಗೆ, 3,700 ರೂ. ಇರುವ ಬಿಸಿಯೂಟ ಅಡುಗೆ ಕಾರ್ಯಕರ್ತೆಯರ ವೇತನವನ್ನು 5 ಸಾವಿರ ರೂ.ಗೆ ಏರಿಸುವುದು ಕಾಂಗ್ರೆಸ್‌ನ ಆರನೇ ಗ್ಯಾರಂಟಿಯಾಗಿದೆ.
ಕಾಂಗ್ರೆಸ್ ಘೋಷಿಸಿದ 6 ಗ್ಯಾರಂಟಿಗಳು
- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ಪೂರೈಕೆ
- ಗೃಹ ಲಕ್ಷ್ಮೀ ಯೋಜನೆ ಅಡಿಯಲ್ಲಿ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ
- ಬಡ ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ 10 ಕೆ.ಜಿ ಅಕ್ಕಿ ಉಚಿತ ವಿತರಣೆ
- ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಸಹಾಯಧನ
- ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರ
- ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳ
ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಗ್ಯಾರಂಟಿ ಬೋಗಸ್; ಅವರ ಭರವಸೆ ಈಡೇರಿಸಿದ್ದು ಬಿಜೆಪಿ ಎಂದ ಮೋದಿ