ಬೆಳಗಾವಿ: ಖಾನಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ (Karnataka Election) ನಡೆಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಕರ್ನಾಟಕದಲ್ಲಿ ಲೂಟಿಕೋರ ಸರ್ಕಾರ ಇದೆ. ಎಲ್ಲ ಆಯಾಮಗಳಲ್ಲಿಯೂ ಬಿಜೆಪಿ ಸರ್ಕಾರ ಜನರಿಗೆ ಮೋಸ ಮಾಡಿದೆ. ಹಾಗಾಗಿ, ಲೂಟಿಕೋರ ಬಿಜೆಪಿಯನ್ನು ಸೋಲಿಸಿ, ಪ್ರಾಮಾಣಿಕವಾಗಿರುವ ಕಾಂಗ್ರೆಸ್‌ಅನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು.
“ಸರ್ಕಾರದಲ್ಲಿ ಎರಡೂವರೆ ಲಕ್ಷ ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ನೋಟ್‌ಬ್ಯಾನ್, ಜಿಎಸ್‌ಟಿಯಿಂದ ಸಣ್ಣ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ನೀವು ಪ್ರಾಮಾಣಿಕತೆಯಿಂದ ದುಡಿಯುವಾಗ ಸರ್ಕಾರವೂ ಪ್ರಾಮಾಣಿಕ ಆಗಿರಬೇಕು ಎಂದು ನೀವು ಬಯಸುತ್ತೀರಿ ಅಲ್ಲವೇ? ಬಿಜೆಪಿ ಸರ್ಕಾರ ಕರ್ನಾಟಕದಿಂದ 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ. ಇದು ಲೂಟಿ ಮಾಡುವ ಹಾಗೂ ಸುಳ್ಳು ಹೇಳುವ ಸರ್ಕಾರ” ಎಂದು ಟೀಕಿಸಿದರು.
ಖಾನಾಪುರದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ
1.5ಲಕ್ಷ ಕೋಟಿ ರೂಪಾಯಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯ ಆಗುತ್ತಿತ್ತು ಯೋಚನೆ ಮಾಡಿ. ಈ ಹಣದಲ್ಲಿ 100 ಏಮ್ಸ್ ಆಸ್ಪತ್ರೆ ನಿರ್ಮಾಣ ಆಗುತ್ತಿತ್ತು. 2,250 ಕಿಮೀ ಆರು ಪಥದ ಎಕ್ಸ್‌ಪ್ರೆಸ್ ವೇ ಆಗುತ್ತಿತ್ತು. ನೂರಕ್ಕೂ ಹೆಚ್ಚು ಇಎಸ್ಐ ಆಸ್ಪತ್ರೆ ನಿರ್ಮಿಸಬಹುದಿತ್ತು. 30 ಸಾವಿರ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಬಹುದಿತ್ತು. ಇವರು ಲೂಟಿ ಮಾಡಿದ ಹಣದಿಂದ 30 ಲಕ್ಷ ಮನೆ ನಿರ್ಮಿಸಬಹುದಿತ್ತು. ಭ್ರಷ್ಟಾಚಾರ ಎಸಗಿ ಲೂಟಿ ಮಾಡಿದರು. ಆದರೆ, ರೈತರ ಮೇಲೂ ಜಿಎಸ್‌ಟಿ ಹೇರಿದರು” ಎಂದು ದೂರಿದರು.
ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಭಾಷಣ
“ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದರು. ಕೇಂದ್ರದಲ್ಲಿ ಇವರದ್ದೇ ಸರ್ಕಾರ ಇದೆ. ಆದರೆ, ಮಾರ್ಚ್ 14ರಂದು ಮೋದಿ ಸರ್ಕಾರ ಲೋಕಸಭೆಯಲ್ಲಿ ಇದು ಸಾಧ್ಯವಿಲ್ಲ ಎಂದಿತು. ನಾಗಮೋಹನದಾಸ್ ಸಮಿತಿ ರಚಿಸಿದ್ದು ಕಾಂಗ್ರೆಸ್ ಸರ್ಕಾರ. ಆ ಸಮಿತಿ ಎಸ್‌ಸಿಗೆ 15 ರಿಂದ 17 ಪರ್ಸೆಂಟ್, ಎಸ್‌ಟಿಗೆ 3 ರಿಂದ 7 ಪರ್ಸೆಂಟ್ ಹೆಚ್ಚಳ ಮಾಡಲು ತಿಳಿಸಿತ್ತು. ನಾಲ್ಕು ವರ್ಷಗಳ ಹಿಂದೆ ನಾಗಮೋಹನದಾಸ್ ಸಮಿತಿ ಇದನ್ನು ತಿಳಿಸಿತ್ತು. ಆದರೆ, ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಇದ್ದರೂ ಏನು ಮಾಡಲಿಲ್ಲ” ಎಂದು ಟೀಕಿಸಿದರು.
ರಾಜಸ್ಥಾನ, ಛತ್ತೀಸ್‌ಗಢದಲ್ಲಿ ನಮ್ಮ ಸರ್ಕಾರವು ರೈತರ ಸಾಲ ಮನ್ನಾ ಮಾಡಿದೆ. ನಮ್ಮ ಸರ್ಕಾರ ಇರುವ ರಾಜ್ಯಗಳಲ್ಲಿ ನೀಡಿದ ಭರವಸೆ ಈಡೇರಿಸಿದ್ದೇವೆ. ಅನ್ನ ಭಾಗ್ಯ, ಕ್ಷೀರಭಾಗ್ಯ, ಪಶು ಭಾಗ್ಯ, ಕೃಷಿ ಭಾಗ್ಯ, ಆರೋಗ್ಯ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸೇರಿ ಎಲ್ಲ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿದೆ. ನೀವು ಇಂದಿರಾ ಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕೆಲಸ ನೋಡಿದ್ದೀರಿ. ಹೀಗಾಗಿ ನಿಮಗೆ ನಮ್ಮ ಮೇಲೆ ವಿಶ್ವಾಸ ಇದೆ. ನಾವು ನಿಮಗಾಗಿ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.
ಇದನ್ನೂ ಓದಿ: Karnataka election 2023: ರಾಹುಲ್, ಪ್ರಿಯಾಂಕಾ ಕಾಲಿಟ್ಟಲೆಲ್ಲಾ ಬಿಜೆಪಿಗೆ ಶುಭ ಸಂಕೇತ: ಬಿ. ಶ್ರೀರಾಮುಲು